ಸಿದ್ದರಾಮಯ್ಯ ಸಿಎಂ, ಡಿಕೆ ಡಿಸಿಎಂ : ಹೈಕಮಾಂಡ್ ಸಂಧಾನ ಸಕ್ಸಸ್‌

ನವದೆಹಲಿ : ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah new Chief Minister) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಡಿಸಿಎಂ ಆಯ್ಕೆಯಾಗಿದ್ದಾರೆ. ನಡುರಾತ್ರಿ ನಡೆದ ಹೈಕಮಾಂಡ್‌ ಸಂಧಾನ ಸಭೆ ಕೊನೆಗೂ ಸಕ್ಸಸ್‌ ಆಗಿದೆ. ಮುಖ್ಯಮಂತ್ರಿ ಮೇಲಾಟದಲ್ಲಿ ಸಿದ್ದರಾಮಯ್ಯ ಕೊನೆಗೂ ಗೆದ್ದಿದ್ದಾರೆ. ಈ ಮೂಲಕ ಎರಡನೇ ಬಾರಿಗೆ ಸಿದ್ದರಾಮಯ್ಯ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಮೇ 20 ರಂದು ಕರ್ನಾಟಕದ 24 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಂಜೆ 7 ಗಂಟೆಗೆ ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಇಂದಿರಾಗಾಂಧಿ ಭವನದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿಯೇ ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಘೋಷಣೆಯಾಗಲಿದೆ. ಸಭೆಗೆ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಕಾಂಗ್ರೆಸ್‌ ಸಂಸದರನ್ನು ಸಭೆಗೆ ಆಹ್ವಾನಿಸಲಾಗಿದೆ.

ಹೈಕಮಾಂಡ್‌ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪಟ್ಟಕಟ್ಟಲು ಮುಂದಾಗಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ಕೊಡುವುದಾದ್ರೆ ಮುಖ್ಯಮಂತ್ರಿ ಹುದ್ದೆಯನ್ನೇ ನೀಡಿ. ಇಲ್ಲವಾದ್ರೆ ನನಗೆ ಡಿಸಿಎಂ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಬೇಡ ಎಂದು ಪಟ್ಟು ಹಿಡಿದಿದ್ದರು. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಸಿಎಂ ಆಯ್ಕೆಯ ವಿಚಾರ ಕಗ್ಗಂಟಾಗಿ ಪರಿಣಮಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಸಭೆಯನ್ನು ನಡೆಸಿದ್ದರು. ಡಿಕೆ ಶಿವಕುಮಾರ್‌ ಮುನಿಸಿಕೊಂಡು ಸಂಧಾನ ಸಭೆಯಿಂದ ಹೊರಗೆ ನಡೆದಿದ್ದರು. ನಂತರ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯೂ ಫಲಕೊಟ್ಟಿರಲಿಲ್ಲ. ಇದು ಹೈಕಮಾಂಡ್‌ ನಾಯಕರ ತಲೆನೋವಿಗೆ ಕಾರಣವಾಗಿತ್ತು.

ಎರಡು ವರ್ಷ ಸಿದ್ದು ಸಿಎಂ !

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲಾಗಿದೆ. ಆರಂಭದ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ. ನಂತರದ ಮೂರು ವರ್ಷಗಳ ಕಾಲ ಡಿಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಲಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವನ್ನು ಎರಡು ವರ್ಷಗಳ ನಂತರ ಬಿಟ್ಟುಕೊಡುವುದಿಲ್ಲ ಅನ್ನೋ ವಿಚಾರವನ್ನು ಹೈಕಮಾಂಡ್‌ ಮುಂದೆ ಡಿಕೆಶಿ ಮಂಡನೆ ಮಾಡಿದಾಗ, ಈ ವಿಚಾರವನ್ನು ತಮಗೆ ಬಿಟ್ಟುಕೊಡಿ ಅನ್ನೋ ಹೇಳಿಕೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆಯ ವರೆಗೆ ಮಾತ್ರವೇ ಸಿದ್ದು ಸಿಎಂ ಆಗಿ ಮುಂದುವರಿಯುವ ಸಾಧ್ಯತೆಯಿದೆ.

