Fazil Murder Cases : ಫಾಜಿಲ್ ಹತ್ಯೆ, ಇಂದು ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು : (Fazil Murder Cases) ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಾದ ಎರಡು ದಿನಗಳಲ್ಲೇ ಮತ್ತೊಂದು ನೆತ್ತರು ಹರಿದಿದೆ. ಕಳೆದ ರಾತ್ರಿ ಸುರತ್ಕಲ್ ನಲ್ಲಿ ಮತ್ತೋರ್ವ ಯುವಕ ಫಾಜಿಲ್ ಹತ್ಯೆಯಾಗಿದ್ದು, ಕರಾವಳಿಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ನಗರ‌ ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿನ ಬಜಪೆ, ಪಣಂಬೂರು, ಮೂಲ್ಕಿ ಹಾಗೂ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿಯಿಂದ ಜುಲೈ 30ರ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಯಾರೂ ಅನಗತ್ಯವಾಗಿ ತಿರುಗಾಡಬಾರದು. ರಾತ್ರಿ 10 ಗಂಟೆಯ ನಂತರ ಅನುಮಾನಾಸ್ಪದವಾಗಿ ಸಂಚರಿಸುವುದು ಕಂಡು ಬಂದರೆ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಹಲವೆಡೆ ಒಟ್ಟು 19 ಕಡೆಗಳಲ್ಲಿ ನಾಕಾಬಂಧಿ ಹಾಕಲಾಗಿದ್ದು, ಪೊಲೀಸ್ ಕಣ್ಗಾವಲು ಇರಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಬಜಪೆ, ಸುರತ್ಕಲ್‌, ಮೂಲ್ಕಿ, ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿನ ಶಾಲೆ, ಕಾಲೇಜುಗಳಿಗೆ ಶುಕ್ರವಾರ (29-07-2017 ) ರಜೆಯನ್ನು ಘೋಷಣೆ ಮಾಡಲಾಗಿದೆ. ಫಾಜಿಲ್‌ ಹಂತಕರಿಗಾಗಿ ಪೊಲೀಸರು ಹುಡುಕಾಟವನ್ನು ಆರಂಭಿಸಿದ್ದು, ಯಾವುದೇ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಆಯುಕ್ತರು ಮನವಿಯನ್ನು ಮಾಡಿದ್ದಾರೆ.

ಇನ್ನು ಫಾಜಿಲ್‌ ಮೃತ ದೇಹವನ್ನು ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ಯುವಕರು ಹತ್ಯೆಯನ್ನು ಖಂಡಿಸಿ ಪ್ರತಿಭಟನೆಯನ್ನು ನಡೆಸಿದ್ದರು. ಇದೀಗ ಆಸ್ಪತ್ರೆಗೆ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ. ಈಗಾಗಲೇ ನಾಲ್ಕು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮಧ್ಯ ಮಾರಾಟಕ್ಕೂ ಬ್ರೇಕ್‌ ಹಾಕಲಾಗಿದೆ. ಘಟನೆ ನಡೆದಿರುವ ಸುರತ್ಕಲ್‌ ಪಟ್ಟಣದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ : fazil murder : ಪ್ರವೀಣ್‌ ಹತ್ಯೆಯ ಬೆನ್ನಲ್ಲೇ ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆ : ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : Mangalore Fazil Murder : ಫಾಜಿಲ್‌ ಹತ್ಯೆ ಪ್ರಕರಣ : ಸಿಸಿ ಕ್ಯಾಮರಾದಲ್ಲಿ ಕೊಲೆಯ ದೃಶ್ಯ ಸೆರೆ

Fazil Murder Cases: schools and colleges holiday today

Comments are closed.