ಸಿದ್ದರಾಮಯ್ಯ ಸಿಎಂ ಆಗಿದ್ದು ಹೇಗೆ ? ಸಿದ್ದರಾಮನಹುಂಡಿ To ವಿಧಾನಸೌಧ

ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಸಿದ್ದರಾಮನ ಹುಂಡಿಯ ಸಿದ್ದರಾಮಯ್ಯ (CM Siddaramaiah) ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ. ಸಾಮಾನ್ಯ ಹುಡುಗನಾಗಿದ್ದ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗುವವರೆಗೆ ನಡೆದು ಬಂದ ಹಾದಿ ಬಲು ರೋಚಕ. 1948 ರ ಅಗಸ್ಟ್‌ 12 ರಂದು ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನಹುಂಡಿ ಅನ್ನೋ ಗ್ರಾಮದಲ್ಲಿ ಜನಿಸಿದ ಸಿದ್ದರಾಮಯ್ಯ. ಬಾಲ್ಯದಲ್ಲಿಯೇ ರಾಜಕೀಯ ಕ್ಷೇತ್ರದತ್ತ ಒಲವು ಹೊಂದಿದ್ದರು, ತಮ್ಮ ನಾಯಕತ್ವದ ಗುಣಗಳಿಂದಲೇ ಎಲ್ಲರ ಗಮನ ಸೆಳೆದಿದ್ದರು.

ತನ್ನ ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಣವನ್ನು ಪಡೆದ ಸಿದ್ದರಾಮಯ್ಯ, ಮೈಸೂರಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಹಾಗೂ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಪೂರೈಸಿದ್ದರು. ನಂತರದಲ್ಲಿ ಮೈಸೂರು ವಿವಿಯಲ್ಲಿ ಕಾನೂನು ಪದವಿ ಪಡೆದು ಚಿಕ್ಕ ಬೋರಯ್ಯ ಎಂಬವರ ಬಳಿಯಲ್ಲಿ ಜೂನಿಯರ್‌ ಆಗಿ ವಕೀಲ ವೃತ್ತಿಯನ್ನು ಆರಂಭಿಸಿದ್ದರು. ನಂತರದಲ್ಲಿ ಸ್ವತಃ ವಕೀಲರಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸೋದಕ್ಕೆ ಶುರು ಮಾಡಿದ್ದರು.

ವಕೀಲರಾಗಿದ್ದರೂ ಕೂಡ ರಾಜಕೀಯ ಕ್ಷೇತ್ರಕ್ಕೆ ಬರಬೇಕು ಅನ್ನೋ ತುಡಿತ ಸಿದ್ದರಾಮಯ್ಯ ಅವರಲ್ಲಿತ್ತು. ಇದೇ ಕಾರಣಕ್ಕೆ ವಕೀಲ ವೃತ್ತಿಯನ್ನು ಬಿಟ್ಟು ರಾಜಕೀಯಕ್ಕೆ ಧುಮುಕಿದ್ರು. 1978 ರಲ್ಲಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿ, ತಾಲೂಕು ಅಭಿವೃದ್ದಿ ಮಂಡಳಿಯ ಸದಸ್ಯರಾದ್ರು. ರಾಜಕೀಯದ ಜೊತೆ ಜೊತೆಯಲ್ಲೇ ರೈತ ಚಳುವಳಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ್ರು. ಕೇವಲ ಎರಡೇ ವರ್ಷಗಳಲ್ಲಿ ಅಂದ್ರೆ 1980 ರಲ್ಲಿ ಸಿದ್ದರಾಮಯ್ಯ ಮೈಸೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದರು. ಆದರೆ ಮೊದಲ ಚುನಾವಣೆಯಲ್ಲಿಯೇ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ರು.