ಡಿಕೆ ಶಿವಕುಮಾರ್‌ – ಸಿದ್ದು ರಾಜಿಗೆ ಟಿಫನ್‌ ಸೂತ್ರ

ಚುನಾವಣೆಯ ಫಲಿತಾಂಶದ ವರೆಗೂ ಜೋಡೆತ್ತಿನಂತೆ ಕೆಲಸ ಮಾಡಿದ್ದ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಇದೀಗ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ. ಇದೀಗ ಇಬ್ಬರ ನಡುವಿನ ಮುನಿಸು ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ರಾಜಿಗಾಗಿ ಟಿಫನ್‌ ಸೂತ್ರ ಅನುಸರಿಸಲಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್‌ ಅವರ ಮನೆಯಲ್ಲಿ ಇಂದು ಟಿಫನ್‌ಗೆ ಇಬ್ಬರನ್ನೂ ಆಹ್ವಾನಿಸಲಾಗಿದೆ. ಈ ವೇಳೆಯಲ್ಲಿ ಇಬ್ಬರನ್ನೂ ಒಟ್ಟಿಗೆ ಕೂರಿಸಿ ರಾಜಿ ಮಾಡಲು ಕಾಂಗ್ರೆಸ್‌ ಮುಂದಾಗಿದೆ.

ಐದು ದಿನಗಳ ಬಳಿಕ ಬಗೆಹರಿದ ಕಗ್ಗಂಟು

ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು, ಐದು ದಿನಗಳು ಕಳೆದಿದ್ದರೂ ಕೂಡ ಕರ್ನಾಟಕದ ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋದು ನಿರ್ಧಾರ ವಾಗಿರಲಿಲ್ಲ. ಕಳೆದ ನಾಲ್ಕು ದಿನಗಳ ಕಾಲವೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕಾಂಗ್ರೆಸ್‌ ಹಿರಿಯ ನಾಯಕರ ವಿರುದ್ದವೂ ಡಿಕೆಶಿ ಮುನಿಸಿಕೊಂಡಿದ್ದರು. ಶಾಸಕರ ಅಭಿಪ್ರಾಯ ಸಂಗ್ರಹಿಸಿ ತನಗೆ ಸಿಎಂ ಹುದ್ದೆಯನ್ನು ನೀಡುವಂತೆ ಸಿದ್ದರಾಮಯ್ಯ ಅವರು ಹೈಕಮಾಂಡ್‌ ಮುಂದೆ ಡಿಮ್ಯಾಂಡ್‌ ಇಟ್ಟಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷರಾಗಿರುವವರಿಗೆ ಸಿಎಂ ಹುದ್ದೆ ನೀಡುವುದು ಕಾಂಗ್ರೆಸ್‌ ಸಂಪ್ರದಾಯ. ಕೆಪಿಸಿಸಿ ಅಧ್ಯಕ್ಷನಾಗಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಹೀಗಾಗಿ ತನಗೆ ಸಿಎಂ ಹುದ್ದೆ ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ ಹೈಕಮಾಂಡ್‌ ನಡೆಸಿದ ಸಂಧಾನ ಕೊನೆಗೂ ಫಲಕೊಟ್ಟಿದ್ದು, ಐದು ದಿನಗಳ ಕಗ್ಗಂಟ್ಟು ಕೊನೆಗೂ ಬಗೆಹರಿದಿದೆ.

ಇದನ್ನೂ ಓದಿ : ವಿಧಾನಸೌಧದ ಅಂಗಳದಲ್ಲೇ ಇದ್ಯಾ ಸರಕಾರದ ಅವಧಿ ನಿರ್ಧರಿಸೋ ಶಕ್ತಿ: ಇದು ರಾಜಕಾರಣದ EXCLUSIVE STORY

ಇದನ್ನೂ ಓದಿ : ಅಕ್ರಮ ಆಸ್ತಿ ಪ್ರಕರಣ : ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

Comments are closed.