ಚಿತ್ರದುರ್ಗ :Third FIR registered : ಒಂದು ಕಾಲದಲ್ಲಿ ರಾಜ್ಯದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ಈಗಂತೂ ಒಂದಿಲ್ಲೊಂದು ಪ್ರಕರಣಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಮುರುಘಾ ಶರಣರು ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಬೆನ್ನಲ್ಲೇ ಕೆಲವೇ ದಿನಗಳ ಹಿಂದೆ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ನಾಲ್ವರು ವಿದ್ಯಾರ್ಥಿನಿಯರು ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣವನ್ನು ದಾಖಲಿಸಿದ್ದರು. ಈ ಎಲ್ಲದರ ನಡುವೆ ಇದೀಗ ಮತ್ತೊಂದು ಆಘಾತ ಎಂಬಂತೆ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮೂರನೇ ಎಫ್ಐಆರ್ ದಾಖಲಾಗಿದೆ.
ಬಾಲ ನ್ಯಾಯ ಕಾಯ್ದೆ 2015 ಇದನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ನೀಡಿರುವ ಈ ದೂರಿನ ಅಡಿಯಲ್ಲಿ ಗ್ರಾಮೀಣ ಠಾಣಾ ಪೊಲೀಸರು ಮುರುಘಾ ಶರಣರ ಜೊತೆಯಲ್ಲಿ ಅಂದಿನ ಮಠದ ಹಾಸ್ಟೆಲ್ ವಾರ್ಡನ್, ಕಾರ್ಯದರ್ಶಿ ಹಾಗೂ ಮಡಿಲು ದತ್ತು ಕೇಂದ್ರದ ವ್ಯವಸ್ಥಾಪಕರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
ಏನಿದು ಪ್ರಕರಣ..?
ಮುರುಘಾ ಮಠಕ್ಕೆ ಸೇರಿದ ಮಡಿಲು ದತ್ತು ಕೇಂದ್ರದಲ್ಲಿ ಸಾಕಷ್ಟು ಮಕ್ಕಳನ್ನು ದತ್ತು ಪಡೆಯಲಾಗಿದೆ. ಆದರೆ ಇಲ್ಲಿ ಕೆಲವು ಮಕ್ಕಳ ದತ್ತು ದಾಖಲಾತಿಯನ್ನು ಮರೆ ಮಾಚಲಾಗಿದೆ ಎಂಬ ಆರೋಪ ಇದೀಗ ಮುರುಘಾ ಶರಣರ ವಿರುದ್ಧ ಎದುರಾಗಿದೆ. ಅಕ್ಟೋಬರ್ 12ರಂದು ಮಠದ ಆವರಣದಲ್ಲಿ ಹದಿನೈದು ವರ್ಷದ ಬಾಲಕಿ ಪತ್ತೆಯಾಗಿದ್ದಳು. ಆದರೆ ಈ ಮಗುವಿನ ಯಾವುದೇ ದಾಖಲಾತಿ ಮಡಿಲು ದತ್ತು ಕೇಂದ್ರದಲ್ಲಿ ನಮೂದಾಗಿಲ್ಲ. ಇದಕ್ಕೂ ಮುನ್ನ ಹದಿನೇಳು ವರ್ಷದ ಯುವತಿ ಕೂಡ ಮಠದ ಆವರಣದಲ್ಲಿ ಪತ್ತೆಯಾಗಿದ್ದಳು. ಆಕೆಯ ದಾಖಲೆ ಕೂಡ ಮಡಿಲು ದತ್ತು ಕೇಂದ್ರದಲ್ಲಿ ಆಗಿಲ್ಲ ಎಂಬುದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆರೋಪವಾಗಿದೆ.
ಇದನ್ನು ಓದಿ : kantara: ‘ಭೂತಕೋಲ ಎನ್ನುವುದು ಹಿಂದೂ ಸಂಸ್ಕೃತಿಯೇ ಅಲ್ಲ’ : ನಟ ಚೇತನ್ ಹೊಸ ವಿವಾದ
Third FIR registered against Muruga Sharanaru