ಕರ್ನಾಟಕ ವಿಧಾನಸಭೆ ಚುನಾವಣೆ : ಹೇಗೆ ನಡೆಯುತ್ತೆ ಮತ ಎಣಿಕೆ ?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯ (Karnataka election Result 2023) ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆಯ ಕಾರ್ಯಕ್ಕೆ ಈಗಾಗಲೇ ರಾಜ್ಯದಾದ್ಯಂತ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದ 224 ವಿಧಾನಸಭಾ ಚುನಾವಣೆಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 2615ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 2430 ಪುರುಷರು, 184 ಮಹಿಳೆಯರು ಹಾಗೂ ಇಬ್ಬರು ತೃತೀಯ ಲಿಂಗಿ ಅಭ್ಯರ್ಥಿ ಸ್ಪರ್ಧೆ ಮಾಡಿದ್ದರು. ಬಳ್ಳಾರಿ ನಗರ ಕ್ಷೇತ್ರದಲ್ಲಿ 24 , ಹೊಸಕೊಟೆ ಕ್ಷೇತ್ರದಲ್ಲಿ 23 ಚಿತ್ರದುರ್ಗದಲ್ಲಿ 21, ಯಲಹಂಕದಲ್ಲಿ 20 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯವನ್ನು ಆರಂಭಿಸಲಾಗುತ್ತಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ನಂತರದಲ್ಲಿ ಇವಿಎಂ ಯಂತ್ರಗಳ ಎಣಿಕೆ ಕಾರ್ಯವನ್ನು ಆರಂಭಿಸಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದ್ದು, ಸಂಜೆಯ ಹೊತ್ತಿಗೆ ರಾಜ್ಯ ಸರಕಾರದ ಸಂಪೂರ್ಣ ಭವಿಷ್ಯ ನಿರ್ಧಾರವಾಗಲಿದೆ. ಮತ ಎಣಿಕೆ ನಡೆಯುವ ಕೇಂದ್ರದ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈ ಬಾರಿ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದೆ. ಈ ಬಾರಿ 73,19 ಶೇಕಡಾ ಮತದಾನವಾಗಿದ್ದು, ರಾಜಕೀಯ ಪಕ್ಷಗಳು ಹಲವು ರೀತಿಯಲ್ಲಿ ಲೆಕ್ಕಾಚಾರವನ್ನು ನಡೆಸುತ್ತಿವೆ. ಮತೆ ಎಣಿಕೆ ಕೇಂದ್ರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಪ್ರತೀ ಟೇಬಲ್‌ಗೂ ವಿಡಿಯೋ ಕ್ಯಾಮರಾ ಅಳವಡಿಸಿ ಮತ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರೆಕಾರ್ಡ್‌ ಮಾಡಲಾಗುತ್ತದೆ.

ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಸೋಲು ಗೆಲುವಿನ ಲೆಕ್ಕಾಚಾರವನ್ನು ಶುರು ಮಾಡಿವೆ. ಹಲವು ಸಮೀಕ್ಷೆಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದರೆ, ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಪರ ಒಲವು ವ್ಯಕ್ತಪಡಿಸಿವೆ. ಜೊತೆಗೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಅನ್ನೋದನ್ನು ಸಮೀಕ್ಷೆಗಳು ಹೇಳಿರುವ ಹಿನ್ನೆಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿವೆ. ರಾಜ್ಯದಲ್ಲಿ ಒಟ್ಟು36 ಕಡೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. 306 ಹಾಲ್ ಹಾಗೂ 4,256 ಟೇಬಲ್​ ಗಳನ್ನು ಅಳವಡಿಕೆ ಮಾಡಲಾಗಿದೆ. ಮತ ಎಣಿಕೆಯ ಕಂದ್ರಗಳಲ್ಲಿ 224 ಆರ್‌ ಓ, 317 ಎಆರ್‌ಓ, 4,256 ಸೂಪರ್ ವೈಸರ್ಸ್, 5,256 ಕೌಂಟಿಂಗ್ ಅಸಿಸ್ಟೆಂಟ್ಸ್, 4,256 ಸೂಕ್ಷ್ಮ ವೀಕ್ಷಕರು, 450 ಹೆಚ್ಚುವರಿ ಎಆರ್‌ಓಗಳನ್ನು ನಿಯೋಜನೆ ಮಾಡಲಾಗಿದೆ.

ಎಲ್ಲೆಲ್ಲಿ ನಡೆಯುತ್ತೆ ಮತ ಎಣಿಕೆಯ ಕಾರ್ಯ ?

