ಲೋಕಸಭಾ ಚುನಾವಣೆ : ಚಿಕ್ಕಮಗಳೂರು – ಉಡುಪಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆ.ಜಯಪ್ರಕಾಶ್‌ ಹೆಗ್ಡೆ

ಉಡುಪಿ : ವಿಧಾನಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕುರಿತು ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಕಾಂಗ್ರೆಸ್‌ ತೊರೆದಿರುವ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆಗೆ ಸಜ್ಜಾಗುತ್ತಿದ್ದಾರೆ. ಇದೀಗ ಕರಾವಳಿ ಭಾಗದ ಪ್ರಭಾವಿ ಮುಖಂಡ ಕೆ.ಜಯಪ್ರಕಾಶ್‌ ಹೆಗ್ಡೆ (Jayaprakash Hegde ) ಅವರು ಕಾಂಗ್ರೆಸ್‌ ಸೇರ್ಪಡೆ ಮಾತು ಕೇಳಿಬಂದಿದೆ. ಅದ್ರಲ್ಲೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು – ಉಡುಪಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಅವಧಿ ಮುಂದಿನ ನಾಲ್ಕೈದು ತಿಂಗಳಲ್ಲಿ ಮುಗಿಯಲಿದೆ. ಬಿಜೆಪಿ ಸೇರ್ಪಡೆಯಾದ ನಂತರ ಕೆ.ಜಯಪ್ರಕಾಶ್‌ ಹೆಗ್ಡೆ ಅವರನ್ನು ಕಡೆಗಣನೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು, ಕುಂದಾಪುರ, ಉಡುಪಿ ವಿಧಾನಸಭಾ ಕ್ಷೇತ್ರದ ಪೈಕಿ ಯಾವುದಾದರೊಂದು ಕ್ಷೇತ್ರದಿಂದ ಬಿಜೆಪಿ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡುವುದಾಗಿ ಭರವಸೆ ಕೊಟ್ಟಿತ್ತು. ಅಲ್ಲದೇ ಉಡುಪಿ ಜಿಲ್ಲಾ ಬಿಜೆಪಿ ವರಿಷ್ಠರಿಗೆ ಕಳುಹಿಸಿದ ಪಟ್ಟಿಯಲ್ಲಿಯೂ ಜಯಪ್ರಕಾಶ್‌ ಹೆಗ್ಡೆ ಅವರ ಹೆಸರಿತ್ತು. ಆದರೂ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಯಾವುದೇ ಕ್ಷೇತ್ರಗಳಿಂದಲೂ ಟಿಕೆಟ್‌ ನೀಡದೆ ವಂಚಿಸ ಲಾಗಿತ್ತು. ಸದ್ಯ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹಲವು ಹೆಸರುಗಳು ಓಡಾಡುತ್ತಿವೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆ ಏರಿದೆ. ಆದರೆ ಸೊರಗಿ ಹೋಗಿರುವ ಕರಾವಳಿಯ ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ಕಲ್ಪಿಸಲು ಕಾಂಗ್ರೆಸ್‌ ರಾಜ್ಯ ನಾಯಕರು ಹಾಗೂ ಹೈಕಮಾಂಡ್‌ ಚಿಂತನೆ ನಡೆಸಿದ್ದಾರೆ. ಇದೇ ಕಾರಣಕ್ಕೆ ಈಗಾಗಲೇ ಕಾಂಗ್ರೆಸ್‌ ನಾಯಕರು ಜಯಪ್ರಕಾಶ್‌ ಹೆಗ್ಡೆ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಒಪ್ಪಂದ ಮಾಡಿಕೊಂಡು ಪ್ರಮೋದ್‌ ಮಧ್ವರಾಜ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಶೋಭಾ ಕರಂದ್ಲಾಜೆ ಎದುರು ಸೋಲನ್ನು ಕಂಡಿದ್ದರು. ನಂತರದಲ್ಲಿ ಪ್ರಮೋದ್‌ ಮಧ್ವರಾಜ್‌ ಅವರು ಬಿಜೆಪಿ ಸೇರ್ಪಡೆಯಾಗಿದ್ದರು.

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದರೂ ಕೂಡ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿ ಯಾರು ಅನ್ನೋದು ಇನ್ನೂ ಖಚಿತವಾಗಿಲ್ಲ. ಎರಡೂ ಜಿಲ್ಲೆಗಳಲ್ಲಿಯೂ ಪ್ರಾಬಲ್ಯ ಹೊಂದಿರುವ ನಾಯಕರ ಕೊರತೆಯೂ ಎದ್ದು ಕಾಣುತ್ತಿದೆ. ವಿನಯ ಕುಮಾರ್‌ ಸೊರಕೆ ಈಗಾಗಲೇ ರಾಜಕೀಯದಿಂದ ನಿವೃತ್ತರಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಸೊರಕೆ ಅವರಿಗೆ ಉಡುಪಿ ಜಿಲ್ಲೆಯಲ್ಲಿ ಪ್ರಾಬಲ್ಯವಿದ್ದರೂ ಕೂಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ ಸೆಳೆಯುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಒಂದು ಬಾರಿ ಲೋಕಸಭಾ ಸದಸ್ಯರಾಗಿರುವ ಕೆ.ಜಯಪ್ರಕಾಶ್‌ ಹೆಗ್ಡೆ ಅವರ ಅನಿವಾರ್ಯತೆ ಕಾಂಗ್ರೆಸ್‌ ಪಕ್ಷಕ್ಕೆ ಎದುರಾಗಿದೆ.

