ಬೆಂಗಳೂರು : (Shakti Yojana) ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು, ಸ್ಮಾರ್ಟ್ ಕಾರ್ಡ್‌ಗಳನ್ನು ಐದು ಮಹಿಳೆಯರಿಗೆ ಸಾಂಕೇತಿಕವಾಗಿ ವಿತರಣೆ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಮೊದಲ ಹಂತದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದಾರೆ. ಏಕಕಾಲದಲ್ಲಿ ರಾಜ್ಯದಾದ್ಯಂತ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ “ಶಕ್ತಿ” ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳಾ ಸಬಲೀಕರಣದತ್ತ ಹೊಸ ಹೆಜ್ಜೆಗೆ ಮುನ್ನುಡಿ ಬರೆದಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಚಿವ ಕೆಜೆ ಜಾರ್ಜ್, ಶಾಸಕ ರಿಜ್ವಾನ್ ಇರ್ಷಾದ್ ಸೇರಿದಂತೆ ಹಲವು ಉಪಸ್ಥಿತರಿದ್ದರು.
41.8 ಲಕ್ಷ ಮಹಿಳೆಯರಿಗೆ ಅನುಕೂಲಗಳೇನು ?
ಉಚಿತ ಪ್ರಯಾಣ ಯೋಜನೆಯು ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ. ಬಡ ಮತ್ತು ಕೆಳ ಮಧ್ಯಮ ವರ್ಗದ ದುಡಿಯುವ ಮಹಿಳೆಯರ ದಿನದ ಖರ್ಚಿನ ಹೊರೆಯನ್ನು ಇಳಿಸಿ, ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಹೊಸ ಭಾಷ್ಯ ಬರೆಯಿದೆ. ಉಳಿತಾಯವಾಗುವ ಪ್ರಯಾಣದ ವೆಚ್ಚ ಕುಟುಂಬದ ನಿರ್ವಹಣೆಗೆ ಬಳಕೆಯಾಗುವುದರಿಂದ ಮಹಿಳೆಯರಲ್ಲಿ ಸ್ವಾವಲಂಬನೆಯ ಭಾವ ಮೂಡಿಸಿದೆ.
ಲಿಂಗತ್ವ ಅಲ್ಪಸಂಖ್ಯಾತರಿಗೂ “ಶಕ್ತಿ” ಯೋಜನೆ :
ಜಾತಿ, ಮತ, ವರ್ಗಗಳ ಭೇದವಿಲ್ಲದೆ ವಿದ್ಯಾರ್ಥಿನಿಯೂ ಸೇರಿದಂತೆ ಎಲ್ಲ ಮಹಿಳೆಯರು ಈ ಸೌಲಭ್ಯ ಪಡೆಯಬಹುದಾಗಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಯೋಜನೆಯ ಅನುಕೂಲ ದೊರೆಯಲಿದೆ. ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ದೊರೆಯಲಿದ್ದು, 18,609 ಬಸ್‌ಗಳ ಸೇವೆಯು ಉಚಿತ ಪ್ರಯಾಣಕ್ಕೆ ಲಭ್ಯವಿದೆ. ರಾಜ್ಯ ಸರ್ಕಾರಿ ಸ್ವಾಮ್ಯದ ಕೆ.ಎಸ್. ಆರ್.ಟಿ.ಸಿ, ಬಿಎಂಟಿಸಿ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ; ಹಾಗೂ ಎನ್.ಇ.ಕೆ.ಆರ್.ಟಿ.ಸಿ. ಬಸ್ ಗಳಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಗೆ ವಾರ್ಷಿಕವಾಗಿ 4051.56 ಕೋಟಿ ರೂ. ವೆಚ್ಚವಾಗುವುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : Paternity leave: ಕರ್ನಾಟಕದಲ್ಲಿ ಪುರುಷ ಉದ್ಯೋಗಿಗಳಿಗೆ ಸಿಗುತ್ತೆ 6 ತಿಂಗಳ ಪಿತೃತ್ವ ರಜೆ
ಯೋಜನೆಯ ಮುಖ್ಯಾಂಶಗಳು :
- ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾರಿ.
- ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಪ್ರಯಾಣಕ್ಕೆ ಮಾನ್ಯ.
- ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿನ ಬಸ್‌ಗಳಲ್ಲಿ ಸಂಚರಿಸಲು ಅವಕಾಶ.
- ಬೆಂಗಳೂರು ಮಹಾನಗರ ಸಾರಿಗೆ ಮತ್ತು ಇತರ ನಗರ ಸಾರಿಗೆ ಬಸ್‌ಗಳಿಗೂ ಅನ್ವಯ.
- ರಾಜ್ಯದೊಳಗಿನ ಪ್ರಯಾಣಕ್ಕೆ ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ಮಾತ್ರ ಸೀಮಿತ.
- ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿʼ ಸೇವಾ ಸಿಂಧುವಿನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿ.
- ಮೂರು ತಿಂಗಳವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ.
- ಭಾರತ / ಕರ್ನಾಟಕ ಸರ್ಕಾರ ಇಲ್ಲವೆ ಸರ್ಕಾರಿ ಸ್ವಾಮ್ಯದ ಕಚೇರಿಗಳು ನೀಡಿರುವ ಭಾವಚಿತ್ರ ಇರುವ ಐಡಿ ಕಾರ್ಡ್ ಮಾನ್ಯ ಮಾಡಲಾಗುವುದು.
Shakti Yojana: Free bus travel for women from today: Shakti Yojana Lokkarpana across the state