ಬೆಂಗಳೂರು : ಕೊರೊನಾ ಸಂಕಷ್ಟದ ನಡುವಲ್ಲೇ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಕೊಟ್ಟಿದೆ. ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ದರ ಹೆಚ್ಚಿಸಲು ಒಪ್ಪಿಗೆಯನ್ನು ನೀಡಿದೆ.
ರಾಜ್ಯದಲ್ಲಿ ವಿದ್ಯುತ್ ವಿತರಣೆ ಮಾಡುತ್ತಿರುವ ವಿವಿಧ ಕಂಪೆನಿಗಳು ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದ್ದವು. ಆದರೆ ವಿವಿಧ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಗ ದರ ಹೆಚ್ಚಳಕ್ಕೆ ಅನುಮತಿಯನ್ನು ನೀಡಿರಲಿಲ್ಲ. ಇದೀಗ ಏಕರೂಪದಲ್ಲಿ 30 ಪೈಸೆ ಹೆಚ್ಚಳ ಮಾಡುವುದಕ್ಕೆ ಸಮ್ಮತಿಯನ್ನು ನೀಡಿದೆ.
ವಿದ್ಯುತ್ ಸರಬರಾಜು ಕಂಪೆನಿಗಳು ಪ್ರತೀ ಯೂನಿಟ್ ಗೆ 83 ಪೈಸೆಯಿಂದ 1.68 ರೂ.ವರೆಗೆ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಇದೀಗ ಏಕರೂಪದಲ್ಲಿ 30 ಪೈಸೆ ಹೆಚ್ಚಳಕ್ಕೆ ಅನುಮತಿಯನ್ನು ನೀಡಿದೆ. ಇನ್ನು ಎಚ್ ಟಿ ಕೈಗಾರಿಕೆಗಳಿಗೆ ಬೆಳಗ್ಗೆ 6 ರಿಂದ 10 ಗಂಟೆಯ ಅವಧಿಯ ಬಳಕೆಗೆ ವಿಧಿಸುತ್ತಿದ್ದ 1 ರೂಪಾಯಿ ದಂಡವನ್ನು ವಾಪಾಸ್ ಪಡೆಯಲಾಗಿದೆ. ಅಲ್ಲದೇ ಗೃಹ ಬಳಕೆಯ ವಿದ್ಯುತ್ ಮೊದಲ ಸ್ಲಾಬ್ ನ್ನು 30 ಯೂನಿಟ್ ನಿಂದ 50 ಯೂನಿಟ್ ಗೆ ಹೆಚ್ಚಳ ಮಾಡಲಾಗಿದೆ.
ಪರಿಷ್ಕೃತ ದರಗಳು 2021ರ ಎಪ್ರಿಲ್ 1 ರಿಂದಲೇ ಜಾರಿಗೆ ಬರುತ್ತಿದ್ದು, ಎಪ್ರಿಲ್ ಮೇ ತಿಂಗಳ ಬಿಲ್ ಗೆ ಯಾವುದೇ ಬಡ್ಡಿಯನ್ನು ವಿಧಿಸದೆ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಗ್ರಾಹಕರಿಂದ ಬಾಕಿ ಹಣ ವಸೂಲಿ ಮಾಡಲು ಆಯೋಗ ಅವಕಾಶವನ್ನು ಕಲ್ಪಿಸಿದೆ.