ಬೆಂಗಳೂರು : Raid by ACB : ಆದಾಯಕ್ಕೂ ಅಧಿಕ ಆಸ್ತಿ ಗಳಿಕೆ ಮಾಡಿದ ಸರ್ಕಾರಿ ಅಧಿಕಾರಿಗಳಿಗೆ ಇಂದು ಎಸಿಬಿ ಬಲೆ ಬೀಸಿದೆ. ರಾಜ್ಯದ 80ಕ್ಕೂ ಅಧಿಕ ಕಡೆಗಳಲ್ಲಿ 21 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ಬೆಳ್ಳಂ ಬೆಳಗ್ಗೆ ದಾಳಿ ನಡೆಸುವ ಮೂಲಕ ಶಾಕ್ ನೀಡಿದೆ. 300ಕ್ಕೂ ಅಧಿಕ ಎಸಿಬಿ ಸಿಬ್ಬಂದಿ ತಂಡವು ಅಕ್ರಮ ಹಣ ಗಳಿಕೆಯ ಬಗ್ಗೆ ದಾಖಲೆಗಳನ್ನು ಜಾಲಾಡುತ್ತಿದೆ.
ಎಲ್ಲೆಲ್ಲಿ ದಾಳಿ (Raid by ACB) ನಡೆದಿದೆ :
ರಾಯಚೂರಿನಲ್ಲಿ ಸಿಪಿಐ ಉದಯ ರವಿ ನಿವಾಸ :
ಪೊಲೀಸ್ ಅಧಿಕಾರಿಯಾಗಿರುವ ಉದಯ್ ರವಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ರಾಯಚೂರಿನಲ್ಲಿ ದಾಳಿ ನಡೆಸಿದ್ದಾರೆ. ಲಿಂಗಸಗೂರು ತಾಲೂಕಿನ ಮುದಗಲ್ನಲ್ಲಿರುವ ಉದಯ ರವಿ ನಿವಾಸದ ಮೇಲೆ ಈ ದಾಳಿ ನಡೆದಿದೆ. ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ದಾಖಲಾಗಿತ್ತು. ಬೆಳ್ಳಂ ಬೆಳಗ್ಗೆ 7 ಜನರಿದ್ದ ಎಸಿಬಿ ಅಧಿಕಾರಿಗಳ ತಂಡವು ಉದಯ ರವಿ ನಿವಾಸಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ. ಕೊಪ್ಪಳದಲ್ಲಿ ಸಿಪಿಐ ಆಗಿದ್ದ ಉದಯ ರವಿ ಕೆಲ ಸಮಯದ ಹಿಂದಷ್ಟೇ ಬೆಂಗಳೂರು ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆ ಪಡೆದಿದ್ದರು.
ಉಡುಪಿಯಲ್ಲಿರುವ ಇಂಜಿನಿಯರ್ ಹರೀಶ್ ನಿವಾಸ :
ಸಣ್ಣ ನೀರಾವರಿ ಅಸಿಸ್ಟಂಟ್ ಇಂಜಿನಿಯರ್ ಆಗಿರುವ ಹರೀಶ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಅಕ್ರಮ ಆಸ್ತಿ ಗಳಿಕೆ ಆರೋಪವನ್ನು ಎದುರಿಸುತ್ತಿರುವ ಅಸಿಸ್ಟಂಟ್ ಇಂಜಿನಿಯರ್ ಹರೀಶ್ಗೆ ಸೇರಿದ ಉಡುಪಿಯ ಕೊರಂಗ್ರಪಾಡಿಯಲ್ಲಿರುವ ನಿವಾಸಕ್ಕೆ ತೆರಳಿದ ಎಸಿಬಿ ತಂಡ ದಾಳಿ ನಡೆಸಿದ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ.
