Karnataka bandh Cancel : ಬೆಂಗಳೂರು: ಕನ್ನಡ ಪರ ಹೋರಾಟಗಾರರ ಜೊತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಧಾನ ಯಶಸ್ವಿಯಾಗಿದ್ದು ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಉದ್ಧಟತನವನ್ನು ವಿರೋಧಿಸಿ ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು.
ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಂದ್ ನಡೆಸದಂತೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದರೂ ಸಹ ಕನ್ನಡ ಪರ ಸಂಘಟನೆಗಳು ಹಿಂದೆ ಸರಿದಿರಲಿಲ್ಲ. ನಿನ್ನೆ ಸಿಎಂ ಬೊಮ್ಮಾಯಿ ಮಾಧ್ಯಮಗಳ ಮೂಲಕ ಕನ್ನಡ ಪರ ಹೋರಾಟಗಾರರ ಬಳಿ ಬಂದ್ ಹಿಂಪಡೆಯುವಂತೆ ಮನವಿ ಮಾಡಿದ್ದರು. ಅಲ್ಲದೇ ಎಂಇಎಸ್ ಸಂಘಟನೆ ವಿರುದ್ಧ ಸೂಕ್ತ ಕಾನೂನು ಕ್ರಮ ನಡೆಯುತ್ತಿದೆ ಎಂತಲೂ ಹೇಳಿದ್ದರು. ಜೊತೆಯಲ್ಲಿ ಕೋವಿಡ್ ನಿಯಮ ಮೀರಿ ಬಂದ್ ನಡೆಸಿದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದರು.
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆಯ ಮೇರೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಿಎಂ ಕಚೇರಿಗೆ ಭೇಟಿ ನೀಡಿದ್ದರು. ಇಲ್ಲಿ ಸಿಎಂ ಪ್ರಸ್ತುತ ಪರಿಸ್ಥಿತಿಯಲ್ಲಿ ಬಂದ್, ಪ್ರತಿಭಟನಾ ರ್ಯಾಲಿಗಳಿಂದ ಉಂಟಾಗಬಲ್ಲ ತೊಂದರೆಗಳ ಬಗ್ಗೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಬಂದ್ ಹಿಂಪಡೆಯುತ್ತಿರುವು ದಾಗಿ ಘೋಷಣೆ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಎಂಇಎಸ್ ಸಂಘಟನೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಎಂಇಎಸ್ ಸಂಘಟನೆ ಬ್ಯಾನ್ ಆಗಲು ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದಿದ್ದಾರೆ. ನಾಳೆ ಬಂದ್ ಮಾಡಿದ್ರೆ ಹೊಸ ವರ್ಷಾಚರಣೆಗೆ ತೊಂದರೆ ಆಗುತ್ತದೆ ಎಂದು ಹೇಳಿದರು. ನಾವು ಸಿಎಂ ಮಾತಿಗೆ ಗೌರವ ನೀಡಿದ್ದೇವೆ. ಹೀಗಾಗಿ ನಾಳೆ ನಡೆಯಬೇಕಿದ್ದ ಕರ್ನಾಟಕ ಬಂದ್ನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಈ ಬಗ್ಗೆ ಸಭೆ ನಡೆಸಿ ಕರ್ನಾಟಕ ಬಂದ್ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದನ್ನು ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!
ಇದನ್ನೂ ಓದಿ : H.D Kumaraswamy :ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್ ಪ್ರದರ್ಶನದ ಬಗ್ಗೆ ಹೆಚ್ಡಿಕೆ ಸಮರ್ಥನೆ
Vatal nagaraj withdraws karnataka bandh Cancel