ಚಿಕ್ಕಮಗಳೂರು : Gold Coins Fraud : ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಆಮಿಷವೊಡ್ಡಿ, ಜನರಿಂದ ಹಣ ಪಡೆದು ನಂತರ ವಂಚಿಸುತ್ತದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಪನಹಳ್ಳಿಯ ನಿವಾಸಿಗಳಾದ ಶ್ರೀನಿವಾಸ ನಾಯ್ಕ, ಕೋಟಿ ನಾಯ್ಕ್ ಹಾಗೂ ವೆಂಕಟೇಶ ನಾಯ್ಕ್ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 5000 ರೂ. ನಗದು,1 ಕೆ.ಜಿ 955 ಗ್ರಾಂನಷ್ಟು ತಾಮ್ರದ ಕಾಯಿನ್ ಗಳು, ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್ ಕಾರು, ಆರೋಪಿಗಳು ದೂರುದಾರರಿಗೆ ನೀಡಿದ ಎರಡು ಅಸಲಿ ಚಿನ್ನದ ಕಾಯಿನ್ ಮತ್ತು 20 ನಕಲಿ ಚಿನ್ನದ ಕಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿಕ್ಕಮಗಳೂರು ನಗರದ ಸಿಇಎನ್ ಪೊಲೀಸ್ ಠಾಣೆಗೆ ಚಿಕ್ಕಮಗಳೂರು ನಗರದ ನಿವಾಸಿಯೋರ್ವರು ವಂಚನೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಹರಪನಹಳ್ಳಿ ತಾಲೂಕಿನ ಶ್ರೀನಿವಾಸ ನಾಯ್ಕ ಎಂಬಾತ ವ್ಯಕಿಗೆ ಕಳೆದ 20 ದಿನಗಳ ಹಿಂದೆ ಪರಿಚಿತನಾಗಿದ್ದ. ಈತ ಕರೆ ಮಾಡಿ ತನ್ನ ಬಳಿಯಲ್ಲಿ ಎರಡು ಕೆಜಿಯಷ್ಟು ಚಿನ್ನದ ಕಾಯಿನ್ ಇದೆ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ. ಕೇವಲ 5 ಲಕ್ಷಕ್ಕೆ ಎರಡು ಕೆಜಿ ಚಿನ್ನದ ಕಾಯಿನ್ ನೀಡುವುದಾಗಿ ಆಮಿಷವೊಡ್ಡಿದ್ದ.

ಅಲ್ಲದೇ ನಂಬಿಕೆ ಬರಲಿ ಅನ್ನೋ ಕಾರಣಕ್ಕೆ ಮೂವರು ಆರೋಪಿಗಳು ಎರಡು ಅಸಲಿ ಚಿನ್ನದ ಕಾಯಿನ್ ನೀಡಿದ್ದರು. ಅದನ್ನು ಚೆಕ್ ಮಾಡಿದಾಗ ಅದು ಅಸಲಿಯಾಗಿತ್ತು. ಹೀಗಾಗಿ ಅಂದು ಸಂಜೆ ಪೋನ್ ಪೇ ಮೂಲಕ 5000 ಪಡೆದುಕೊಂಡಿದ್ದರು. ನಂತರದಲ್ಲಿ ಹಣವನ್ನು ಪಡೆದು ಇಪತ್ತು ನಕಲಿ ಕಾಯಿನ್ ಗಳನ್ನು ನೀಡಿದ್ದರು. ಈ ಕಾಯಿನ್ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವು ನಕಲಿ ಅನ್ನೋದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ದೂರು ನೀಡಲಾಗಿತ್ತು. ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮಾರ್ಗದರ್ಶನದಂತೆ ಚಿಕ್ಕಮಗಳೂರು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿದ್ದರು. ಮೂವರು ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಗೌಲಿಹಳ್ಳದ ಬಳಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುತ್ತುರಾಜ್ ಪಿಎಸ್ಐಗಳಾದ ನಾಸೀರ್ ಹುಸೇನ್, ರಘುನಾಥ್ ಎಸ್.ವಿ, ಸಿಬ್ಬಂದಿಗಳಾದ ಎಎಸ್ಐ ಎಂ.ಸಿ ಪ್ರಕಾಶ್, ಹೆಡ್ ಕಾನ್ಸ್‌ಟೇಬಲ್ ಗಳಾದ ವಿನಾಯಕ, ರಾಜು ಡಿ., ಇಮ್ರಾನ್ ಖಾನ್, ಸಿಬ್ಬಂದಿಗಳಾದ ಅನ್ಸರ್ ಪಾಷಾ, ರಮೇಶ, ಹರೀಶ್, ಮಹೇಂದ್ರ, ಧರ್ಮರಾಜ್ ಮೊದಲಾದವರು ಇದ್ದರು.
ಆರೋಪಿಗಳು ನಕಲಿ ಚಿನ್ನದ ಕಾಯಿನ್ ನೀಡಿ ವಂಚನೆ ನಡೆಸಿರೋದು ಇದೇ ಮೊದಲೇನಲ್ಲಾ. ಈ ಹಿಂದೆ ಕೂಡ ತಿರುಪತಿಯಲ್ಲಿ 50 ಸಾವಿರ, ಪಂಡರಾಪುರದಲ್ಲಿ 2 ಲಕ್ಷ ಹಾಗೂ ಹುಬ್ಬಳ್ಳಿಯಲ್ಲಿ1.17 ಲಕ್ಷ ರೂಪಾಯಿಯ ನಕಲಿ ಕಾಯಿನ್ ನೀಡಿ ವಂಚನೆ ನಡೆಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : Hassan accident : ಹಾಸನ ಬಳಿ ಭೀಕರ ಅಪಘಾತ : 9 ಮಂದಿ ಸಾವು
ಇದನ್ನೂ ಓದಿ : ದಸರಾ ರಜೆ ಗೊಂದಲ : ಸೋಮವಾರದಿಂದಲೇ ಶಾಲೆ ಆರಂಭ, ಪರೀಕ್ಷೆ ಮುಂದೂಡಿಕೆ
gold coins Fraud 3 arrested in Chikkamagaluru