ಬೆಂಗಳೂರು: ಐದು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು(Mohamed Muizzu) ಎರಡು ದಿನಗಳ ರಾಜ್ಯ ಭೇಟಿಗಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
ಮಾಲ್ಡೀವ್ಸ್ ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ (Sajidha Mohamed) ಅವರೊಂದಿಗೆ ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷರನ್ನು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ರಾಜ್ಯ ಸರ್ಕಾರದ ಪರವಾಗಿ ಸ್ವಾಗತಿಸಿದರು.

ನಂತರ ರಾಜಭವನಕ್ಕೆ ಆಗಮಿಸಿದ ಮೊಹಮ್ಮದ್ ಮುಯಿಝು ಮತ್ತು ಸಾಜಿದಾ ಮೊಹಮ್ಮದ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜಭವನದಲ್ಲಿ ಆತ್ಮೀಯವಾಗಿ ಸ್ವಾಗತ ಕೋರಿದರು. ನಂತರ ರಾಜಭವನದ ಬಾಂಕ್ವೆಟ್ ಹಾಲ್ ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರ ಗೌರವಾರ್ಥ ರಾಜ್ಯಪಾಲರು ಭೋಜನಕೂಟ ಏರ್ಪಡಿಸಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು.
ಮಾಲ್ಡೀವ್ಸ್ ಪ್ರಥಮ ಮಹಿಳೆ ಸಾಜಿದಾ ಮೊಹಮ್ಮದ್ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದು, ಇಂದಿನ ಅವರ ಭೇಟಿಯ ಜೊತೆಗೆ ಒಂದು ವ್ಯಾಪಾರ ನಿಯೋಗ ಕೂಡಾ ಬೆಂಗಳೂರಿಗೆ ಬಂದಿದೆ.
ಮಾಲ್ಡೀವ್ಸ್ ನಲ್ಲಿ ಭಾರತದ ರುಪೇ ಕಾರ್ಡ್ ಅನ್ನು ಪ್ರಾರಂಭಿಸಲಾಗಿದ್ದು, ಮಾಲ್ಡೀವ್ಸ್ ನ ಅಡ್ಡುವಿನಲ್ಲಿ ಭಾರತೀಯ ದೂತಾವಾಸ ಮತ್ತು ಬೆಂಗಳೂರಿನಲ್ಲಿ ಮಾಲ್ಡೀವ್ಸ್ ದೂತಾವಾಸ ತೆರೆಯುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಮಾತುಕತೆಗಳು ನಡೆದಿವೆ. ಅಲ್ಲದೇ ಭಾರತದ ನೆರೆಹೊರೆ ಮೊದಲು ಮತ್ತು ಸಾಗರ್ ವಿಷನ್ ನೀತಿಯಲ್ಲಿ ಮಾಲ್ಡೀವ್ಸ್ ಪ್ರಮುಖ ಸ್ಥಾನವನ್ನು ಹೊಂದಿದೆ.

ಇದೇ ವೇಳೆ, ಮಾಲ್ಡೀವ್ಸ್ ಸರ್ಕಾರವು ಬೆಂಗಳೂರಿನ ಪ್ರಮುಖ ಐಟಿ ಉದ್ಯಮದೊಂದಿಗೆ ಸಹಭಾಗಿತ್ವವನ್ನು ಹೊಂದಲು ಆಸಕ್ತಿಯನ್ನು ಹೊಂದಿದ್ದು, ಮಾಲ್ಡೀವ್ಸ್‌ಗೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತಲುಪಲು ರಾಜ್ಯದ ಕರಕುಶಲ ಮತ್ತು ಕೈಮಗ್ಗಗಳ ಮಾರುಕಟ್ಟೆಯನ್ನು ಉತ್ತೇಜಿಸಲು ಮಾಲ್ಡೀವ್ಸ್‌ನೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಲು ಕರ್ನಾಟಕ ಸರ್ಕಾರ ಕೂಡಾ ಸಕಾರಾತ್ಮಕವಾಗಿದೆ.
ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ಪ್ರಮುಖ ಪಾಲುದಾರ ಮತ್ತು ನೆರೆಯ ರಾಷ್ಟ್ರವಾಗಿದ್ದು, ಶತಮಾನಗಳಷ್ಟು ಹಳೆಯ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಹೊಂದಿದೆ.
ಐದು ದಿನಗಳ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ನವದೆಹಲಿಗೆ ಆಗಮಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷರಿಗೆ ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತ ಕೋರಿದ್ದರು.