Nandini Milk : ಬಾಯಿ ಸುಡಲಿದೆ ನಂದಿನಿ ಹಾಲು : ಪ್ರತೀ ಲೀಟರ್‌ಗೆ 5 ರೂಪಾಯಿ ಏರಿಕೆಗೆ KM ಪ್ರಸ್ತಾಪ

ಬೆಂಗಳೂರು : ಕೊರೋನಾದ ಬಳಿಕ ಪಾತಾಳಕ್ಕೆ ಬಿದ್ದಿರೋ ಜನಜೀವನ, ವ್ಯಾಪಾರವನ್ನು ಸರಿತೂಗಿಸೋ ಲೆಕ್ಕಾಚಾರದಲ್ಲಿದ್ದ ಜನರಿಗೆ ಸರ್ಕಾರ‌ ಮೇಲಿಂದ ಮೇಲೆ ಶಾಕ್ ನೀಡಲಾರಂಭಿಸಿದೆ. ಪ್ರತಿ ಸೂರ್ಯೋದಯದ ಜೊತೆಗೂ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಒಂದೆಡೆಯಾದರೇ ಇನ್ನೊಂದೆಡೆ ಅಡುಗೆ ಎಣ್ಣೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಮೊನ್ನೆ ಮೊನ್ನೆ ವಿದ್ಯುತ್ ಹಾಗೂ ಹೊಟೇಲ್ ಊಟ ತಿಂಡಿ ದರವೂ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಈಗ ಹಾಲಿನ ದರ (Nandini Milk) ಬರೋಬ್ಬರಿ 5 ರೂಪಾಯಿ ಏರಿಕೆಯಾಗೋ ಲಕ್ಷಣಗಳಿವೆ.

ಹೌದು, ಇನ್ಮುಂದೆ ಈ ದುನಿಯಾ ಬರಿ ದುಬಾರಿ ದುನಿಯಾ. ಹಾಲಿನ ದರ ಏರಿಕೆಗೆ ಒಂದು ತಿಂಗಳಿಂದ ನಿರಂತರ ಸರ್ಕಸ್ ನಡೆದಿತ್ತು. ಈಗಾಗಲೇ ಬೆಲೆ ಏರಿಕೆಗೆ ಆಗ್ರಹಿಸಿದ್ದ ಹಾಲು ಒಕ್ಕೂಟಗಳು ಈಗ ಪಟ್ಟು ಹಿಡಿದು ಕೂತಿದ್ದು, ವಿದ್ಯುತ್ ದರದಂತೆ ಹಾಲಿನ ದರವನ್ನೂ ಏರಿಸಲು ಒತ್ತಾಯಿಸಿದ್ದಾರೆ. ರಾಜ್ಯದ ಪ್ರಮುಖ 14 ಹಾಲು ಒಕ್ಕೂಟಗಳಿಂದ ಮಾಸ್ಟರ್ ಪರ ಪ್ಯಾನ್ ನಡೆದಿದ್ದು, ಸಿಎಂ ಬೊಮ್ಮಾಯಿ ಭೇಟಿ ಮಾಡಿ ಬೆಲೆ ಏರಿಕೆಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ. ಏಪ್ರಿಲ್ 10ರೊಳಗೆ ಬೊಮ್ಮಾಯಿ ಭೇಟಿ ಮಾಡಲು ನಿರ್ಧಾರಿಸಿರುವ ಹಾಲು ಒಕ್ಕೂಟಗಳು ಬರೋಬ್ಬರಿ ೫ ರೂಪಾಯಿ ಏರಿಕೆಗೆ ಆಗ್ರಹಿಸಲಿದೆಯಂತೆ.

ಈಗಾಗಲೇ ಈ ಬಗ್ಗೆ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಸಿಎಂ ಜೊತೆಗೆ ಚರ್ಚೆ ಮಾಡಿ ದರ ಏರಿಕೆಯ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಿದ್ದಾರೆ ಎಂದು ನೀರಿಕ್ಷಿಸಲಾಗುತ್ತಿದೆ. ಸದ್ಯ ರಾಜ್ಯದ 14 ಹಾಲು ಒಕ್ಕೂಟಗಳಿಂದ ಪ್ರತಿ ಲೀ.ಗೆ 5 ರೂ. ದರ ಏರಿಕೆಗೆ ಮನವಿ ಸಲ್ಲಿಸಿದೆ. ಆದ್ರೆ KMF ಸರ್ಕಾರದ ಮುಂದೆ 2 ರೂ ಬೆಲೆ ಏರಿಕೆಗೆ ಮಾತ್ರ ಬೇಡಿಕೆ ಇಡಲಿದೆಯಂತೆ. ಒಂದೊಮ್ಮೆ ಸಿಎಂ ಬೊಮ್ಮಾಯಿ ಗ್ರೀನ್ ಸಿಗ್ನಲ್ ನೀಡಿದ್ರೆ ಮೇ 1 ರಿಂದ ರಾಜ್ಯದಲ್ಲಿ ಹಾಲಿನ‌ ದರ ಲೀಟರ್ ಮೇಲೆ ಎರಡು ರೂಪಾಯಿ ಏರಿಕೆಯಾಗಲಿದೆ.

ಕೊರೋನಾ ಸಂದರ್ಭದಲ್ಲಿ ಹಾಲಿಗೆ ಬೇಡಿಕೆ‌ ಕುಗ್ಗಿದ್ದ ಕಾರಣ ಹಾಲು ಒಕ್ಕೂಟಗಳು ನಿರ್ವಹಣೆ ವೆಚ್ಚವೂ ಸೇರಿದಂತೆ ನಾನಾ ಕಾರಣಕ್ಕೆ ನಷ್ಟಕ್ಕೆ ಜಾರಿದ್ದವು. ಈಗ ಇದೇ ನಷ್ಟ ಹಾಗೂ ನಿರ್ವಹಣೆ ವೆಚ್ಚ ದುಬಾರಿ ಕಾರಣ ನೀಡಿ ದರ ಏರಿಕೆಗೆ ಸರ್ಕಾರಕ್ಕೆ ಕೆಎಂಎಫ್ ದುಂಬಾಲು ಬಿದ್ದಿದೆ. ಆದರೆ ಈಗಾಗಲೇ ಎಲ್ಲ ದರ ಏರಿಕೆಯಿಂದ ಕಂಗಾಲಾಗಿರುವ ಜನರು ಒಂದೊಮ್ಮೆ‌ಹಾಲಿನ ದರವೂ ಏರಿಕೆಯಾದಲ್ಲಿ ಸರ್ಕಾರದ ವಿರುದ್ಧ ತಿರುಗಿ ಬೀಳೋದು ಫಿಕ್ಸ್ ಎಂಬಂತಾಗಿದ್ದು ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

ಇದನ್ನು ಓದಿ : ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿ ಬೆಲ್ಲ! ತುಟ್ಟಿ ಭತ್ಯೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ

ಇದನ್ನೂ ಓದಿ : ಮುಂದುವರೆದ ಬೆಲೆ ಏರಿಕೆ : ಇನ್ಮುಂದೇ ಖಾಸಗಿ ವಾಹನ ಪ್ರಯಾಣವೂ ದುಬಾರಿ

KMF propose Nandini Milk price Hike for 5 rs per liter

Comments are closed.