ಬೆಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತ್ರಿ ಸದಸ್ಯ ಪೀಠ ವಿಚಾರಣೆಯನ್ನು(Hijab controversy hearing postponement) ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಆದರೆ ಅಂತಿಮ ಆದೇಶದವರೆಗೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಉಡುಗೆಗಳನ್ನು ತೊಡುವಂತಿಲ್ಲ ಎನ್ನುವ ಮೂಲಕ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ರೀತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ನೇತೃತ್ವದ ತ್ರೀ ಸದಸ್ಯ ಪೀಠ ಇಂದು ಮಧ್ಯಾಹ್ನ 2.30 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಅರ್ಜಿದಾರ ಬಾಲಕಿಯರ ಪರ ದೇವದತ್ ಕಾಮತ್ ಹಾಗೂ ಸಂಜಯ್ ಹೆಗ್ಡೆ ಅವರು ವಾದ ಮಂಡಿಸಿದ್ದರು. ಸರ್ಕಾರದ ಪರ ಅಡ್ವಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ ವಾದ ಮಂಡಿಸಿದ್ದರು. ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಸಂವಿಧಾನದಲ್ಲಿರುವ ಅಂಶಗಳನ್ನು ಸಂಜಯ್ ಹೆಗ್ಡೆ ಉಲ್ಲೇಖ ಮಾಡಿದ್ದರು. ಆದರೆ ನ್ಯಾಯಾಲಯ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ಸೋಮವಾರದಿಂದ ನಿತ್ಯವೂ ಮಧ್ಯಾಹ್ನ 2.30 ರಿಂದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಇನ್ನುಅಡ್ವಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ ಅವರು ಶಾಲೆಗಳನ್ನು ಆರಂಭಿಸಲು ಸರಕಾರದ ಸಿದ್ದವಿದೆ. ಕೆಲವು ವಿದ್ಯಾರ್ಥಿಗಳಿಂದಾಗಿ ಬಹು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯಾಗಲಿದೆ ಎಂದು ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ. ಈ ವೇಳೆಯಲ್ಲಿ ನ್ಯಾಯಮೂರ್ತಿಗಳು ಶಾಲೆಗಳನ್ನು ಆರಂಭಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಇನ್ನು ನ್ಯಾಯಮೂರ್ತಿಗಳು ಮಧ್ಯಂತರ ಆದೇಶ ಹೊರಡಿಸುತ್ತಿದ್ದಂತೆಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಅರ್ಜಿದಾರರ ಪರ ವಕೀಲರಾದ ದೇವದತ್ ಕಾಮತ್ ಅವರು ಅನ್ನ ಮತ್ತು ನೀರು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದಂತಾಗಿದೆ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ನ್ಯಾಯಮೂರ್ತಿಗಳು ಇದು ಅನ್ನ ಹಾಗೂ ನೀರಿಗೆ ಸಂಬಂಧಿಸಿದ ವಿಚಾರವಲ್ಲ ಎಂದಿದ್ದಾರೆ.
ರಾಜ್ಯ ಸರಕಾರ ನ್ಯಾಯಾಲಯದ ತೀರ್ಪನ್ನು ಆಧರಿಸಿ ಶಾಲೆಗಳನ್ನು ಆರಂಭಿಸಲು ತೀರ್ಮಾನ ಮಾಡಿಕೊಂಡಿತ್ತು. ಇಂದು ಸಂಜೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಭೆಯನ್ನು ನಡೆಸಿ ಶಾಲೆಗಳನ್ನು ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ನ್ಯಾಯಾಲಯ ನಾಳೆಯಿಂದಲೇ ಶಾಲಾರಂಭಕ್ಕೆ ಸೂಚನೆಯನ್ನು ಕೊಟ್ಟಿದೆ. ಆದರೆ ಸರಕಾರ ನಾಳೆಯಿಂದ ಆರಂಭಿಸುತ್ತಾ ಅಥವಾ ಸೋಮವಾರದಿಂದ ಆರಂಭಿಸುತ್ತಾ ಅನ್ನೋ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಲಿದೆ.
ಹಿಜಾಬ್ ವಿವಾದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದ ಸುಪ್ರೀಂ ಕೋರ್ಟ್
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಹಾಗೂ ವಿವಾದಕ್ಕೆ ಸಂಬಂಧಿಸಿದಂತೆ ಮದ್ಯ ಪ್ರವೇಶ ಮಾಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ (Hijab Controversy Supreme Court) ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪರಿಶೀಲನೆಯನ್ನು ನಡೆಸುತ್ತಿದೆ. ಈ ಸಮಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ. ಹೈಕೋರ್ಟ್ ಪರಿಶೀಲಿಸಿ ಸಮಸ್ಯೆಯನ್ನು ನಿರ್ಧರಿಸಲಿ. ಈ ಹಂತದಲ್ಲಿ ನಾವು ಮಧ್ಯ ಪ್ರವೇಶ ಮಾಡುವುದು ಸರಿಯಾಗಿ ಕಾಣುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ. ಇತರ ಇಬ್ಬರು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೈಬುನ್ನಿಸಾ ಎಂ ಖಾಜಿ. ಆರಂಭದಿಂದಲೂ ವಿವಾದದ ಕುರಿತು ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ವಿವಾದವನ್ನು ವಿಸ್ತ್ರತ ಪೀಠಕ್ಕೆ ವರ್ಗಾವಣೆಯನ್ನು ಮಾಡಿದ್ದರು.
ಇನ್ನು ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಬೆಂಗಳೂರಿನ ನಗರ ಪೊಲೀಸ್ ಆಯುಕ್ತರು ಎರಡು ವಾರಗಳ ಕಾಲ ಶಾಲೆ, ಕಾಲೇಜುಗಳ ಸುತ್ತಲೂ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದರು. ಇನ್ನೊಂದೆಡೆಯಲ್ಲಿ ಶಾಲೆ, ಕಾಲೇಜುಗಳಿಗೆ ಮೂರು ದಿನಗಳ ಕಾಲ ರಾಜ್ಯ ಸರಕಾರ ರಜೆಯನ್ನು ಘೋಷಣೆ ಮಾಡಿದೆ. ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಕಳೆದ ತಿಂಗಳು ಹಿಜಾಬ್ ಧರಿಸಲು ಒತ್ತಾಯಿಸಿದ್ದಕ್ಕಾಗಿ ತರಗತಿಗಳಿಂದ ನಿರ್ಬಂಧಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಹಿಜಾಬ್ ಪ್ರತಿಭಟನೆ ನಡೆಸಿದ್ದರು. ನಂತರದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ‘ಹಿಜಾಬ್’ ಪರ ಮತ್ತು ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡವು ಮತ್ತು ಕೆಲವು ಸ್ಥಳಗಳಲ್ಲಿ ಹಿಂಸಾಚಾರಕ್ಕೆ ತಿರುಗಿತ್ತು.
ಇದನ್ನೂ ಓದಿ : ಹಿಜಾಬ್ ವಿವಾದ : ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ, ರಕ್ತಪಾತಕ್ಕೆ ಅವಕಾಶ ಬೇಡ : ಮಾಜಿ ಸಿಎಂ ಕುಮಾರಸ್ವಾಮಿ
ಇದನ್ನೂ ಓದಿ : ಫೆಬ್ರವರಿ 14 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ರೂಲ್ಸ್
(Hijab controversy hearing postponement , hijab and saffron cannot be worn until final order)