ಬೆಂಗಳೂರು : ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದೆ ಈ ಹಿನ್ನೆಲೆಯಲ್ಲಿ ನಾಳೆಯಿಂದ 7 ಜಿಲ್ಲೆಗಳ 8 ನಗರದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟಿಸಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ಮಣಿಪಾಲ, ಬೀದರ್, ಕಲಬುರಗಿ ಹಾಗೂ ತುಮಕೂರಿನಲ್ಲಿ ಏ.10 ರಿಂದ 20ರ ವರೆಗೆ ಕೊರೊನಾ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ.

ಮಾರ್ಗಸೂಚಿಯನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಹಾಗಾದ್ರೆ ಯಾವುದಕ್ಕೆ ಅವಕಾಶ ನೀಡಲಾಗಿದೆ. ಯಾವ ಸೇವೆಗೆ ನಿರ್ಬಂಧ ಹೇರಲಾಗಿದೆ ಅನ್ನೊ ಮಾಹಿತಿ ಇಲ್ಲಿದೆ.

ಅನಾರೋಗ್ಯದಿಂದ ಬಳಲುವರರಿಗೆ, ಅವರ ಸಹಾಯಕರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು ಅಥವಾ ಕಂಪನಿಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸಲು ಅನುಮತಿಯನ್ನು ಕಲ್ಪಿಸ ಲಾಗಿದೆ. ಆದರೆ ನೌಕರರು ಹಾಗೂ ಕಾರ್ಮಿಕರು, ಕರ್ಫ್ಯೂ ಅವಧಿಗೆ ಮುನ್ನವೇ ಕೆಲಸದ ಸ್ಥಳದಲ್ಲಿ ಹಾಜರಿರ ತಕ್ಕದ್ದು.

ಇನ್ನು ವೈದ್ಯಕೀಯ ಮತ್ತು ತುರ್ತು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕ ಸೇವೆ ಒದಗಿಸುವ ವಾಹನಗಳು, ಸರಕು ಸಾಗಣೆ ವಾಹನಗಳು, ಹೋಂ ಡೆಲಿವರಿ ವಾಹನಗಳು, ಇ ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ. ಆದರೆ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಲಿದೆ.

ಜನರ ಅನುಕೂಲಕ್ಕಾಗಿ ಬಸ್ಸು, ರೈಲು, ವಿಮಾನಗಳ ದೂರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಬಸ್ ನಿಲ್ದಾಣ, ರೈಲು ನಿಕ್ದಾಣ, ವಿಮಾನ ನಿಲ್ದಾಣಗಳಿಗೆ ಹೋಗಲು ಅಧಿಕೃತ ಟಿಕೆಟ್‍ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.