ಮೈಸೂರು : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿರ್ಮಾಣ ಮಾಡಿರುವ ಈಜುಕೊಳ ವಿವಾದ ತನಿಖೆ ಆರಂಭವಾಗಿದೆ. ಇದರ ಬೆನ್ನಲ್ಲೇ ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿರುವ ಈಜುಕೊಳದ ಪೋಟೋ ವನ್ನು ನಗರಪಾಲಿಕೆ ಮಾಜಿ ಸದಸ್ಯ ಕೆವಿ ಮಲ್ಲೇಶ್ ಹಂಚಿಕೊಂಡಿದ್ದಾರೆ.

ಪಾರಂಪರಿಕ ಕಟ್ಟಡವಾಗಿರುವ ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ರೋಹಿಣಿ ಸಿಂಧೂರಿ ಅವರು ನಿಯಮ ಮೀರಿ ಈಜುಕೊಳ ನಿರ್ಮಿಸಿದ್ದಾರೆಂದು ಕೆವಿ ಮಲ್ಲೇಶ್ ಆರೋಪಿಸಿದ್ದರು. ಅಲ್ಲದೇ ಶಾಸಕ ಸಾ.ರಾ.ಮಹೇಶ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ತುಮಕೂರಿ ನ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಅವರು ಸರಕಾರಕ್ಕೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ನಿರ್ಮಿಸಿರುವ ಈಜುಕೊಳ, ಜಿಮ್ ಕುರಿತು ತನಿಖೆ ನಡೆಸಿ ಏಳು ದಿನದೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು.

ಇದೀಗ ಮಲ್ಲೇಶ್ ಅವರು ಸ್ವಿಮ್ಮಿಂಗ್ ಪೂಲ್‌ನ ಫೋಟೋ ಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಮಕ್ಕಳ ಮತ್ತು ವಯಸ್ಕರ ಪೂಲ್ ಇದೆ. ಇದು ಒಳಾಂಗಣ ಈಜುಕೊಳ ವಾಗಿದ್ದು ಮೇಲ್ಚಾವಣೆ ನಿರ್ಮಿಸಲಾಗಿದೆ.
