ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು, ಅಗಸ್ಟ್ 12ರ ವರೆಗೂ ಗುಡುಗು, ಸಿಡಿಲು ಸಹಿತ ಬಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ರಾಜ್ಯ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರ, ಕೇರಳ ಕರಾವಳಿ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಮೀ ತಲುಪುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ನೈಋುತ್ಯ ಮುಂಗಾರು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿದ್ದು, ಉತ್ತರ ಒಳನಾಡು ಹಾಗು ಕರಾವಳಿಯಲ್ಲಿ ದುರ್ಬಲವಾಗಿದೆ.. ಕರಾವಳಿಯ ಹಲವು ಕೆಲ ದಿನಗಳಿಂದ ಮಳೆಯಾಗುತ್ತಿದೆ.
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಕಟ್ಕೋಳ್‌ನಲ್ಲಿ 4 ಸೆಂ.ಮೀ, ಬಾಗಲಕೋಟೆಯ ಕೆರೂರು, ಕೊಡಗಿನ ಭಾಗಮಂಡಲ, ಮೈಸೂರಿನ ಸಾಲಿಗ್ರಾಮ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದ್ದರೆ, ಉಡುಪಿಯ ಕೊಲ್ಲೂರು, ಕೋಲಾರ, ದಾವಣಗೆರೆಯ ಚನ್ನಗಿರಿಯಲ್ಲಿ ತಲಾ 2 ಸೆಂ.ಮೀ ಮಳೆ ಸುರಿದಿದೆ.