ಬೆಂಗಳೂರು : ಅಧಿಕಾರಕ್ಕೆ ಬಂದ ಕೆಲವೇ ಘಂಟೆಗಳಲ್ಲಿ ಐದು ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಹೇಳಿದ್ದ (CM Siddaramaiah big announcement) ಕಾಂಗ್ರೆಸ್ ಸರಕಾರ ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಸ್ಪಷ್ಟ ಚಿತ್ರಣ ನೀಡುವುದಾಗಿಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಸಿಎಂ ಸಿದ್ದರಾಮಯ್ಯ (CM Siddaramaiah) ಸಚಿವ ಸಂಪುಟ ಸಭೆ ನಡೆಸಿದ್ರು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಸಚಿವ ಸಂಪುಟ ಸಭೆ ನಂತರ ಪಂಚ ಯೋಜನೆಗಳ ಜಾರಿ ಮಾಡಲಾಗುವುದು. ಸೋಮವಾರ, ಮಂಗಳವಾರ, ಬುಧವಾರ ವಿಧಾನಸಭೆ ಅಧಿವೇಶನ ಕರೆಯುತ್ತಿದ್ದೇವೆ, ಅಧಿವೇಶದಲ್ಲಿ ಹೊಸ ಸಭಾಪತಿಯನ್ನು ಆಯ್ಕೆ ಮಾಡಲಾಗುವುದು. ಎಲ್ಲಾ ಗ್ಯಾರಂಟಿಗಳು ಒಂದು ವರ್ಷದ ಒಳಗಾಗಿ ಜಾರಿಗೆ ಬರಲಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ತೆರಿಗೆ ವಸೂಲಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಗ್ಯಾರಂಟಿಯನ್ನು ಜಾರಿಗೆ ತರಲಾಗುವುದು. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಈ ಯೋಜನೆಗೆ ತಿಂಗಳಿಗೆ ಸುಮಾರು 1200 ಕೋಟಿ ರೂಪಾಯಿ ವೆಚ್ಚವಾಗಲಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ತಿಂಗಳಿಗೆ ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ. ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಪ್ರೀ ಪಾಸ್ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ, ಪದವೀಧರ, ಪಿಎಚ್‌ಡಿ, ಎಂಬಿಬಿಎಸ್ ಪದವೀಧರರಿಗೆ ಎರಡೂ ವರೆ ವರ್ಷಗಳ ಕಾಲ 3000 ರೂಪಾಯಿ ನೀಡಲಾಗುತ್ತದೆ. ಅಲ್ಲದೇ ಡಿಪ್ಲೊಮಾ ಪದವೀಧರರಿಗೆ ಒಂದೂವರೆ ಸಾವಿರ ರೂಪಾಯಿ ನೀಡಲಾಗುತ್ತದೆ. ಆದರೆ ಹೊರ ರಾಜ್ಯಗಳ ಮಹಿಳೆಯರಿಗೆ ಈ ಸೌಲಭ್ಯ ದೊರೆಯುವುದಿಲ್ಲ. ಈ ಕುರಿತು ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸುಮಾರು 50 ಸಾವಿರ ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂಪಾಯಿ ಬರುತ್ತದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂಪಾಯಿ ತೆರಿಗೆ ಕಟ್ಟುತ್ತಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮಗೆ ಅನ್ಯಾಯವಾಗಲಿದೆ. ಕರ್ನಾಟಕ ಸರಕಾರ ನ್ಯಾಯಯುತವಾಗಿ ಸಿಗಬೇಕಾಗಿದ್ದ 5455 ಕೋಟಿ ರೂಪಾಯಿಯನ್ನು ಬಿಜೆಪಿ ರಾಜ್ಯ ಸರಕಾರ, ಸಂಸದರು ಕೇಳಿಲ್ಲ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ದೇಶದ 53 ಲಕ್ಷ 11 ಸಾವಿರ ಕೋಟಿ ರೂಪಾಯಿ ಸಾಲ ಮಾಡಿತ್ತು. ಇದೀಗ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ 9 ವರ್ಷಗಳಲ್ಲಿ 155 ಲಕ್ಷ ಕೋಟಿ ದಾಟಿದೆ. ಕರ್ನಾಟಕದಲ್ಲಿ ಬಸವರಾಜ್ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ 4 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ನಾನು ಐದು ವರ್ಷಗಳ ಕಾಲ ಆಡಳಿತ ಮಾಡಿದ್ದಾಗಲೂ ಇಷ್ಟೊಂದು ಸಾಲ ಮಾಡಿರಲಿಲ್ಲ. ಕರ್ನಾಟಕವನ್ನು ನಾವು ದಿವಾಳಿಗೆ ಸಿಲುಕಿಸದೇ ಗ್ಯಾರಂಟಿಯನ್ನು ಈಡೇರಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಆರಂಭ : ರಾಹುಲ್ ಗಾಂಧಿಯಿಂದ 5 ಗ್ಯಾರಂಟಿ ಘೋಷಣೆ
ಇಂದು ಮುಖ್ಯಮಂತ್ರಿಯಾಗಿ ನಾನು, ಡಿಕೆ ಶಿವಕುಮಾರ್, 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಇತರರ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು ಆಗಮಿಸಿದ್ದರು. ಬಿಜೆಪಿಯೇತರ ಪಕ್ಷಗಳ ಅಧ್ಯಕ್ಷರು ಬಂದು ಶುಭಕೋರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಶುಭ ಕೋರಿದ್ದಾರೆ. ನಾವು ಸಹ ರಾಜ್ಯದ ಜನರಿಗೆ ಧನ್ಯವಾದ ಸಲ್ಲಿಸಿದ್ದೇವೆ ಎಂದರು. ಕಾಂಗ್ರೆಸ್ ಸಚಿವ ಸಂಪುಟ ಸಭೆಯಲ್ಲಿ ನೂತನ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.
CM Siddaramaiah big announcement: 5 Guarantees of Congress Official Announcement: CM Siddaramaiah