ಶಿವಮೊಗ್ಗ : ಭಜರಂಗದಳ ಕಾರ್ಯಕರ್ತರ ಹಾಗೂ ಸಾಮಾಜಿಕ ಕಾರ್ಯಕರ್ತ ಹರ್ಷ (Harsha Murder) ಅನ್ಯಕೋಮಿನ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ನಡೆದಿದೆ. ಕೋಮುಗಳ ನಡುವೆ ನಡೆದ ಘಟನೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಶಾಲೆ, ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಸೀಗೆಹಟ್ಟಿಯ ಕ್ಯಾಂಟೀನ್ ಬಳಿಯಲ್ಲಿ ಹರ್ಷ ಟೀ ಕುಡಿಯುತ್ತಾ ನಿಂತಿದ್ದ ವೇಳೆಯಲ್ಲಿ ಕಾರಿನಲ್ಲಿ ಬಂದ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆಯನ್ನು ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೂಡಲೇ ಹರ್ಷನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರ ರಕ್ತಶ್ರಾವದಿಂದಾಗಿ ಹರ್ಷ ಕೊನೆಯುಸಿರೆಳೆದಿದ್ದಾನೆ. ಇನ್ನು ಹತ್ಯೆಗೈದಿರುವ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಹರ್ಷ ಹತ್ಯೆಯ ಬೆನ್ನಲ್ಲೇ ಎರಡು ಕೋಮುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಹರ್ಷ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣದಿಂದಲೇ 144 ಸೆಕ್ಷನ್ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಇನ್ನು ಈ ಕುರಿತು ದೊಡ್ಡಪೇಟೆ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಹರ್ಷ ಶಿವಮೊಗ್ಗ ನಗರದಲ್ಲಿ ಸಾಕಷ್ಟು ಚಿರಪರಿಚಿತನಾಗಿದ್ದ. ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹರ್ಷ ಹಿಂದೂ ಹರ್ಷ ಎಂದೇ ಕರೆಯಿಸಿಕೊಳ್ಳುತ್ತಿದ್ದ. ಇದೇ ದುಷ್ಕರ್ಮಿಗಳ ಕಣ್ಣು ಕುಕ್ಕುವಂತೆ ಮಾಡಿತ್ತು ಎನ್ನಲಾಗುತ್ತಿದೆ. ಈ ಹಿಂದೆ ಸೀಗೆಹಟ್ಟಿ ಹಾಗೂ ನ್ಯಾಯಾಲಯದ ಆವರಣದಲ್ಲಿಯೇ ದುಷ್ಕರ್ಮಿಗಳು ಹರ್ಷ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ಶೀಘ್ರದಲ್ಲಿಯೇ ಆರೋಪಿಗಳ ಬಂಧನ : ಗೃಹ ಸಚಿವ ಆರಗ ಜ್ಞಾನೇಂದ್ರ
ಹರ್ಷ ಹತ್ಯೆ ಮಾಡಿರುವ ಆರೋಪಿಗಳ ಕುರಿತು ಸುಳಿವು ಸಿಕ್ಕಿದೆ. ಪೊಲೀಸರು ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುವ ಭರವಸೆಯಿದೆ. ಈ ಹಿಂದೆಯೂ ಹರ್ಷ ಮೇಲೆ ಇದೇ ತಂಡ ದಾಳಿಯನ್ನು ನಡೆಸಿತ್ತು. ಆದರೆ ಪೊಲೀಸರಿಗೆ ಹತ್ಯೆ ಮಾಡ್ತಾರೆ ಅನ್ನುವ ಕುರಿತು ಮಾಹಿತಿ ಇರಲಿಲ್ಲ. ಭಜರಂಗದಳದ ಕಾರ್ಯಕರ್ತನಾಗಿರುವ ಜೊತೆಗೆ ಸಾಮಾಜಿಕ ಕಾರ್ಯಕರ್ತನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಸಾಕಷ್ಟು ಚಿರಪರಿಚಿತನಾಗಿದ್ದ. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸುತ್ತೇನೆ ಎಂದಿದ್ದಾರೆ.
ಓರ್ವನ ಬಂಧನ, ನಾಲ್ವರು ಪರಾರಿ
ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಬೀರೂರಿನಲ್ಲಿ ಇರುವ ಕುರಿತು ಮಾಹಿತಿಯನ್ನು ಪಡೆದು ಪೊಲೀಸರ ತಂಡ ದಾಳಿಯನ್ನು ನಡೆಸಿತ್ತು. ಆದರೆ ಈ ವೇಳೆಯಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆಯನ್ನು ನಡೆಸಲಾಗುತ್ತಿದೆ. ಇನ್ನು ಉಳಿದ ಆರೋಪಿಗಳಿಗಾಗಿ ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದಾರೆ.
ಶಿವಮೊಗ್ಗ ಬೂದಿಮುಚ್ಚಿದ ಕೆಂಡ
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ಬೆನ್ನಲ್ಲೇ ಶಿವಮೊಗ್ಗ ಬೂದಿಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆಯಲ್ಲೀ ಈಗಾಗಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೇ ಹತ್ಯೆ ನಡೆದಿರುವ ಸೀಗೆಹಟ್ಟಿ ಸೇರಿದಂತೆ ಶಿವಮೊಗ್ಗ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಲ್ಲದೇ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ಭದ್ರತೆಗಾಗಿ ಕರೆಯಿಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ಮಹಿಳೆಯರನ್ನು ವಂಚಿಸಿ 14 ಮದುವೆಯಾದಾತನ ಬಂಧನ
ಇದನ್ನೂ ಓದಿ : ಕೋಟಾದಲ್ಲಿ ನದಿಗೆ ಉರುಳಿದ ದಿಬ್ಬಣದ ಕಾರು : ವರ ಸೇರಿ 9 ಮಂದಿ ದುರ್ಮರಣ
(Harsha Murder Case Section 144 imposed in Shivamogga city Schools and colleges declared Holiday)