DigiYatra in 3 Airports : 3 ಏರ್‌ಪೋರ್ಟ್‌ಗಳಲ್ಲಿ ಡಿಜಿಯಾತ್ರಾ ಸೇವೆ ಆರಂಭ: ನೋಂದಣಿ ಮಾಡಿಕೊಳ್ಳುವುದು ಹೇಗೆ…

ವಿಮಾನ ಪ್ರಯಾಣ (Air Travel) ಮಾಡಬೇಕಾದರೆ ಹಲವು ದಾಖಲೆಗಳ ಅಗತ್ಯವಿರುತ್ತದೆ. ಪ್ರಯಾಣಿಕರು ಕಡ್ಡಾಯವಾಗಿ ಆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಲೇ ಬೇಕಾಗುತ್ತದೆ. ಇಲ್ಲವಾದರೆ ವಿಮಾನ ಪ್ರಯಾಣ ಸಾಧ್ಯವಾಗುವುದಿಲ್ಲ. ಈಗ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನ ಪ್ರಯಾಣವನ್ನು ಸುಗಮಗೊಳಿಸಲು, ದೆಹಲಿ, ವಾರಣಾಸಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಾಗದರಹಿತ (Paperless) ಪ್ರವೇಶವನ್ನು ಪರಿಚಯಿಸಿದೆ (DigiYatra in 3 Airports) . ವಿಮಾನ ನಿಲ್ದಾಣದ ಪ್ರವೇಶಕ್ಕಾಗಿ “ಡಿಜಿಯಾತ್ರಾ” ಎಂದು ಕರೆಯಲ್ಪಡುವ ಮುಖ ಗುರುತಿಸುವಿಕೆ (ಫೇಶಿಯಲ್‌ ರೆಕಗ್ನಿಷನ್‌) ಸಾಫ್ಟ್‌ವೇರ್ ಅನ್ನು ಬಳಸಲಿದೆ . ಇದು ಪ್ರಯಾಣಿಕರು ತಮ್ಮ ಗುರುತಿನ ಚೀಟಿ ಮತ್ತು ಬೋರ್ಡಿಂಗ್ ಪಾಸ್ ಅನ್ನು ತೆಗದುಕೊಂಡು ಹೋಗುವುದನ್ನು ತಪ್ಪಿಸುತ್ತದೆ. ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಆಧಾರಿತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಪರ್ಕ ಮತ್ತು ತಡೆರಹಿತ ತಪಾಸಣೆಯನ್ನು ಮಾಡಲು ