HS Sharath : ಮಂಡ್ಯ ಎಕ್ಸ್‌ಪ್ರೆಸ್ ಎಚ್.ಎಸ್ ಶರತ್ ಬಾಳಲ್ಲಿ ಹೊಸ ಇನ್ನಿಂಗ್ಸ್, ನಿಶ್ಚಿತಾರ್ಥ ಮಾಡಿಕೊಂಡ ಕರ್ನಾಟಕ ಕ್ರಿಕೆಟರ್

ಬೆಂಗಳೂರು : ಮಂಡ್ಯ ಎಕ್ಸ್‌ಪ್ರೆಸ್ ಖ್ಯಾತಿಯ ಕರ್ನಾಟಕ ತಂಡದ ವೇಗದ ಬೌಲರ್ ಎಚ್.ಎಸ್ ಶರತ್ (HS Sharath) ತಮ್ಮ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 30 ವರ್ಷದ ಬಲಗೈ ವೇಗದ ಬೌಲರ್ ಎಚ್.ಎಸ್ ಶರತ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಗೃಹಸ್ಥಾಶ್ರಮಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

ಸಕ್ಕರೆನಾಡು ಮಂಡ್ಯದ ಹೊಸಗಾವಿಹಳ್ಳಿಯವರಾದ ಎಚ್.ಎಸ್ ಶರತ್ 2012ರಲ್ಲಿ ಕರ್ನಾಟಕ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಉತ್ತರ ಪ್ರದೇಶ ವಿರುದ್ಧ ಮೀರತ್‌ನಲ್ಲಿ ನಡೆದ ರಣಜಿ ಪಂದ್ಯದ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಶರತ್, ಆಡಿದ ಚೊಚ್ಚಲ ರಣಜಿ ಪಂದ್ಯದಲ್ಲೇ 5 ವಿಕೆಟ್‌ಗಳ ಸಾಧನೆ ಮಾಡಿದ್ದರು. ಕರ್ನಾಟಕ ಪರ ರಣಜಿ ಪಂದ್ಯಗಳು ಸೇರಿದಂತೆ ಒಟ್ಟು 28 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 86 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 48 ರನ್ನಿಗೆ 5 ವಿಕೆಟ್ ಪಡೆದದ್ದು ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್.

2013-14ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಶರತ್, ಕರ್ನಾಟಕ ತಂಡ 14 ವರ್ಷಗಳ ನಂತರ ರಣಜಿ ಚಾಂಪಿಯನ್ ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ 2015ರ ರಣಜಿ ಟೂರ್ನಿಯ ನಂತರ ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಶರತ್, ಕಳೆದ 8 ವರ್ಷಗಳಲ್ಲಿ ಯಾವುದೇ ಪ್ರಥಮ ದರ್ಜೆ ಪಂದ್ಯಗಳನ್ನಾಡಿಲ್ಲ. ಕರ್ನಾಟಕ ತಂಡಕ್ಕೆ ಕಂಬ್ಯಾಕ್ ಮಾಡುವ ಕನಸು ಈಡೇರಿಲ್ಲ. ಗೋವಾ ತಂಡದ ಪರ ಆಡುವ ಆಫರ್ ಬಂದರೂ ಅದನ್ನು ತಿರಸ್ಕರಿಸಿ ಕರ್ನಾಟಕ ತಂಡಕ್ಕೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಮಾತ್ರ ಮಂಡ್ಯದ ಹೈದನನ್ನು ಸತತವಾಗಿ ಕಡೆಗಣಿಸುತ್ತಲೇ ಬಂದಿದೆ.

ಇದನ್ನೂ ಓದಿ : Ajinkya Rahane 5000 test runs: ಟೆಸ್ಟ್ ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಪೂರ್ತಿಗೊಳಿಸಿದ ಟೀಮ್ ಇಂಡಿಯಾ ಆಪದ್ಬಾಂಧವ

ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ಮಂಡ್ಯದ ಹೊಸಗಾವಿಹಳ್ಳಿಯ ಶಿವಲಿಂಗಯ್ಯ ಎಂಬವರ ಪುತ್ರನಾಗಿರುವ ಶರತ್, 17ನೇ ವಯಸ್ಸಿನವರೆಗೂ ಟೆನಿಸ್ ಬಾಲ್ ಕ್ರಿಕೆಟಿಗನಾಗಿದ್ದರು. ಕರ್ನಾಟಕ ತಂಡದಲ್ಲಿ ಸ್ಥಾನ ಕಳೆದುಕೊಂಡ ನಂತರ ಐಪಿಎಲ್-2023ರ ಟೂರ್ನಿಯಲ್ಲಿ ಜಿಯೋ ಸಿನಿಮಾ ವಾಹಿನಿಯಲ್ಲಿ ಶರತ್ ಕನ್ನಡ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸಿದ್ದರು.

HS Sharath : New innings in Mandya Express HS Sharath, engaged Karnataka cricketer

Comments are closed.