ಬೆಂಗಳೂರು : ಕೊರೊನಾ ಲಾಕ್ ಡೌನ್, ಸಾರಿಗೆ ನೌಕರರ ಮುಷ್ಕರದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕೆಎಸ್‌ಆರ್‌ಟಿಸಿ ಇದೀಗ ಚೇತರಿಕೆಯ ಹಾದಿ ಹಿಡಿದಿದೆ. ಅನ್‌ಲಾಕ್ ಬೆನ್ನಲ್ಲೇ ನಿತ್ಯವೂ ೪೦೦೦ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಭರ್ಜರಿ ಆದಾಯಗಳಿಸುತ್ತಿದೆ.

ಕಳೆದೆರಡು ವರ್ಷಗಳಿಂದಲೂ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾರಿಗೆ ಉದ್ಯಮ ನೆಲಕಚ್ಚಿದೆ. ಅದ್ರಲ್ಲೂ ಸರಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳು ನಷ್ಟದ ಹಾದಿಯಲ್ಲಿದೆ. ಡಿಸೇಲ್ ಬೆಲೆ ಏರಿಕೆಯಿಂದ ಟಿಕೆಟ್ ದರ ಹೆಚ್ಚಳ ಮಾಡಿದ್ದ ಸಾರಿಗೆ ಸಂಸ್ಥೆಗಳೀಗ ಕೊರೊನಾ ಸೋಂಕು ದೊಡ್ಡಮಟ್ಟದಲ್ಲಿ ಹೊಡೆತವನ್ನೇ ಕೊಟ್ಟಿದೆ. ನಿತ್ಯವೂ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಿತ್ತು. ರಾಜ್ಯ ಹಾಗೂ ಹೊರ ರಾಜ್ಯ ಸಂಚಾರದ ಬಸ್ಸುಗಳ ನಿರ್ವಹಣೆ ಕೆಎಸ್‌ಆರ್‌ಟಿಸಿಗೆ ಹೊರೆಯಾಗಿ ಪರಿಣಮಿಸುತ್ತಿತ್ತು. ಈ ನಡುವಲ್ಲೇ ಸಾರಿಗೆ ನೌಕರರು ನಡೆಸಿದ ಪ್ರತಿಭಟನೆಯಿಂದ ಸಂಕಷ್ಟ ಎದುರಾಗಿತ್ತು. ಸಾರಿಗೆ ನೌಕರರ ಪ್ರತಿಭಟನೆಯ ನಡುವಲ್ಲೇ ರಾಜ್ಯದಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ತಬ್ದವಾಗಿತ್ತು.

ಆದ್ರೀಗ ಕೊರೊನಾ ಸೋಂಕು ಕಡಿಮೆಯಾದ ಬೆನ್ನಲ್ಲೇ ರಾಜ್ಯ ಸರಕಾರ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಬಸ್ ಸಂಚಾರವನ್ನು ಆರಂಭಿಸಿದೆ. ನಿತ್ಯವೂ ಕೆಎಸ್‌ಆರ್‌ಟಿಸಿಯ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಬಸ್ಸುಗಳು ಸಂಚರಿಸುತ್ತಿದ್ದು, ನಿತ್ಯವೂ ಹತ್ತು ಲಕ್ಷಕ್ಕೂ ಅಧಿಕ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ ನಾಲ್ಕೂವರೆ ಕೋಟಿ ರೂಪಾಯಿ ಆದಾಯ ಬರುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಸಂಚಾರ ವ್ಯವಸ್ಥಾಪಕ ನಿರ್ದೇಶಕರ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ.

ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ಉದ್ಯಮ ಒಂದಷ್ಟು ಚೇತರಿಕೆಯನ್ನು ಕಾಣಬಹುದು. ಆದರೆ ಕೊರೊನಾ, ಡೆಲ್ಟಾ ಫ್ಲಸ್ ಅಬ್ಬರಿಸಿದ್ರೆ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಬಸ್ ಸಂಚಾರ ಆರಂಭದ ಬೆನ್ನಲ್ಲೇ ಬಸ್ಸುಗಳಲ್ಲಿ ನೂಕು ನುಗ್ಗಲು ಉಂಟಾಗುತ್ತಿದ್ದು, ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗೋ ಮುನ್ಸೂಚನೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.