ಕನಕಪುರದಲ್ಲಿರುವ ಡಿ.ಎಸ್ ಶ್ರೀಧರ್ ನಿವಾಸ :
ಕಾರವಾರ ಜಿಲ್ಲೆಯ ಡಿಆರ್ ಆಗಿ ಸೇವೆ ಸಲ್ಲಿಸುತ್ತಿರುವ ಡಿ.ಎಸ್ ಶ್ರೀಧರ್ಗೂ ಎಸಿಬಿ ಶಾಕ್ ನೀಡಿದೆ. ಕನಕಪುರದ ಹಾರೋಹಳ್ಳಿಯಲ್ಲಿರುವ ಡಿ.ಎಸ್ ಶ್ರೀಧರ್ ಫಾರ್ಮ್ ಹೌಸ್ ಮೇಲೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ಹೆಚ್ಎಸ್ ಆರ್ ಲೇ ಔಟ್ನಲ್ಲಿಯೂ ಶ್ರೀಧರ್ ಮನೆಯಿದ್ದು ಅಲ್ಲಿಯೂ ದಾಳಿ ನಡೆದಿದೆ. ಶ್ರೀಧರ್ಗೆ ಸೇರಿದ ಫಾರ್ಮ್ ಹೌಸ್ನಲ್ಲಿ ಚಿನ್ನ ಹಾಗೂ ಆಸ್ತಿ ಪತ್ರ ಪತ್ತೆಯಾಗಿದೆ ಎನ್ನಲಾಗಿದ್ದು ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಜಿಲ್ಲಾ ರಿಜಿಸ್ಟ್ರಾರ್ ಆಗಿ ಕೆಲಸ ಮಾಡಿದ್ದ ವೇಳೆಯಲ್ಲಿ ಶ್ರೀಧರ್ ಅಕ್ರಮ ಆಸ್ತಿ ಗಳಿಸಿದ್ದರು ಎನ್ನಲಾಗಿದೆ. ರಾಮನಗರ ಎಸಿಬಿ ಡಿವೈಎಸ್ಪಿ ಗೋಪಾಲನ್ ಜೋಗಿನ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಪರಮೇಶ್ವರಪ್ಪ ನಿವಾಸದಲ್ಲಿ ಎಸಿಬಿ ದಾಳಿ :
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪರಮೇಶ್ವರ್ಗೂ ಎಸಿಬಿ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದೆ. ಹಗರಬೊಮ್ಮನಹಳ್ಳಿಯಲ್ಲಿರುವ ಪರಮೇಶ್ವರ್ ನಿವಾಸ, ಚಿತ್ರದುರ್ಗದ ವಿದ್ಯಾನಗರದಲ್ಲಿರುವ ಪರಮೇಶ್ವರ್ ಮಾಲೀಕತ್ವದ ಮನೆ, ಹಾಗೂ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾರವಾರದಲ್ಲಿ ಇಂಜಿನಿಯರ್ ರಾಜೀವ್ ಪುರಸೈಯ್ಯ ನಾಯ್ಕ ಎಸಿಬಿ ಶಾಕ್ :
ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ ಬೃಂದಾವನ ಅಪಾರ್ಟ್ಮೆಂಟ್ನಲ್ಲಿರುವ ಪಿಡಬ್ಲ್ಯುಡಿ ಇಂಜಿನಿಯರ್ ರಾಜೀವ್ ಪುರಸೈಯ್ಯ ನಾಯ್ಕ ಎಂಬವರ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಬಾಗಲಕೋಟೆಯಲ್ಲಿ ಆರ್ಟಿಓ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ :
ಬಾಗಲಕೋಟೆ ಜಿಲ್ಲೆಯ ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶಂಕರಲಿಂಗ ಗೋಗಿ ಅವರ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಶಂಕರಲಿಂಗ ಗೋಗಿ ಅವರ ಸಂಬಂಧಿಕರ ಮನೆಗಳಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಡಿಎಸ್ ಪಿ ಸುರೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಇದರ ಜೊತೆಯಲ್ಲಿ ಬಾಗಲಕೋಟೆಯಲ್ಲಿ ಆರ್ಟಿಓ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆ ಮೇಲೆ ರೇಡ್ ಮಾಡಲಾಗಿದೆ
ಇನ್ನುಳಿದಂತೆ ಕಲಬುರಗಿಯಲ್ಲಿರುವ ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರುಪಣಾಧಿಕಾರಿಯಾಗಿರುವ ತಿಪ್ಪಣ್ಣ ಸಿರಸಗಿ ನಿವಾಸ, ಬೆಳಗಾವಿಯಲ್ಲಿರುವ ನಿವೃತ್ತಿ ಅಂಚಿನಲ್ಲಿರುವ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಬಿ.ವೈ.ಪವಾರ ಅವರ ಮನೆ ಮೇಲೆ ಇಂದು ದಾಳಿ ನಡೆದಿದೆ.
ಇದನ್ನು ಓದಿ : IPL vs PSL : ಐಪಿಎಲ್ 115.5 ಕೋಟಿ, ಪಿಎಸ್ಎಲ್ ಜಸ್ಟ್ 2.76 ಕೋಟಿ : ಐಪಿಎಲ್ ಮುಂದೆ ಲೆಕ್ಕಕ್ಕೇ ಇಲ್ಲ ಪಾಕಿಸ್ತಾನ್ ಸೂಪರ್ ಲೀಗ್
ಇದನ್ನೂ ಓದಿ : ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್
Raid by ACB officials in many parts of the state