ಕೊಡಗು : ಇತ್ತೀಚಿನ ದಿನಗಳಲ್ಲಿ ನಕಲಿ ಮೊಟ್ಟೆಯ ಸುದ್ದಿ ಹರಿದಾಡುತ್ತಿದೆ. ಈ ನಡುವಲ್ಲೇ ಕೋಳಿಯ ಮೊಟ್ಟೆಯಲ್ಲಿ ಕಬ್ಬಿಣದ ಚೂರುಗಳು ಪತ್ತೆಯಾಗಿದ್ದು, ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಮೂವತ್ತೊಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆಹಾರ ಇಲಾಖೆಗೆ ದೂರು ನೀಡಲಾಗಿದೆ.
ಮೂವತ್ತೊಕ್ಲು ಗ್ರಾಮದ ಮಂಡೀರ ಕಾರ್ಯಪ್ಪ ಎಂಬವರು ಮಾದಾಪುರದ ಅಂಗಡಿಯೊಂದರಿಂದ ಹನ್ನೆರಡು ಮೊಟ್ಟೆಗಳನ್ನು ಖರೀದಿಸಿದ್ದರು. ಆದ್ರೆ ರಾತ್ರಿ ಮೊಟ್ಟೆಯನ್ನು ಬೇಯಿಸಿ ತಿನ್ನುವಾಗ ಬಾಯಲ್ಲಿ ಗಟ್ಟಿಯಾದ ವಸ್ತುವೊಂದು ಸಿಕ್ಕಿದೆ. ಕೂಡಲೇ ಪರೀಕ್ಷಿಸಿದಾಗ ಮೊಟ್ಟೆಯಲ್ಲಿ ಕಬ್ಬಿಣದ ಚೂರುಗಳು ಇರುವುದು ಪತ್ತೆಯಾಗಿದೆ. ಇದರಿಂದಾಗಿ ಕಾರ್ಯಪ್ಪ ಆತಂಕಕ್ಕೆ ಒಳಗಾಗಿದ್ದರು.
ಕೂಡಲೇ ತನ್ನ ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಮೊಟ್ಟೆಗಳನ್ನು ಹಾಗೆಯೇ ತೆಗೆದು ಇಟ್ಟಿದ್ದಾರೆ. ಬೆಳಿಗ್ಗೆ ಸಂಬಂಧಿ ನವೀನ್ ಎಂಬವರು ಪರೀಕ್ಷಿಸಿದಾಗ ರಾತ್ರಿಗಿಂತ ದೊಡ್ಡ ಗಾತ್ರದ ಕಬ್ಬಿಣದ ಚೂರು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಡೀರ ಕಾರ್ಯಪ್ಪ ಅವರು ಆಹಾರ ಇಲಾಖೆಗೆ ದೂರು ನೀಡಿದ್ದಾರೆ.
ಕೆಲವು ಮೊಟ್ಟೆಗಳನ್ನು ಅಲುಗಾಡಿಸಿದ್ರೆ ಒಳಗಿನಿಂದ ಅಲುಗಾಡುವ ಸದ್ದು ಕೇಳಿಬಂದಿದೆ. ಮಾತ್ರವಲ್ಲ ಕೆಲವೊಂದು ಮೊಟ್ಟೆಗಳು ರಬ್ಬರ್‌ನಂತೆ ಬಳಕುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ಮೊಟ್ಟೆ ಇರಬಹುದು ಅನ್ನೋ ಶಂಕೆ ಗ್ರಾಮಸ್ಥರನ್ನು ಕಾಡುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳನ್ನು ಮೊಟ್ಟೆಗಳನ್ನು ಪರಿಶೀಲನೆ ನಡೆಸಿದ ನಂತರವಷ್ಟೇ ಮೊಟ್ಟೆಯ ರಹಸ್ಯ ಬಯಲಾಗೋದಕ್ಕೆ ಸಾಧ್ಯ.
( Iron detection in the egg: Consumer complained to the Food Department )