ಬೆಂಗಳೂರು : ಕೊರೋನಾ ವೈರಸ್ ಸೋಂಕಿನ ಪಾಸಿಟಿವಿಟಿ ದರ ಇಳಿಕೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನ್ ಲಾಕ್ ಆದೇಶ ಜಾರಿ ಮಾಡಲಾಗಿದೆ. ಹೀಗಾಗಿ ಸಂಜೆ 5 ಗಂಟೆಯ ವರೆಗೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ..
ಕೊರೊನಾ ಸೋಂಕು ಇಳಿಕೆಯಾದ ಬೆನ್ನಲ್ಲೇ ರಾಜ್ಯ ಸರಕಾರ ದಕ್ಷಿಣ ಜಿಲ್ಲೆಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರು ಅನ್ ಲಾಕ್ ಆದೇಶ ಹೊರಡಿಸಿದ್ದಾರೆ. ದಿನಾಂಕ 30-06-2021ರವರೆಗೆ ಜಿಲ್ಲೆಗಳಲ್ಲಿನ ವಾರದ ಸರಾಸರಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ದರವನ್ನು ಮೌಲ್ಯಮಾಪನ ಮಾಡಿದ ನಂತರ, ನಿರಂತರವಾಗಿ ಪಾಸಿಟಿವಿಟಿ ದರವು ಇಳಿಕೆಯಾಗುತ್ತಿರುವುದನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಕೆಟಗರಿ-1 ಜಿಲ್ಲೆಗಳಡಿ ಸೇರ್ಪಡೆಗೊಳಿಸಿ ಆದೇಶಿಸಿದೆ.
ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ವ್ಯಾಪಾರ, ವಹಿವಾಟು, ಬಸ್ ಸಂಚಾರ ನಡೆಸಲು ಅವಕಾಶವನ್ನು ಕಲ್ಪಿಸಲಾಗಿದೆ. ಕೆಟಗರಿ-1ರ ಜಿಲ್ಲೆಗಳಿಗೆ ಅನುಮತಿಸಲಾದ ಎಲ್ಲಾ ಹೆಚ್ಚುವರಿ ಕಾರ್ಯಚಟುವಟಿಕೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ದಿನಾಂಕ 05-07-2021ರ ಬೆಳಿಗ್ಗೆ 5 ಗಂಟೆಯವರೆಗೆ ಅನ್ವಯವಾಗಲಿದೆ.