fake IT Raid Kota : ಕೋಟ : ಉಡುಪಿ ಜಿಲ್ಲೆಯ ಮಣೂರು ಗ್ರಾಮದಲ್ಲಿರುವ ಉದ್ಯಮಿಯೋರ್ವರ ಮನೆಗೆ ನಕಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈನಲ್ಲಿ ವಾಸವಾಗಿದ್ದ ಚಿಕ್ಕಮಗಳೂರು ಮೂಲದ ಸಂತೋಷ್ ನಾಯಕ್ (45 ವರ್ಷ) ಹಾಗೂ ಕಾಪು ಪೊಲಿಪು ನಿವಾಸಿ ಮುಂಬೈನಲ್ಲಿ ವಾಸವಾಗಿದ್ದ ದೇವರಾಜ್ ಸುಂದರ್ ಮೆಂಡನ್(46 ವರ್ಷ) ಎಂಬವರೇ ಬಂಧನಕ್ಕೆ ಒಳಗಾದವರು. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳು ನಕಲಿ ಐಟಿ ದಾಳಿಯ ಕುರಿತು ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೬೬ರ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಉದ್ಯಮಿಯ ಮನೆಗೆ ಇನ್ನೋವಾ ಕಾರು, ಶಿಫ್ಟ್ ಕಾರಿನಲ್ಲಿ ಐಟಿ ಅಧಿಕಾರಿಗಳ ಸೋಗಿನಲ್ಲಿ 6 ರಿಂದ 8 ಮಂದಿಯ ತಂಡ ದರೋಡೆಗೆ ಹೊಂಚು ಹಾಕಿತ್ತು. ಆದರೆ ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಎಲೆಕ್ಟ್ರಿಕ್ ಗೇಟ್ ತೆರೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕಾಂಪೌಂಡ್ ಹಾರಿದ ತಂಡ ಮನೆ ಬಾಗಿಲು ತೆರೆಯಲು ಯತ್ನಿಸಿತ್ತು.
ಆದರೆ ಮನೆಯ ಬಾಗಿಲು ಕೂಡ ತೆರೆಯೋದಕ್ಕೆ ಸಾಧ್ಯವಾಗದೇ ಇದ್ದಾಗ, ತಂಡ ಗೇಟಿಗೆ ಹಾನಿ ಮಾಡಿ ಸ್ಥಳದಿಂದ ತೆರಳಿತ್ತು. ಇದರ ಬೆನ್ನಲ್ಲೇ ಮನೆಯ ಮಾಲಕ ಕವಿತಾ ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿ : ಕೋಟ ಉದ್ಯಮಿ ಮನೆಗೆ ಬಂದ ಆಗಂತುಕರು ! ಪೊಲೀಸರಿಂದ ತನಿಖೆ ಆರಂಭ

ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿಎಂ ಅವರ ನೇತೃತ್ವದಲ್ಲಿ ಕೋಟ ಠಾಣಾಧಿಕಾರಿ ಗುರುನಾಥ ಬಿ ಹಾದಿಮನೆ, ಪಿಎಸ್ಐ ಸುಧಾಪ್ರಭು, ಹಿರಿಯಡ್ಕ ಠಾಣೆಯ ಪಿಎಸ್‌ಐ ಮಂಜುನಾಥ್ ಅವರನ್ನು ಒಳಗೊಂಡು 3 ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಸಿಸಿ ಕ್ಯಾಮರಾ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗಿತ್ತು.
ಇದನ್ನೂ ಓದಿ : ಉಡುಪಿ : ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಸೆ ತೋರಿಸಿ 67 ಲಕ್ಷ ರೂಪಾಯಿ ವಂಚನೆ
ಮೂರು ತಂಡಗಳು ಉಡುಪಿ ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು ಹಾಗೂ ಮುಂಬೈನಲ್ಲಿಯೂ ಶೋಧ ಕಾರ್ಯ ನಡೆಸಿತ್ತು. ಅಂತಿಮವಾಗಿ ಪೊಲೀಸರು ಸಂತೋಷ್ ನಾಯಕ್ ಹಾಗೂ ದೇವರಾಜ್ ಸುಂದರ್ ಮೆಂಡನ್ ಅವರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ : ಬೈಂದೂರು : ಮೆಹಂದಿ ಶಾಸ್ತ್ರದ ವೇಳೆ ಮದುಮಗ ಎಸ್ಕೇಪ್, ಮದುವೆಯೇ ರದ್ದು !
ನಕಲಿ ಐಟಿ ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ಕೃತ್ಯಕೆ ಬಳಸಿದ್ದ ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ. ಅಲ್ಲದೇ ಉಳಿದಂತೆ ಇತರ ಆರೋಪಿಗಳ ಹುಡುಕಾಟಕ್ಕಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಆರೋಪಿಗಳು ದರೋಡೆ ಮಾಡುವ ಸಲುವಾಗಿಯೇ ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂಧಿದ್ದರು ಅನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಣಕಾಸಿನ ವಿಚಾರಕ್ಕೆ ಈ ಕೃತ್ಯ ನಡೆದಿರಬಹುದು ಅನ್ನೋ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
Police of Kota station arrested two accused in case of fake IT Raid at businessman’s house in Udupi Manur