School Reopen Karnataka : ಸೋಮವಾರದಿಂದ ಪ್ರೌಢಶಾಲೆ ಪುನಾರಂಭ : ಸಿಎಂ ಬಸವರಾಜ್‌ ಬೊಮ್ಮಾಯಿ

ಬೆಂಗಳೂರು : ಹಿಜಾಬ್‌ ವಿವಾದದಿಂದಾಗಿ ಕರ್ನಾಟಕದಲ್ಲಿ ಬಾಗಿಲು ಮುಚ್ಚಿದ್ದ ಪ್ರೌಢಶಾಲೆಗಳು (School Reopen Karnataka) ಸೋಮವಾರದಿಂದ (ಫೆ.14) ಆರಂಭವಾಗಲಿದೆ. ಮೊದಲ ಹಂತದಲ್ಲಿ ಪ್ರೌಢಶಾಲೆಗಳು ಪುನಾರಂಭಗೊಳ್ಳಲಿದ್ದು, ಕಾಲೇಜು ಆರಂಭದ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯ ನಂತರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲ ಹಂತದಲ್ಲಿ ರಾಜ್ಯದ ಎಲ್ಲ ಹೈಸ್ಕೂಲ್​ಗಳು ಕಾರ್ಯಾರಂಭ ಮಾಡಲಿವೆ. ಎರಡನೇ ಹಂತದಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳನ್ನು ತೆರೆಯಲಾಗುವುದು. ಮುಂದಿನ ಕ್ರಮದ ಕುರಿತು ಚರ್ಚಿಸಲು ಶುಕ್ರವಾರ (ಫೆ 11) ಸಂಜೆ ಎಲ್ಲಾ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಡಿಸಿಪಿಐ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹೈಕೋರ್ಟ್​ನಲ್ಲಿ ಹಿಜಾಬ್‌ ವಿವಾದದ ಕುರಿತು ವಿಚಾರಣೆ ಆರಂಭಗೊಂಡಿದೆ. ಸೋಮವಾರದಿಂದ ನಿತ್ಯವೂ ವಿಚಾರಣೆ ನಡೆಯಲಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಹೀಗಾಗಿ ರಾಜ್ಯದ ಜನರು ಶಾಂತಿಯನ್ನು ಕಾಪಾಡಬೇಕು. ಧಾರ್ಮಿಕ ಸಂಕೇತಗಳೊಂದಿಗೆ ಶಾಲೆಗೆ ಹೋಗುವುದು ಬೇಡ ಎಂಬ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸ ಬೇಕಾಗಿದೆ. ರಾಜ್ಯದ ಹಲವೆಡೆ ಉದ್ವಿಗ್ನ ಪರಿಸ್ಥಿತಿಗೆ ಹೊರಗಿನವರ ಪ್ರಚೋದನೆಯೇ ಮುಖ್ಯ ಕಾರಣವಾಗಿದೆ. ಶಾಂತಿ ಕಾಪಾಡುವಂತೆ ಅವರಲ್ಲಿಯೂ ಮನವಿ ಮಾಡಿದ್ದೇನೆ ಎಂದರು.

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ತ್ರಿ ಸದಸ್ಯ ಪೀಠ ವಿಚಾರಣೆಯನ್ನುಸೋಮವಾರಕ್ಕೆ ಮುಂದೂಡಿಕೆ ಮಾಡಿದೆ. ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸು ವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚನೆಯನ್ನು ನೀಡಿದೆ. ಆದರೆ ಅಂತಿಮ ಆದೇಶದವರೆಗೆ ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಉಡುಗೆಗಳನ್ನು ತೊಡುವಂತಿಲ್ಲ ಎನ್ನುವ ಮೂಲಕ ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ರೀತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ನೇತೃತ್ವದ ತ್ರೀ ಸದಸ್ಯ ಪೀಠ ಇಂದು ಮಧ್ಯಾಹ್ನ 2.30 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು. ಅರ್ಜಿದಾರ ಬಾಲಕಿಯರ ಪರ ದೇವದತ್ ಕಾಮತ್ ಹಾಗೂ ಸಂಜಯ್‌ ಹೆಗ್ಡೆ ಅವರು ವಾದ ಮಂಡಿಸಿದ್ದರು. ಸರ್ಕಾರದ ಪರ ಅಡ್ವಕೇಟ್ ಜನರಲ್ ಪ್ರಭುಲಿಂಗ್ ಕೆ.ನಾವದಗಿ ವಾದ ಮಂಡಿಸಿದ್ದರು. ಅರ್ಜಿದಾರರ ಪರ ವಕೀಲರು ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಹಾಗೂ ಸಂವಿಧಾನದಲ್ಲಿರುವ ಅಂಶಗಳನ್ನು ಸಂಜಯ್‌ ಹೆಗ್ಡೆ ಉಲ್ಲೇಖ ಮಾಡಿದ್ದರು. ಆದರೆ ನ್ಯಾಯಾಲಯ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ ಸೋಮವಾರದಿಂದ ನಿತ್ಯವೂ ಮಧ್ಯಾಹ್ನ 2.30 ರಿಂದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ : ಹಿಜಾಬ್ ವಿವಾದ ಮಧ್ಯ ಪ್ರವೇಶಕ್ಕೆ ಸುಪ್ರೀಂ ಕೋರ್ಟ್‌ ನಕಾರ

ಇದನ್ನೂ ಓದಿ : ಹಿಜಾಬ್‌ ವಿವಾದ ವಿಚಾರಣೆ ಮುಂದೂಡಿಕೆ : ಅಂತಿಮ ಆದೇಶದವರೆಗೂ ಹಿಜಾಬ್‌, ಕೇಸರಿ ಧರಿಸುವಂತಿಲ್ಲ

( School Upto 10th Standard to Reopen from feb 14th Karnataka says CM Basavaraj Bommai )

Comments are closed.