ರಾಜ್ಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಸಮವಸ್ತ್ರ ವಿವಾದ ಪ್ರಕರಣದ ತೀರ್ಪು ಇಂದೇ ಹೊರಬೀಳುತ್ತದೆ ಎಂದು ಬಹುತೇಕ ಎಲ್ಲರೂ ಭಾವಿಸಿದ್ದರು. ಆದರೆ ಇಂದು ವಿಚಾರಣೆಯನ್ನು ಪುನಾರಂಭಿಸಿದ ಹೈಕೋರ್ಟ್ (hijab row case) ಏಕಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡಿದೆ.
ಸಮವಸ್ತ್ರ ವಿವಾದ ಪ್ರಕರಣದ ಸಂಬಂಧ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರು ಹಾಗೂ ಪೋಷಕರು ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆಯನ್ನು ಇಂದು ಮಧ್ಯಾಹ್ನ 2:30ಕ್ಕೆ ಮುಂದೂಡಿತ್ತು. ಅದರಂತೆ ಇಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ ಇದು ವಿಸ್ತ್ರತ ಪೀಠದಲ್ಲಿ ಚರ್ಚೆಯಾಗಬೇಕಾದ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ತುರ್ತಾಗಿ ಬಗೆಹರಿಸಬೇಕಾದ ಪ್ರಕರಣವಾಗಿದೆ. ಅಲ್ಲದೇ ಇದು ವಿಸ್ತ್ರದ ಪೀಠದಲ್ಲಿ ವಿಚಾರಣೆ ನಡೆಸಲು ಯೋಗ್ಯವಾದ ವಿಚಾರವಾಗಿದೆ, ಹೀಗಾಗಿ ಈ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ವಿಭಾಗೀಯ ಪೀಠಕ್ಕೆ ವರ್ಗಾವಣೆ ಮಾಡುತ್ತಿದ್ದೇನೆ. ಈ ವಿಭಾಗೀಯ ಪೀಠದಲ್ಲಿ ಯಾರು ಇರಬೇಕು ಹಾಗೂ ಎಷ್ಟು ಜನ ಇರಬೇಕು ಎಂಬುದನ್ನು ಮುಖ್ಯ ನ್ಯಾಯಮೂರ್ತಿಗಳೇ ನಿರ್ಧರಿಸುತ್ತಾರೆ. ವಿಸ್ತ್ರತ ಪೀಠವನ್ನು ಮುಖ್ಯ ನ್ಯಾಯಮೂರ್ತಿಗಳೇ ರಚನೆ ಮಾಡುತ್ತಾರೆ ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿಗಳಿಗೆ ಈ ಕೂಡಲೇ ಪ್ರಕರಣದ ಸಂಪೂರ್ಣ ಕಡತಗಳನ್ನು ವರ್ಗಾವಣೆ ಮಾಡುವಂತೆ ರಿಜಿಸ್ಟ್ರಾರ್ಗೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಆದೇಶ ನೀಡಿದರು. ಸದ್ಯಕ್ಕೆ ಈ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನು ನೀಡಲು ಸಾಧ್ಯವಿಲ್ಲ. ಮುಖ್ಯ ನ್ಯಾಯಮೂರ್ತಿಗಳು ವಿಸ್ತ್ರತ ಪೀಠವನ್ನು ರಚನೆ ಮಾಡಿದ ಬಳಿಕ ಅರ್ಜಿದಾರರು ಮಧ್ಯಂತರ ಆದೇಶಕ್ಕಾಗಿ ಮನವಿ ಮಾಡಬಹುದಾಗಿದೆ. ಈ ಪ್ರಕರಣದಲ್ಲಿ ಮಧ್ಯಂತರ ಆದೇಶವನ್ನೂ ಮುಖ್ಯ ನ್ಯಾಯಮೂರ್ತಿಗಳೇ ನೀಡುತ್ತಾರೆ. ಅಲ್ಲಿಯವರೆಗೂ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಶಾಲಾ – ಕಾಲೇಜುಗಳಿಗೆ ಬರುವಂತಿಲ್ಲ ಎಂದು ಹೇಳಿದ ಹೈಕೋರ್ಟ್ ಏಕ ಸದಸ್ಯ ಪೀಠ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾಯಿಸಿದೆ.
ಇದನ್ನು ಓದಿ : ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಇದನ್ನೂ ಓದಿ : Hijab Row Karnataka High Court: ಹಿಜಾಬ್-ಕೇಸರಿ ಶಾಲು: ಹೈಕೋರ್ಟ್‌ನಲ್ಲಿ ವಾದ ಪ್ರತಿವಾದ ಹೇಗಿತ್ತು? ಮಂಡನೆಯಾದ ಅಂಶಗಳೇನು?
hijab row case today updates