ಆದರೆ ಎದೆಗುಂದದ ಸಿದ್ದರಾಮಯ್ಯ ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿಯಾಗಿ 1983 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ತಕ್ಕಡಿ ಗುರುತಿನೊಂದಿಗೆ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಇಂದಿರಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಿ.ಜಯದೇವರಾಜ ಅರಸು ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಭಾರತೀಯ ಲೋಕದಳ ಜನತಾ ಪಕ್ಷಕ್ಕೆ ಸೇರ್ಪಡೆಯಾದಾಗ ಅವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದ ಗಡಿಭಾಗಗಳಲ್ಲಿ ಪ್ರವಾಸವನ್ನು ಕೈಗೊಂಡು ವರದಿಯನ್ನು ಸಲ್ಲಿಕೆ ಮಾಡಿದ್ದರು.

1985 ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಯಾದ್ರು. ಅಲ್ಲದೇ ಮೊದಲ ಬಾರಿಗೆ ಸಂಪುಟ ಪ್ರವೇಶಿಸಿದ ಸಿದ್ದರಾಮಯ್ಯ ಅವರು ಪಶುಸಂಗೋಪನೆ ಸಚಿವರಾಗಿ ನೇಮಕವಾದ್ರು. ನಂತರದಲ್ಲಿ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ 1989 ರಲ್ಲಿ ರಾಜ್ಯದಲ್ಲಿ ಎದ್ದ ಕಾಂಗ್ರೆಸ್‌ ಅಲೆಯಿಂದಾಗಿ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ರು. ಇದೇ ಹೊತ್ತಿಗೆ ಜನತಾ ಪಕ್ಷ ಹೋಳಾಗಿ ಹೋಯ್ತು. ಹೀಗಾಗಿ ಸಿದ್ದರಾಮಯ್ಯ ಅವರು ಜನತಾದಳ ಪಕ್ಷವನ್ನು ಸೇರ್ಪಡೆಗೊಂಡ್ರು. ಇದೇ ಹೊತ್ತಿನಲ್ಲೇ ಸಮಾಜವಾದಿ ಪಾರ್ಟಿಯಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜನತಾದಳ ಪಕ್ಷವನ್ನು ಸೇರ್ಪಡೆಯಾದ್ರು.

1991 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಸೋಲನ್ನು ಅನುಭವಿಸಿದ್ರು. ಈ ಹೊತ್ತಲ್ಲಿ ಸಿದ್ದರಾಮಯ್ಯ ರಾಜಕೀಯವಾಗಿ ಸೋಲಿನ ಸರಮಾಲೆಯನ್ನೇ ಹೆಗಲಿಗೆ ಹಾಕಿಕೊಂಡಿದ್ರು. 1994ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಮತ್ತೆ ಗೆಲುವು ಕಂಡಿದ್ರು. ಇದೇ ಹೊತ್ತಲೇ ಜನತಾದಳ ಸರಕಾರ ಅಧಿಕಾರಕ್ಕೆ ಬಂದಿದ್ದು, ಎಚ್.ಡಿ.ದೇವೇಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದೇವೇಗೌಡರ ಸಂಪುಟದಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಬಜೆಟ್‌ ಮಂಡನೆ ಮಾಡಿದ್ದರು. 1999 ರ ಹೊತ್ತಿಗೆ ಜನತಾದಳ ಇಬ್ಬಾಗವಾಗಿ ಹೋಗಿತ್ತು. ಈ ವೇಳೆಯಲ್ಲಿ ದೇವೇಗೌಡರು ಸ್ಥಾಪಿಸಿದ ಜಾತ್ಯಾತೀಯ ಜನತಾದಳ ಪಕ್ಷವನ್ನು ಸೇರ್ಪಡೆಯಾಗಿ ರಾಜ್ಯಾಧ್ಯಕ್ಷರಾಗಿಯೂ ಆಯ್ಕೆಯಾದ್ರು. ನಂತರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರು.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಜೊತೆ 8 ಸಚಿವರ ಪ್ರಮಾಣ ವಚನ

