Online Booking For trekking; ಬೆಂಗಳೂರು: ರಾಜ್ಯದ ಎಲ್ಲಾ ಚಾರಣ ಪಥಗಳಲ್ಲಿ ದಿನವೊಂದಕ್ಕೆ ಗರಿಷ್ಠ 300 ಚಾರಣಿಗರಿಗೆ ಮಾತ್ರ ಚಾರಣಕ್ಕೆ ತೆರಳಲು ಅವಕಾಶ ಕಲ್ಪಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಆನ್ ಲೈನ್ ನಲ್ಲಿ ಚಾರಣ ಪಥಗಳ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸುವ https://aranyavihaara.karnataka.gov.in ವೆಬ್ ಸೈಟ್ ಗೆ ಇಂದು ಅರಣ್ಯ ಇಲಾಖೆ ಚಾಲನೆ ನೀಡಿದೆ.
ಈ ಅಂತರ್ಜಾಲ ತಾಣದಲ್ಲಿ ರಾಜ್ಯ ಎಲ್ಲಾ ಚಾರಣ ಪಥಗಳ ಟಿಕೆಟ್ ಅನ್ನೂ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್ ಸಿಗದ ಚಾರಣಿಗರು ಬೇರೆ ಚಾರಣಪಥವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.
ಸದ್ಯ ಐದು ಚಾರಣ ತಾಣಗಳಾದ ಕುಮಾರ ಪರ್ವತ(Kumaraparvatha)ದಿಂದ ಸುಬ್ರಹ್ಮಣ್ಯ, ಬೀದಹಳ್ಳಿಯಿಂದ ಕುಮಾರ ಪರ್ವತ, ಬೀದಹಳ್ಳಿ-ಕುಮಾರ ಪರ್ವತ-ಸುಬ್ರಹ್ಮಣ್ಯ, ಚಾಮರಾಜನಗರದಿಂದ ನಾಗಮಲೈ ಮತ್ತು ತಲಕಾವೇರಿಯಿಂದ ನಿಶಾನೆ ಮೊಟ್ಟೆ ಚಾರಣ ತಾಣಗಳಿಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

Image Credit to Original Source
ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ರಾಜ್ಯದ 40 ಚಾರಣ ಪಥಗಳು ಈ ಅಂತರ್ಜಾಲ ತಾಣದಲ್ಲಿ ಸೇರ್ಪಡೆಯಾಗಲಿದ್ದು, ಮುಂಗಡ ಟಿಕೆಟ್ ಕಾಯ್ದಿರಿಸುವ ವೇಳೆ ಒಂದು ಫೋನ್ ನಂಬರ್ ಮೂಲಕ ಹತ್ತು ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದ್ದು, ಕಾಯ್ದಿರಿಸಿದ ಬಳಿಕ ಏಳು ದಿನ ಮೊದಲು ರದ್ದು ಮಾಡಿದರೆ ಪೂರ್ಣ ಟಿಕೆಟ್ ಹಣ ಮರು ಪಾವತಿಯಾಗಲಿದ್ದು, ನಂತರದ ರದ್ದತಿಗೆ ಭಾಗಶಃ ಹಣ ಕಡಿತಗೊಳ್ಳಲಿದೆ.
ಈ ಮಧ್ಯೆ ನಕಲಿ ಟಿಕೆಟ್ ಸಮಸ್ಯೆ ತಪ್ಪಿಸಲು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಸರ್ಕಾರದ ಭಾವಚಿತ್ರ ಸಹಿತ ಗುರುತಿನ ಚೀಟಿ ಅಪ್ ಲೋಡ್ ಮಾಡಿ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಿದೆ.

Image Credit to Original Source
ಇನ್ನು ಚಾರಣಪಥ ಮತ್ತು ಅರಣ್ಯದೊಳಗಿನ ರಸ್ತೆಯಲ್ಲಿ ಸಂಚರಿಸುವ ವೇಳೆ ಪ್ಲಾಸ್ಟಿಕ್ ನೀರಿನ ಬಾಟಲಿ, ಕ್ಯಾರಿ ಬ್ಯಾಗ್, ತಿಂಡಿ ಪೊಟ್ಟಣ ಇತ್ಯಾದಿಗಳನ್ನು ನಿಷೇಧಿಸಲಾಗುತ್ತದೆಯಲ್ಲದೇ ಎರಡು ಹಂತದ ತಪಾಸಣೆ ನಡೆಯಲಿದೆ.
ಜನವರಿ 26 ಮತ್ತು 27ರಂದು ಕುಮಾರ ಪರ್ವತಕ್ಕೆ ಐದಾರು ಸಾವಿರ ಪ್ರವಾಸಿಗರು ಒಂದೇ ದಿನ ಆಗಮಿಸಿದ್ದ ಹಿನ್ನೆಲೆಯಲ್ಲಿ ಗೊಂದಲ ಆಗಿದ್ದ ಕಾರಣ ಇಂತಹ ಗೊಂದಲ ನಿವಾರಿಸಲು ಚಾರಣಿಗರ ಸಂಖ್ಯೆಗೆ ಅರಣ್ಯ ಇಲಾಖೆ ಮಿತಿ ವಿಧಿಸಿದೆ.
Online booking for all types of trekking