ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ಡಾ.ರಾಜ್ ಕುಟುಂಬ ದಿಕ್ಕುತೋಚದ ಸ್ಥಿತಿ ತಲುಪಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ನಿಧನ ವಾಗಿ ಇಂದಿಗೆ ಆರು ದಿನಗಳು ಕಳೆದಿವೆ. ಆದರೂ ಪುನೀತ್ ಕುಟುಂಬಸ್ಥರ ದುಃಖದ ಕೋಡಿಗೆ ಕಡಿವಾಣ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಮಕ್ಕಳಿಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಸಿಎಂ ಬೊಮ್ಮಾಯಿಯವರಿಗೆ ಸಚಿವರಾದ ಡಾ.ಅಶ್ವತ್ಥ ನಾರಾಯಣ್ ಹಾಗೂ ಆರ್.ಅಶೋಕ್ ಸಾಥ್ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಭೇಟಿ ವೇಳೆ ಪುನೀತ್ ಕುಟುಂಬಸ್ಥರ ಜೊತೆ ಪುನೀತ್ ಕುಟುಂಬ ಆಯೋಜಿಸಲು ನಿರ್ಧರಿಸಿರುವ ಪುನೀತ್ ಪುಣ್ಯತಿಥಿಯ ಅನ್ನದಾನ ಕಾರ್ಯಕ್ರಮ ಹಾಗೂ ಫಿಲ್ಮ್ ಚೆಂಬರ್ ನಡೆಸಲಿರುವ ಕಾರ್ಯಕ್ರಮದ ಕುರಿತು ವಿವರಣೆ ಪಡೆದಿದ್ದಾರೆ ಎನ್ನಲಾಗಿದೆ.

ಪುನೀತ್ ಭಾವ ಚಿತ್ರ ಕ್ಕೆ ಪುಷ್ಪಾರ್ಚನೆ ನಡೆಸಿದ ಸಿಎಂ ಬೊಮ್ಮಾಯಿ ಗೌರವ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಅವರ ಕುಟುಂಬಕ್ಕೆ ನಾವು ಸಾಂತ್ವನ ಹೇಳಿದ್ದೇವೆ. ಮುಂದೇ ಆಗಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಿದ್ದೇವೆ. ಕುಟುಂಬ ಕಾರ್ಯಕ್ರಮಗಳನ್ನು ಸಸೂತ್ರವಾಗಿ ನಡೆಸಲು ಸರ್ಕಾರದ ಸಹಕಾರ ಕೋರಿದೆ. ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.
(CM Basavaraj Bommai visits Puneeth Raj Kumar’s residence )