ಬೆಂಗಳೂರು : ಮಂಗಳಮುಖಿಯರು ಅಂದ್ರೇ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡೋದು, ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡೋದು ಅನ್ನೋ ಜನರ ಅಭಿಪ್ರಾಯ ಇನ್ಮುಂದೆ ಬದಲಾಗಲಿದೆ. ಇನ್ಮುಂದೆ ರಾಜ್ಯದ ಆರಕ್ಷಕ ಇಲಾಖೆಯಲ್ಲೂ ಮಂಗಳಮುಖಿಯರಿಗೆ ಅವಕಾಶ ನೀಡಲಾಗುತ್ತಿದ್ದು, ಮಂಗಳಮುಖಿಯರ ಬಹುದಿನಗಳ ಬೇಡಿಕೆ ಯೊಂದು ಈಡೇರಿದಂತಾಗಿದೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನೇಮಕಾತಿಗೆ ಮಂಗಳಮುಖಿಯರಿಗೂ (Transgenders Police) ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ತಮಗೂ ಸೇವಾವಕಾಶ ನೀಡಬೇಕೆಂದು ಒತ್ತಾಯಿಸಿ ಮಂಗಳಮುಖಿಯರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಂಗಳಮುಖಿಯರ ಬೇಡಿಕೆಗೆ ಅಸ್ತು ಎಂದಿತ್ತು. ಹೀಗಾಗಿ ಈಗ ಹೊರಡಿಸಲಾಗಿರುವ ನೇಮಕಾತಿ ಅಧಿಸೂಚನೆಯಲ್ಲಿ ಮಂಗಳಮುಖಿಯರಿಗೆ ಶೇಕಡಾ ಒಂದರಷ್ಟು ಮೀಸಲಾತಿ ನೀಡಿ ಆದೇಶ ಹೊರಡಿಸಲಾಗಿದೆ. ಮಂಗಳಮುಖಿಯರು ತನಗೆ ನಿಗದಿ ಪಡಿಸಿದ ಖೋಟಾದಲ್ಲಿ ದೈಹಿಕ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ನ್ಯಾಯಾಲಯದ ಆದೇಶದ ಮೇರೆಗೆ ಇಂತಹದೊಂದು ನೇಮಕಾತಿಗೆ ಒಪ್ಪಿಗೆ ನೀಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದು ಪೊಲೀಸ್ ಇಲಾಖೆಯ ಎಲ್ಲ ವಿಭಾಗದಲ್ಲೂ ಮಂಗಳಮುಖಿಯರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಲ್ಲೂ ಶೇಕಡಾ ೧ ರಷ್ಟು ಮೀಸಲಾತಿಯನ್ನುಮಂಗಳಮುಖಿಯರಿಗೆ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದಕ್ಕಾಗಿ ಮಂಗಳಮುಖಿಯರು ಹುದ್ದೆಗೆ ನೀರಿಕ್ಷಿತ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಜಿಲ್ಲಾಧಿಕಾರಿಗಳಿಂದ ಧೃಡಿಕೃತ ಮಂಗಳಮುಖಿ ಪ್ರಮಾಣ ಪತ್ರ ಹೊಂದಿರಬೇಕು. ಮಂಗಳಮುಖಿ ಪ್ರಮಾಣ ಪತ್ರವಿಲ್ಲದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೇ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಹೇಳಿದೆ. ನಮಗೆ ಕರುಣೆ,ಭಿಕ್ಷೆ ಬೇಡ ಸಮಾನ ಅವಕಾಶ ಬೇಕು ಎಂಬ ಬೇಡಿಕೆಯೊಂದಿಗೆ ಮಂಗಳಮುಖಿಯರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಅವಕಾಶ ಕೋರಿದ್ದರು.

ನ್ಯಾಯಾಲಯದ ಆದೇಶದಂತೆ ಸರ್ಕಾರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಮಂಗಳಮುಖಿಯರು ಹರ್ಷ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಪತ್ರಿಕೋದ್ಯಮ ಪದವೀಧರೆ ಸನಾ ನಾನು ಎಂಎ ಪದವಿ ಪಡೆದಿದ್ದೇನೆ. ನಾನು ಸರ್ಕಾರಿ ಉದ್ಯೋಗಕ್ಕೆ ಸೇರಬಯಸುತ್ತೇನೆ.ಮೊದಲು ನಮಗೆ ಯಾವುದೇ ಅವಕಾಶ ಇರಲಿಲ್ಲ. ಈಗ ಒಂದೊಂದೆ ಅವಕಾಶ ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ಆನ್‌ಲೈನ್ ಪೇಮೆಂಟ್ ಮಾಡ್ತೀರಾ? ಮೋಸ ಹೋಗದಿರಲು ಈ ಸಲಹೆ ಅನುಸರಿಸಿ
ಇದನ್ನೂ ಓದಿ : LIC logo : ಎಲ್ಐಸಿ ಲೋಗೊ ಬಳಸುವ ಮುನ್ನ ಹುಷಾರ್! ಅನಧಿಕೃತ ಲೋಗೊ ಬಳಕೆ ವಿರುದ್ಧ ಕಾನೂನು ಕ್ರಮ
ಇದನ್ನೂ ಓದಿ : Samantha divorce : ಆ ಒಂದು ದೃಶ್ಯವೇ ನಟಿ ಜೀವನಕ್ಕೆ ಮುಳುವಾಯ್ತಾ?! ಸಮಂತಾ ಡಿವೋರ್ಸ್, ಅಭಿಮಾನಿಗಳ ಕುತೂಹಲ!
( transgenders for the police department: The bold decision of the Karnataka government)