2008 ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದ ಸಂದರ್ಭದಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಪಕ್ಷದ ಜೊತೆ ಸೇರಿ ಸರಕಾರವನ್ನು ರಚಿಸಿತ್ತು. ಎರಡನೇ ಬಾರಿಗೆ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಆಯ್ಕೆಯಾದ್ರು. ಆದರೆ ಜೆಡಿಎಸ್‌ ವಿರುದ್ದ ಮುನಿಸಿಕೊಂಡು ಹೊರ ಬಂದ ಸಿದ್ದರಾಮಯ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದ್ರು. ವರುಣಾ ಕ್ಷೇತ್ರ ಹೊಸದಾಗಿ ರಚನೆಯಾದ ನಂತರದಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಿಸಿದ ಸಿದ್ದರಾಮಯ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಮಾತ್ರವಲ್ಲ ಪ್ರತಿಪಕ್ಷ ನಾಯಕನಾಗಿಯೂ ಹೊರಹೊಮ್ಮಿದ್ದರು. ಬಳ್ಳಾರಿ ಗಣಿದಣಿಗಳ ವಿರುದ್ದ ವಿಧಾನಸೌಧದಲ್ಲೇ ತೊಡೆತಟ್ಟಿದ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆಯನ್ನು ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿಯೇ ಹೊಸ ಸಂಚಲನವನ್ನು ಉಂಟು ಮಾಡಿದ್ದರು.

ಅಷ್ಟೇ ಅಲ್ಲ ನಂತರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಸಿದ್ದರಾಮಯ್ಯ (CM Siddaramaiah) ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರವನ್ನು ವಹಿಸಿಕೊಂಡ್ರು. ಅಲ್ಲದೇ ಐದು ವರ್ಷಗಳ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕರ್ನಾಟಕದ ಮೂರನೇ ಮುಖ್ಯಮಂತ್ರಿ ಅನ್ನೋ ಖ್ಯಾತಿಯನ್ನೂ ಸಿದ್ದರಾಮಯ್ಯ ಪಡೆದುಕೊಂಡ್ರು. ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಪಕ್ಷದ ನಾಯಕರಾಗಿದ್ರು. ಆದರೆ ನಂತರದಲ್ಲಿ ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಹಾಗೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನು ಕಂಡ್ರು. ಆದರೆ ಬಾದಾಮಿಯ ಜನತೆ ಸಿದ್ದರಾಮಯ್ಯ ಅವರ ಕೈ ಹಿಡಿದಿತ್ತು.

ಇದನ್ನೂ ಓದಿ :  ಬೂಕನಕೆರೆ TO ವಿಧಾನಸೌಧ : ನಿಂಬೆಹಣ್ಣು ವ್ಯಾಪಾರಿ ಮಗ, ರೈಸ್ ಮಿಲ್ ರೈಟರ್ ಯಡಿಯೂರಪ್ಪ ಸಿಎಂ ಆಗಿದ್ದು ಹೇಗೆ ಗೊತ್ತಾ ?

ಈ ಬಾರಿಯ ಚುನಾವಣೆಯಲ್ಲಿಯೂ ಕೋಲಾರ, ಬಾದಾಮಿ, ಚಾಮುಂಡೇಶ್ವರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಸಿದ್ದ ನಡೆಸಿದ್ದ ಸಿದ್ದರಾಮಯ್ಯ ಕೊನೆಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲಾ ಅದೃಷ್ಟ ಎಂಬಂತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ವರುಣಾ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯನ ಪಾಲಿಗೆ ಅದೃಷ್ಟದ ಕ್ಷೇತ್ರ.

ಮುಖ್ಯಮಂತ್ರಿಯಾದ (CM Siddaramaiah) ನಂತರದಲ್ಲಿ ಸಿದ್ದರಾಮಯ್ಯ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರ ಭಾಗ್ಯಗಳಂತ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ದಲಿತ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ವಿತರಣೆ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್‌ ಅಸ್ತ್ರ ಪ್ರಯೋಗಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

Comments are closed.