School Reopen : ಆಗಸ್ಟ್‌ 23ರಿಂದ ಶಾಲಾರಂಭ : ಪೋಷಕರಿಗೂ ಕೊರೊನಾ ವ್ಯಾಕ್ಸಿನ್‌

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಒಂದೆಡೆ ಲಾಕ್‌ಡೌನ್‌, ಸೀಲ್‌ಡೌನ್‌ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಆಗಸ್ಟ್‌ 23ರಿಂದ ರಾಜ್ಯದಲ್ಲಿ ಶಾಲಾರಂಭ ಮಾಡಲು ಮುಂದಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೋಷಕರಿಗೆ ವ್ಯಾಕ್ಸಿನ್‌ ನೀಡುವ ಕುರಿತು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.

ಕರ್ನಾಟಕದಲ್ಲಿ 9ನೇ ತರಗತಿಯಿಂದ 12ನೇ ತರಗತಿಗಳನ್ನು ಆಗಸ್ಟ್‌ 23ರಿಂದ ಆರಂಭಿಸುವುದಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಈಗಾಗಲೇ ಘೋಷಣೆಯನ್ನು ಮಾಡಿದ್ದರು. ಇದೀಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಕೂಡ ಶಾಲಾರಂಭ ಮಾಡುವುದನ್ನು ಖಚಿತ ಪಡಿಸಿದ್ದಾರೆ. ಅಲ್ಲದೇ ಕೊರೊನಾ ಜೊತೆ ಬದುಕುವುದನ್ನು ಕಲಿಯ ಬೇಕು ಅಂತಾನೂ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನು ಸಿದ್ದಪಡಿಸುತ್ತಿದ್ದು, ಸಿದ್ದತೆಗಳನ್ನು ನಡೆಸುತ್ತಿದೆ.

ಕೊರೊನಾ ವೈರಸ್‌ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 9 ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರು ಈವರೆಗೆ ಕೋವಿಡ್‌ ಲಸಿಕೆ ಪಡೆಯದಿದ್ದರೆ ಅಂತಹ ಪೋಷಕರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಮಕ್ಕಳ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಿ, ಲಸಿಕೆ ಪಡೆಯದವರ ಪಟ್ಟಿತಯಾರಿಸಿ ಆರೋಗ್ಯ ಇಲಾಖೆಗೆ ನೀಡುವಂತೆ ಶಾಲೆಯ ಮುಖ್ಯಸ್ಥರಿಗೆ ಸೂಚಿಸುವಂತೆ ಶಿಕ್ಷಣ ಇಲಾಖೆಯನ್ನು ಆರೋಗ್ಯ ಇಲಾಖೆ ಕೋರಿದೆ.

ಈಗಾಗಲೇ ಶೇ.೮೦ಕ್ಕೂ ಅಧಿಕ ಶಿಕ್ಷಕರು ಹಾಗೂ ಶಾಲಾ ಸಿಬ್ಬಂಧಿಗಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದ್ದು, ಉಳಿದವರಿಗೆ ಶಾಲಾರಂಭಕ್ಕೂ ಮೊದಲು ನೀಡಲಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಪೋಷಕರಿಗೂ ಕೊರೊನಾ ಲಸಿಕೆಯನ್ನು ಆಧ್ಯತೆಯ ಮೇಲೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

Comments are closed.