ಬೆಂಗಳೂರು : ಓಮಿಕ್ರಾನ್ ವೈರಸ್ ನ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ರಾಜ್ಯ ಸರಕಾರ ಅಲರ್ಟ್ ಆಗಿದೆ. ಈ ಹಿನ್ನೆಲೆಯಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ (Omicron Meeting) ನಡೆದಿದೆ. ಸಭೆಯಲ್ಲಿ ವಿಧಾನಸಭಾ ಚಳಿಗಾಲದ ಅಧಿವೇಶನ ಸೇರಿದಂತೆ ಹಲವು ವಿಚಾರಗಳ ಕುರಿತು ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಶಾಲೆ, ಮದುವೆ, ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧ ಸೇರಿದಂತೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಸಿಎಂ ಬೊಮ್ಮಾಯಿ ನಡೆಸಿದ ಸಭೆಯ ಪ್ರಮುಖ ಅಂಶಗಳು :
- ಓಮಿಕ್ರಾನ್ ರೂಪಾಂತರಿ ತಳಿಯ ವೈರಸ್ ನಿಂದ ಎರಡು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇಡೀ ವಿಶ್ವದಲ್ಲಿ ಸುಮಾರು 400 ಪ್ರಕರಣಗಳು ಈ ವರೆಗೆ ವರದಿಯಾಗಿದೆ.
- ಅಧಿಕೃತವಾಗಿ ಈ ಪ್ರಕರಣಗಳ ಕುರಿತು ಯಾವುದೇ ಅಧ್ಯಯನ ವರದಿ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ದೊರೆತ ಮಾಹಿತಿಯ ಪ್ರಕಾರ ಈ ವೈರಸ್ ಸೋಂಕು ಹೆಚ್ಚು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿತರಿಗೆ mild symptoms ಕಂಡು ಬಂದಿದೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ.
- ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ತಿಳಿಸಿದರು.
- ಭಾರತ ಸರ್ಕಾರಕ್ಕೆ ಪತ್ರ ಬರೆದು, ಎನ್ ಸಿ ಬಿ ಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿ ಮಾಡಲಾಗುವುದು.
- ಅದಾಗ್ಯೂ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೇಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್ ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ.
- ಒಮಿಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಕುರಿತು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
- ಸಿನೆಮಾ, ಮಾಲ್ ಗಳಿಗೆ ಭೇಟಿ ನೀಡುವವರಿಗೆ, ಶಾಲೆಗೆ ಹಾಜರಾಗುವ ಮಕ್ಕಳ ಪೋಷಕರಿಗೆ ಲಸಿಕೆ ಪಡೆಯುವುದು ಕಡ್ಡಾಯ ಮಾಡಲಾಗುವುದು.
- ಸರ್ಕಾರಿ ನೌಕರರಿಗೆ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗುವುದು.
- ನರ್ಸಿಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಶೇ. 100 ರಷ್ಟು ಪರೀಕ್ಷೆ ನಡೆಸುವುದು. 65 ವರ್ಷ ಮೇಲಿನ ವ್ಯಕ್ತಿಗಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಸಹ ಪರೀಕ್ಷೆ ನಡೆಸಲಾಗುವುದು.
- ಶಾಲೆ, ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ.
- ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಲಾಗುವುದು.
- ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುವುದು. ಅದಾಗ್ಯೂ ಶಾಲೆಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ.
- ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲಾಗುವುದು. (increased to 1 lakh) ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಹೆಚ್ಚಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ತೀರ್ಮಾನಿಸಲಾಯಿತು.
- ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಆಕ್ಸಿಜನೇಟೆಡ್ ಬೆಡ್ ಗಳನ್ನು ಸಜ್ಜುಗೊಳಿಸಬೇಕು; ಆಕ್ಸಿಜನ್ ಪ್ಲಾಂಟ್ ಗಳನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಲಾಗಿದೆ.
- ಆಕ್ಸಿಜನ್ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲವನ್ನು ಜಾಗೃತಗೊಳಿಸಬೇಕು.
- ಔಷಧಗಳ ಲಭ್ಯತೆ ಖಾತರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
- ಸಂಪರ್ಕಿತರ ಪತ್ತೆಯ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ.
- ರಾಜ್ಯಾದ್ಯಂತ ನಿಯಂತ್ರಣ ಕೊಠಡಿ ಪ್ರಾರಂಭಿಸಲು ನಿರ್ಧರಿಸಲಾಯಿತು.
- ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಒಮಿಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಪೊಲೀಸರಿಗೆ ಸೂಚಿಸಲಾಯಿತು.


ಇದನ್ನೂ ಓದಿ : Maharashtra Omicron Blast : ಮುಂಬೈ 10, ಮಹಾರಾಷ್ಟ್ರದಲ್ಲಿ ಒಟ್ಟು 28 ಶಂಕಿತ ಓಮಿಕ್ರಾನ್ ಪ್ರಕರಣ ಪತ್ತೆ
ಇದನ್ನೂ ಓದಿ : Omicron New Guidelines : ಮದುವೆಗೆ ನಿರ್ಬಂಧ, ಪೋಷಕರು 2 ವ್ಯಾಕ್ಸಿನ್ ಪಡೆದಿದ್ರೆ ಮಕ್ಕಳಿಗೆ ಶಾಲೆಗೆ ಪ್ರವೇಶ
(omicron meeting new guidelines release Karnataka Government )