ಮೈಸೂರು : Eshwarappa : ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ಸಂಘಟನೆ ಬಿಟ್ಟರೆ ತಾಯಿಯನ್ನು ಬಿಟ್ಟಂತೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನಾನು ಸಂಘಟನೆ ಬಿಡುತ್ತಿದ್ದೇನೆ ಎಂದು ಸುದ್ದಿ ಹಬ್ಬಿಸುತ್ತಿರುವವರಿಗೆ ಸಿದ್ದರಾಮಯ್ಯ ಗಾಳಿ ಬೀಸಿದೆ. ಅವರಿಗೂ ತಾಯಿಯ ವ್ಯತ್ಯಾಸ ಗೊತ್ತಿಲ್ಲ. ಕಾಂಗ್ರೆಸ್ ,ಜೆಡಿಎಸ್ ಹೀಗೆ ಯಾವ ಪಕ್ಷಕ್ಕೆ ಬೇಕಿದ್ದರೂ ಸಿದ್ದರಾಮಯ್ಯ ಹೋಗುತ್ತಾರೆ. ನಾನು ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಗುಡುಗಿದ್ದಾರೆ,
ಸಿಎಂ ಸ್ಥಾನ ಸಿಕ್ಕಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರುತ್ತಾರಾ ಕೇಳಿ. ಸಿದ್ದು ಹಾಗೂ ಡಿಕೆಶಿ ಇಬ್ಬರೂ ಸೈದ್ಧಾಂತಿಕವಾಗಿ ಇರೋದು ಅಂತಾರೆ, ಆದರೆ ಇವರು ವ್ಯಕ್ತಿ ಪೂಜೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಅದು ಅವರ ಪಕ್ಷದ ಕಾರ್ಯಕ್ರಮ, ಅದಕ್ಕೆ ನಮ್ಮ ವಿರೋಧ ಇಲ್ಲ. ಅವರು ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಲಿ. ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಂತೆಯೇ ದೇಶದಲ್ಲಿ ಕಾಂಗ್ರೆಸ್ ತೋಡೋ ಆಗುತ್ತಿದೆ. ಭಾರತ್ ತೋಡೋ ಮಾಡಿದ್ದೇ ಈ ಕಾಂಗ್ರೆಸ್, ದೇಶದ ಜನತೆ ಕಾಂಗ್ರೆಸ್ ನಂಬೋದಿಲ್ಲ ಅನ್ನೋದಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದೇ ಸಾಕ್ಷಿ. ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಇನ್ನೆಲ್ಲಿ ಕಾಂಗ್ರೆಸ್ ಪಕ್ಷವಿದೆ..? ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಕಾಂಗ್ರೆಸ್ ಎಲ್ಲಿದೆ ಅಂತಾ ಹುಡುಕಬೇಕಾಗುತ್ತದೆ ಅಂತಾ ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಷ್ಟು ಕಾಂಗ್ರೆಸ್ ಇದೆ ಎಂದು ಹೇಳಲಿ ಎಂದು ಕೆ,ಎಸ್ ಈಶ್ವರಪ್ಪ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.
ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಇಡೀ ವಂಶವೇ ಆರ್‌ಎಸ್‌ಎಸ್ ನ ಒಂದು ಕೂದಲು ಅಲ್ಲಾಡಿಸಲು ಆಗಿಲ್ಲ. ಇನ್ನು ಸಿದ್ದರಾಮಯ್ಯ ನಮಗೆ ಯಾವ ಲೆಕ್ಕ..? ಹಿಂದುತ್ವ ಬೆಳೆಸಬೇಕು ಎಂದು ಹೇಳುವುದು ಆರ್‌ಎಸ್‌ಎಸ್. ಸಿದ್ದರಾಮಯ್ಯ ನಮಗೆ ಹಿಂದೂಗಳ ಮತ ಬೇಡ ಅನ್ನಲಿ ನೋಡೋಣ. ಕೇವಲ ಮುಸ್ಲಿಮರಿಂದ ನಾನು ಗೆಲ್ಲುತ್ತೇನೆ ಎನ್ನಲಿ. ಆರ್‌ಎಸ್‌ಎಸ್ ಇಲ್ಲ ಅಂದಿದ್ರೆ ಇವತ್ತು ದೇಶ ಎಲ್ಲಿರುತ್ತಿತ್ತೋ.? ಆರ್‌ಎಸ್‌ಎಸ್ ಸೂರ್ಯನಿದ್ದಂತೆ. ಇದು ಸಿದ್ದರಾಮಯ್ಯಗೆ ಅರ್ಥವಾಗಬೇಕು ಎಂದಿದ್ದಾರೆ.
ಮುಸ್ಲಿಮ್ ಜನತೆ ಈಗ ಎಚ್ಚೆತ್ತಿದ್ದಾರೆ. ದಾರಿ ತಪ್ಪುತ್ತಿರುವ ಮುಸ್ಲಿಂ ಯುವಕರಿಗೆ ಬುದ್ಧಿ ಹೇಳುತ್ತಿದ್ದಾರೆ. ಆದರೆ ಈ ಸಿದ್ದರಾಮಯ್ಯ ರಾಷ್ಟ್ರವಿರೋಧಿ ಪಿಎಫ್ಐ ಜೊತೆ ನಿಂತಿದ್ದಾರೆ. ದಾರಿ ತಪ್ಪಿದ ಮುಸ್ಲಿಮರಿಗೆ ಹಿರಿಯರು ಬುದ್ಧಿವಾದ ಹೇಳ್ತಿದ್ದಾರೆ. ಆದರೆ ಇದೆಲ್ಲ ಕಾಂಗ್ರೆಸ್ಗೆ ತಿಳೀತಾ ಇಲ್ಲ. ಬಿಜೆಪಿ ಆರ್ಎಸ್ಎಸ್ನ ಪಾಪದ ಕೂಸಲ್ಲ. ನಾವೆಲ್ಲ ಆರ್ಎಸ್ಎಸ್ನಿಂದ ಬೆಳೆದ ಮಕ್ಕಳು. ನಾವು ಸ್ವಾಭಿಮಾನಿ ಕೂಸುಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ
‘I will stay with BJP till I die’: Eshwarappa