ಬಿಎಂಎಸ್ ಮಹಿಳಾ ಕಾಲೇಜು ಬಸವನಗುಡಿ (ಬೆಂಗಳೂರು ಕೇಂದ್ರ), ಮೌಂಟ್ ಕಾರ್ವೆಲ್ ಪಿಯು ಕಾಲೇಜು(ಬಿಬಿಎಂಪಿ ಉತ್ತರ), ಎಸ್​ಎಸ್​ಎಂಆರ್​ವಿ ಪಿಯು ಕಾಲೇಜು ಜಯನಗರ (ಬೆಂಗಳೂರು ದಕ್ಷಿಣ), ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಾಂಪೋಜಿಟ್ ಪಿಯು ಕಾಲೇಜು(ಬೆಂಗಳೂರು ನಗರ), ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ರಾಮನಗರ, ಮಂಡ್ಯ ವಿಶ್ವವಿದ್ಯಾಲಯ ಮಂಡ್ಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಸನ, ರಾಣಿ ಪಾರ್ವತಿ ದೇವಿ ಕಾಲೇಜು ಬೆಳಗಾವಿ, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ, ಸೈನಿಕ ಶಾಲೆ, ವಿಜಯಪುರ, ಸರ್ಕಾರಿ ಪಿಯು ಕಾಲೇಜು ಯಾದಗಿರಿ, ಕಲಬುರಗಿ ವಿಶ್ವವಿದ್ಯಾಲಯ, ಐಡಿಎಸ್​ಜಿ ಸರ್ಕಾರಿ ಕಾಲೇಜು ಚಿಕ್ಕಮಗಳೂರು, ತುಮಕೂರು ವಿಶ್ವವಿದ್ಯಾಲಯ ತುಮಕೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕಬಳ್ಳಾಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್(ದಕ್ಷಿಣ ಕನ್ನಡ), ಸೇಂಟ್ ಜೋಸೆಫ್ ಕಾನ್ವೆಂಟ್ ಕೊಡಗು, ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ವೆುಂಟ್ ಕಾಲೇಜು ಮೈಸೂರು ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಚಾಮರಾಜನಗರ, ಕಲಬುರಗಿ, ಬಿ.ವಿ.ಬಿ. ಕಾಲೇಜು ಬೀದರ್, ಎಸ್​ಆರ್‌ಪಿಎಸ್ ಪಿಯು ಕಾಲೇಜು ರಾಯಚೂರು, ಶ್ರೀ ಗವಿಸಿದ್ದೇಶ್ವರ ಕಾಲೇಜು ಕೊಪ್ಪಳ, ಶ್ರೀ ಜಗದದ್ಗುರು ತೋಂಟದಾರ್ಯ ಕಲೆ, ವಿಜ್ಞಾನ, ವಾಣಿಜ್ಯ ಕಾಲೇಜು ಗದಗ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಡಾ.ಎ.ವಿ. ಬಾಳಿಗ ಕಲೆ, ವಿಜ್ಞಾನ ಕಾಲೇಜು ಕುಮಟಾ(ಉತ್ತರ ಕನ್ನಡ), ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾವೇರಿ, ಪ್ರೌಢ ದೇವರಾಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊಸಪೇಟೆ(ವಿಜಯನಗರ ಜಿಲ್ಲೆ), ರಾವ್ ಬಹುದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಬಳ್ಳಾರಿ, ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ, ಶಿವಗಂಗೋತ್ರಿ ವಿಶ್ವವಿದ್ಯಾಲಯ ದಾವಣಗೆರೆ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ, ಸೇಂಟ್ ಸೆಸಿಲೀಸ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್ಸ್ ಉಡುಪಿಯಲ್ಲಿ ನಡೆಯಲಿದೆ.

ಮದ್ಯ ಮಾರಾಟಕ್ಕೆ ನಿಷೇಧ :

ಚುನಾವಣಾ ಮತ ಎಣಿಕೆಯ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ರಾಜ್ಯದಾದ್ಯಂತ ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಬೆಳಗಿನಿಂದಲೇ ಬಾರ್‌, ರೆಸ್ಟೋರೆಂಟ್‌ಗಳು ಬಂದ್‌ ಆಗಲಿದ್ದು, ಊಟಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ :ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಭರ್ಜರಿ ಪೈಪೋಟಿ : ಸಿದ್ದು, ಡಿಕೆಶಿ ಬೆನ್ನಲ್ಲೇ ಪ್ರಿಯಾಂಕ ಖರ್ಗೆ ಹೆಸರು

ಇದನ್ನೂ ಓದಿ : ಕರ್ನಾಟಕ ಚುನಾವಣಾ ಫಲಿತಾಂಶ 2023 : ಜೆಡಿಎಸ್ ನಾಯಕರಿಗೆ ಡಿಕೆ ಶಿವಕುಮಾರ್ ಬಹಿರಂಗ ಆಹ್ವಾನ

Comments are closed.