ಉಡುಪಿ ಜಿಲ್ಲೆಯ ಮಟ್ಟಿಗೆ ಕೆ.ಜಯಪ್ರಕಾಶ್‌ ಹೆಗ್ಡೆ ಚಿರಪರಿಚಿತರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿಯವರಾಗಿರುವ ಕೊರ್ಗಿ ಜಯಪ್ರಕಾಶ್‌ ಹೆಗ್ಡೆ ಅವರ ತಂದೆ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಜಯಪ್ರಕಾಶ್‌ ಹೆಗ್ಡೆ ಅವರು ವಕೀಲರಾಗಿ ಸೇವೆ ಸಲ್ಲಿಸಿದ್ದರು. 1994 ರಲ್ಲಿ ಜನತಾದಳ ಪಕ್ಷದಿಂದ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ (Brahmavar Assembly Constituency) ಸ್ಪರ್ಧೆ ಮಾಡಿದ್ದ ಕೆ.ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಪಕ್ಷದ ಪಿ.ಬಸವರಾಜ್‌ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದರು. ಅಲ್ಲದೇ ಜನತಾದಳ ಸರಕಾರದಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರದಲ್ಲಿ 1999 ಹಾಗೂ 2004 ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಯಪ್ರಕಾಶ್‌ ಹೆಗ್ಡೆ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಕ್ಷೇತ್ರ ಪುನರ್‌ವಿಂಗಡನೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಕ್ಷೇತ್ರ ಮರೆಯಾಗಿ ಹೋಗಿತ್ತು. ನಂತರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ವಿರುದ್ದ ಪರಾಜಯಗೊಂಡಿದ್ದರು.

ಉಡುಪಿ ಜಿಲ್ಲೆಯ ಹುಟ್ಟಿಗೆ ಕೆ.ಜಯಪ್ರಕಾಶ್‌ ಹೆಗ್ಡೆ (Jayaprakash Hegde ) ಅವರ ಕೊಡುಗೆ ಮಹತ್ವದ್ದಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದರುವ ಕೆ.ಜಯಪ್ರಕಾಶ್‌ ಹೆಗ್ಡೆ ಉಡುಪಿ, ಕುಂದಾಪುರ, ಕಾರ್ಕಳ, ಬೈಂದೂರು ಹಾಗೂ ಕಾಪು ಕ್ಷೇತ್ರಗಳಲ್ಲಿಯೂ ಹಿಡಿತ ಹೊಂದಿದ್ದಾರೆ. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ತರಿಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ವರವಾಗಲಿದೆ ಅನ್ನೋದು ಸದ್ಯದ ರಾಜಕೀಯ ಲೆಕ್ಕಾಚಾರ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿರುವ ಕೆ.ಜಯಪ್ರಕಾಶ್‌ ಹೆಗ್ಡೆ ಅವರಿಗೂ ಕೂಡ ಕಾಂಗ್ರೆಸ್‌ ಪಕ್ಷ ಅನಿವಾರ್ಯ ಎನಿಸುತ್ತಿದೆ.

2015ರಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಮುನಿಸಿಕೊಂಡ ಜಯಪ್ರಕಾಶ್‌ ಹೆಗ್ಡೆ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್‌ ಪಕ್ಷದ ಪ್ರಭಾವಿ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಅವರ ಸೂಚನೆಯ ಮೇರೆಗೆ ಕಾಂಗ್ರೆಸ್‌ ಪಕ್ಷ ಹೆಗ್ಡೆ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಜಯಪ್ರಕಾಶ್‌ ಹೆಗ್ಡೆ ಅವರು ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದರು. ಆದರೆ ಬಿಜೆಪಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಕೇವಲ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಿ ಸುಮ್ಮನಾಗಿತ್ತು. ಕಾಂಗ್ರೆಸ್‌ ಪಕ್ಷದ ವಿರುದ್ದ ಮುನಿಸಿಕೊಂಡ ನಂತರದಲ್ಲಿ ಹಲವು ನಾಯಕರು ಹೆಗ್ಡೆ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೂ ಕೂಡ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮರಳಿರಲಿಲ್ಲ. ಇದೀಗ ಹಿಂದುಳಿದ ವರ್ಗಗಳ ಆಯೋಗದ ಅವಧಿ ಮುಗಿಯುತ್ತಿದ್ದಂತೆಯೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ ಸಿದ್ದರಾಮಯ್ಯ ಸಿಎಂ, ಡಿಕೆಶಿವಕುಮಾರ್‌ ಮಾತ್ರವೇ ಡಿಸಿಎಂ : ಅಧಿಕೃತ ಘೋಷಣೆ

ಇದನ್ನೂ ಓದಿ : Post Office New Scheme : ಪೋಸ್ಟ್‌ ಆಫೀಸ್‌ ಹೊಸ ಯೋಜನೆ, 95 ರೂ. ಹೂಡಿಕೆ ಮಾಡಿ ಪಡೆಯಿರಿ 14 ಲಕ್ಷ ರೂ.

Karnataka State Commission for Backward Classes President Jayaprakash Hegde joins Congress next Lok Sabha election Udupi chikkamagalore constituency

Comments are closed.