ಭಾನುವಾರ, ಏಪ್ರಿಲ್ 27, 2025
Homekarnatakaಯಕ್ಷಗಾನದ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ

ಯಕ್ಷಗಾನದ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ

- Advertisement -

Subramanya Dhareshwara : ಕರಾವಳಿಯ ಗಂಡುಕಲೆ ಯಕ್ಷಗಾನದ ಭಾಗವತಿಕೆಗೆ ಹೊಸ ರೂಪವನ್ನು ಕೊಟ್ಟವರು. ನಾಲ್ಕು ದಶಕಗಳ ಕಾಲ ಯಕ್ಷಗಾನ ಗಾನಕೋಗಿಲೆ ಆಗಿ ಮಿಂಚಿದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದಾಗಿ ಬೆಂಗಳೂರಿನ ಪುತ್ರನ ಮನೆಯಲ್ಲಿದ್ದ ಧಾರೇಶ್ವರ ಅವರು ಬೆಳಗ್ಗೆ 4.30ಕ್ಕೆ ವಿಧಿವಶರಾಗಿದ್ದಾರೆ. ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡರ ನಂತರದಲ್ಲಿ ಯಕ್ಷಗಾನ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ಸುಬ್ರಹ್ಮಣ್ಯ ಧಾರೇಶ್ವರ ಅವರು. ಅಮೃತೇಶ್ವರಿ, ಪೆರ್ಡೂರು, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಕೆಲಸ ಮಾಡಿದ್ದಾರೆ. ಗೋಕರ್ಣದಲ್ಲಿ ಜನಿಸಿದ್ದ ಧಾರೇಶ್ವರ ಅವರು ಯಕ್ಷಗಾನ ಲೋಕದಲ್ಲಿ ಸಾಧನೆಯ ಶಿಖರವೇರಿದ್ದಾರೆ.

ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಗುರು ನಾರಣಪ್ಪ ಉಪ್ಪೂರ ಅವರ ಶಿಷ್ಯರಾಗಿ ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡಿದವರು. ಗೋಕರ್ಣದಲ್ಲಿ ಎಲೆಕ್ಟ್ರಿಕಲ್‌ ಅಂಗಡಿಯನ್ನು ಇಟ್ಟುಕೊಂಡಿದ್ದರು. ಹೀಗಾಗಿಯೇ 1980 ರಲ್ಲಿ ಅಮೃತೇಶ್ವರಿ ಮೇಳಕ್ಕೆ ಎಲೆಕ್ಟ್ರಿಷಿಯನ್‌ ಆಗಿ ಸೇರ್ಪಡೆಗೊಂಡಿದ್ದರು. ನಂತರದಲ್ಲಿ ಸಂಗೀತಗಾರನಾಗಿಯೂ ಕೆಲಸ ಮಾಡುತ್ತಿದ್ದರು.

ನಾರ್ಣಪ್ಪ ಉಪ್ಪೂರು, ಕಾಳಿಂಗ ನಾವಡ, ಹಿಲ್ಲೂರು ಗಣಪತಿ ಹೆಗಡೆ ಅವರಿಂದ ಭಾಗವತರಾಗಿ ಹೊರಹೊಮ್ಮಿದ್ದರು. ಯಕ್ಷಗಾನ ಲೋಕದ ಪ್ರಧಾನ ಮೇಳಗಳಲ್ಲಿ ಒಂದಾಗಿರುವ ಪೆರ್ಡೂರು ಮೇಳದಲ್ಲಿ 28 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನ ಭಾಗವತರಾಗಿ ಯಕ್ಷಗಾನ ಭಾಗವತಿಕೆಗೆ ಹೊಸ ಭಾಷ್ಯೆ ಬರೆದವರು. ಹೊಸ ಪ್ರಸಂಗಗಳಿಗೆ ಸಮರ್ಥ ನಿರ್ದೇಶನ ಮಾಡುವ ಮೂಲಕ ಪ್ರಸಂಗ, ಪ್ರಸಂಗಕರ್ತರಿಗೆ ನ್ಯಾಯ ಒದಗಿಸಿದ ಕೀರ್ತಿ ಧಾರೇಶ್ವರ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ : ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

ಪೆರ್ಡೂರ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತರಾಗಿಯೇ ಯಕ್ಷಗಾನ ರಂಗದಿಂದ ನಿವೃತ್ತರಾಗಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಮತ್ತೆ ಒಂದು ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವತರಾಗಿ ಕಾಣಿಸಿಕೊಂಡಿದ್ದಾರೆ. ಹಿಂದೂಸ್ಥಾನಿ ರಾಗಗಳ ಬಗ್ಗೆ ಚೆನ್ನಾಗಿಯೇ ಅರಿವಿದ್ದ ಧಾರೇಶ್ವರ ಅವರು ಯಕ್ಷಗಾನಕ್ಕೆ ಹೊಸ ರಾಗಗಳನ್ನು ಪರಿಚಯಿಸಿದ್ದರು.

400 ಕ್ಕೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್‌ಗಳಿಗೆ ಸುಬ್ರಹ್ಮಣ್ಯ ಧಾರೇಶ್ವರ ಅವರು ಧ್ವನಿ ನೀಡಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಯಕ್ಷಗಾನ ರಂಗದಿಂದ ನಿವೃತ್ತರಾದ ಬಳಿಕ ಧಾರೇಶ್ವರ ಚಾರಿಟೇಬಲ್‌ ಟ್ರಸ್ಟ್‌ ಮೂಲಕವಾಗಿ ಯಕ್ಷಗಾನ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಅಮೃತವರ್ಷಿಣಿ, ಗಗನ ಗಾಮಿನಿ ಪ್ರಸಂಗಗಳು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿದೆ.

ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !

ಕೇವಲ ಯಕ್ಷಗಾನ ಮಾತ್ರವಲ್ಲದೇ ನಾಟಕರಂಗದಲ್ಲಿಯೂ ಸುಬ್ರಹ್ಮಣ್ಯ ಧಾರೇಶ್ವರ ಅವರ ಗುರುತಿಸಿಕೊಂಡಿದ್ದರು. ಯಕ್ಷಗಾನ ರಂಗದಲ್ಲಿ ಸಾಧನೆಯ ಶಿಖರವೇರಿದ್ದರೂ ಕೂಡ ನಾಟಕ ರಂಗದಲ್ಲಿ ಇಂದಿಗೂ ತಮ್ಮ ಹೆಸರನ್ನು ಉಳಿಸಿಕೊಂಡಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ಅವರ ಅಂತ್ಯ ಕ್ರೀಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ.

Karnataka News Kundapura Bhagavatha Subramanya Dhareshwara No more

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular