ಶಿಕ್ಷಣ ಇಲಾಖೆಯ ಕಡ್ಡಾಯ ಹಾಜರಿ ಆದೇಶಕ್ಕೆ ಶಿಕ್ಷಕರು ಗರಂ : WORK FROM HOMEಗೆ ಶಿಕ್ಷಕರ ಮನವಿ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲೀಗ ಲಾಕ್ ಡೌನ್ ಜಾರಿಯಲ್ಲಿದೆ. ಸದ್ಯಕ್ಕೆ ಶಾಲೆ, ಕಾಲೇಜುಗಳನ್ನು ಆರಂಭಿಸದಿರಲು ಸರಕಾರ ನಿರ್ಧರಿಸಿದೆ. ಆದ್ರೆ ಜೂನ್ 15 ರಿಂದ ಶಿಕ್ಷಕರು ಶಾಲೆಗೆ ಹಾಜರಾಗಬೇಕೆಂಬ ಆದೇಶ ಹೊರಡಿಸುವ ಮೂಲಕ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿದ್ದು, ಇಲಾಖೆಯ ವಿರುದ್ದ ಶಿಕ್ಷಕರು ಗರಂ ಆಗಿದ್ದಾರೆ.

ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿದ್ದರೂ ಕೂಡ ರಾಜ್ಯದ 10 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಕಠಿಣ ನಿಯಮಗಳಿಂದಾಗಿ ಜನರು ಮನೆಯಿಂದ ಹೊರ ಬರುವಂತಿಲ್ಲ. ಜೊತೆಗೆ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ನೂರಾರು ಶಿಕ್ಷಕರು ಈ ಬಾರಿ ಕೊರೊನಾ ಸೋಂಕಿಗೆ ತುತ್ತಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಶಿಕ್ಷಕರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಈ ನಡುವಲ್ಲೇ ಶಿಕ್ಷಣ ಇಲಾಖೆ ಶಾಲಾರಂಭಕ್ಕೆ ಮುಂದಾಗಿದ್ದು, ಜುಲೈ 1ರಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಆರಂಭಿಸು ವಂತೆ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಶಿಕ್ಷಕರನ್ನು ಜೂನ್ 15 ರಿಂದ ಶಾಲೆ ಕಡ್ಡಾಯ ಹಾಜರಾಗಬೇಕೆಂಬ ಆದೇಶದ ಮೂಲಕ ಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಬೇಸಿಗೆ ರಜೆಯ ಅವಧಿಯಲ್ಲಿಯೂ ಶಿಕ್ಷಕರು ಕೊರೊನಾ ಕರ್ತವ್ಯಕ್ಕೆ ನಿಯೋಜನೆ ಮಾಡಿದೆ. ಕೊರೊನಾ ಸೋಂಕಿತರ ಸಂಪರ್ಕಿತರ ವಿವರ, ಚೆಕ್ ಪೋಸ್ಟ್ ಡ್ಯೂಟಿ, ಡೇಟಾ ಎಂಟ್ರಿ ವರ್ಕ್ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕಳೆದ ತಿಂಗಳಿನಿಂದಲೂ ಶಿಕ್ಷಕರು ಕೊರೊನಾ ಕಾರ್ಯಕ್ಕೆ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. 50 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಕೆಲವು ಮಹಿಳಾ ಶಿಕ್ಷಕರು ಮಾತ್ರವೇ ಕೊರೊನಾ ಕಾರ್ಯದಲ್ಲಿ ಭಾಗಿಯಾಗಿಲ್ಲ. ಇದೀಗ ಶಾಲಾರಂಭದ ಕಡ್ಡಾಯ ಆದೇಶದಿಂದ ಶಿಕ್ಷಕರು ಗೊಂದಲಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಮಕ್ಕಳು ಶಾಲೆಗೆ ಬಾರದೇ ಇದ್ರೂ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ಆದೇಶದಿಂದ ಕೊರೊನಾ ಕಾರ್ಯಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ತಬ್ದವಾಗಿದೆ. ಶಾಲೆಗಳು ಆರಂಭವಾಗದೇ ಇದ್ದರೂ ಕೂಡ ಶಿಕ್ಷಕರು ಮಾತ್ರ ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕೆಂಬ ಆದೇಶವನ್ನು ಅಧಿಕಾರಿಗಳು ಹೊರಡಿಸಿದ್ದಾರೆ. ಸಾರಿಗೆ ವ್ಯವಸ್ಥೆಯಿಲ್ಲದೇ ಶಾಲೆಗಳಿಗೆ ತೆರಳುವುದು ಕಷ್ಟಸಾಧ್ಯ. ಇನ್ನೊಂದೆಡೆ ಅಂತರ್ ಜಿಲ್ಲಾ ನಿರ್ಬಂಧವೂ ತೆರವಾಗಿಲ್ಲ. ಶಿಕ್ಷಕರು ಶಾಲೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಾದ್ರೆ 50 ವರ್ಷ ಮೀರಿದವರು, ಮಹಿಳೆಯರು, ಗರ್ಭಿಣಿ ಸ್ತ್ರೀಯರು ಸಾರಿಗೆ ಸೌಲಭ್ಯಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಕೊರೊನಾ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರಿಗೆ ಮಾತ್ರವೇ ಕೊರೊನಾ ಲಸಿಕೆ ನೀಡಲಾಗಿದೆ. ಅಲ್ಲದೇ 18 ವರ್ಷ ವಯೋಮಾನದ ಶಿಕ್ಷಕರಿಗೆ ಲಸಿಕೆಯನ್ನು ನೀಡಿಲ್ಲ. ಅಷ್ಟೆ ಅಲ್ಲಾ ಲಕ್ಷಾಂತರ ಸಂಖ್ಯೆಯಲ್ಲಿರುವ ಶಿಕ್ಷಕರು ಶಾಲೆಗಳಿಗೆ ಹಾಜರಾದ್ರೆ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುವ ಸಾಧ್ಯತೆಯಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ಲಾಕ್ ಡೌನ್ ಆದೇಶವನ್ನು ಸಂಪೂರ್ಣವಾಗಿ ತೆರವು ಮಾಡಿ, ರಾಜ್ಯದಲ್ಲಿ ಸಾರ್ವಜನಿಕವಾಗಿ ಬಸ್ ಸಂಚಾರ ಆರಂಭವಾಗುವವರೆಗೆ ಶಿಕ್ಷಕರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂಬ ಕೂಗು ಶಿಕ್ಷಕರಿಂದ ಕೇಳಿಬಂದಿದೆ. ಮಕ್ಕಳು ಶಾಲೆಗೆ ಬರುತ್ತಿಲ್ಲ, ಕೇವಲ ಶಾಲೆಗೆ ಹೋಗಿ ಕುಳಿತು ಬರುವ ಕಾರ್ಯವನ್ನು ಶಿಕ್ಷಕರಿಂದ ಮಾಡಿಸುವ ಬದಲು ಮನೆಯಿಂದಲೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ್ರೆ ಶಿಕ್ಷಕರು ಮಕ್ಕಳ ಜೊತೆ ಹೆಚ್ಚು ಸಕ್ರೀಯರಾಗಿ ಮುಂದಿನ ವರ್ಷದ ಸಿದ್ದತೆ ಮಾಡಲು ಸಾಧ್ಯವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕಳೆದ ಬಾರಿಯೂ ಶಿಕ್ಷಣ ಇಲಾಖೆ ವರ್ಷವಿಡೀ ಗೊಂದಲದ ಆದೇಶಗಳನ್ನು ಹೊರಡಿಸುವ ಮೂಲಕ ಶಿಕ್ಷಕರು, ಮಕ್ಕಳು ಹಾಗೂ ಪೋಷಕರನ್ನು ಆತಂಕಕ್ಕೆ ದೂಡಿತ್ತು. ಇದೀಗ ಈ ಬಾರಿಯೂ ಇಲಾಖೆ ಅದೇ ಹಾದಿಯಲ್ಲಿಯೇ ನಡೆಯುವಂತೆ ಕಾಣಿಸುತ್ತಿದೆ. ಶಿಕ್ಷಕರನ್ನು ಶಾಲೆಗೆ ಕರೆಯಿಸುವ ಮೂಲಕ ಶಿಕ್ಷಣ ಇಲಾಖೆ ಕೊರೊನಾ ನಿಯಂತ್ರಣದ ಬದಲು ಹರಡಿಸುವ ಕಾರ್ಯವನ್ನು ಮಾಡುತ್ತಿದೆಯೇ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರಕಾರ ಖಾಸಗಿ ಲಾಬಿಗೆ ಮಣಿದು ಕೊರೊನಾ ಸಂಕಷ್ಟದ ನಡುವಲ್ಲೇ ತರಾತುರಿಯಲ್ಲಿ ಶಾಲಾರಂಭ ಮಾಡುತ್ತಿದೆ ಅನ್ನೋ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಇನ್ನಾದ್ರೂ ಶಿಕ್ಷಣ ಸಚಿವರು ಎಚ್ಚೆತ್ತು ಶಿಕ್ಷಕರ ಆತಂಕವನ್ನು ದೂರ ಮಾಡುವ ಕಾರ್ಯವನ್ನು ಮಾಡಬೇಕಾಗಿದೆ.

Comments are closed.