ಬೆಂಗಳೂರು : ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಜವಾದ್ ಚಂಡಮಾರುತದ ಆರ್ಭಟ ಜೋರಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಳೆಯಿಂದ ತತ್ತರಿಸಿದ್ದರೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿನ್ನೆಯಿಂದಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಅಕ್ಟೋಬರ್ 17ರ ವರೆಗೆ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆಯನ್ನು ನೀಡಿದೆ.

ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ಆರ್ಭಟಕ್ಕೆ ಕೆರೆಯಂತಾಗಿ ಹೋಗಿತ್ತು. ಅಲ್ಲದೇ ಕೆ.ಆರ್. ಮಾರ್ಕೆಟ್, ಮಲ್ಲೇಶ್ವರಂ, ಸದಾಶಿವನಗರ, ಬಸವನಗುಡಿ, ಬನಶಂಕರಿ, ವಿಧಾನಸೌಧ, ಹನುಮಂತನಗರ, ಆರ್.ಆರ್.ನಗರ ಹಾಗೂ ಹೆಬ್ಬಾಳ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಕಮಲಾನಗರದ ಬಳಿಯಲ್ಲಿ ಮೂರು ಅಂತಸ್ತಿನ ಮನೆಯೊಂದು ಕುಸಿಯುವ ಭೀತಿ ಎದುರಾಗಿದೆ. ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಇಂದೂ ಕೂಡ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದ ಮಳೆ
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ರೆ, ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನದ ನಂತರದಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಅದ್ರಲ್ಲೂ ರಾತ್ರಿ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಭತ್ತದ ಬೆಳೆ ಸದ್ಯ ಬೆಳೆದು ನಿಂತಿದ್ದು, ಮಳೆಯಿಂದಾಗಿ ಕೃಷಿಕರು ಕಂಗಾಲಾಗಿದ್ದಾರೆ.

ಇಂದೂ ಭಾರಿ ಮಳೆ ಎಚ್ಚರಿಕೆ
ರಾಜ್ಯದ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಕೋಲಾರ, ರಾಮನಗರ, ರಾಯಚೂರು, ಕೊಪ್ಪಳ, ಚಿಕ್ಕಬಳ್ಳಾಪುರ, ವಿಜಯಪುರ ಜಿಲ್ಲೆಗಳಲ್ಲಿ ಈ ತಿಂಗಳ 17ರ ವರೆಗೂ ಮಳೆಯ ಆರ್ಭಟ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ : ಮುಜರಾಯಿ ಇಲಾಖೆ ಅರ್ಚಕ ಹಾಗೂ ನೌಕರರಿಗೆ ಭರ್ಜರಿ ಕೊಡುಗೆ ಘೋಷಿಸಿದ ರಾಜ್ಯ ಸರ್ಕಾರ
ಇದನ್ನೂ ಓದಿ : ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ : ಕಡಲಾಳದ ಯಾನ ಹೇಗಿರುತ್ತೆ ಗೊತ್ತಾ ?
( Javad storm in Karnataka, heavy rain till October 17, announces Yellow Alert today )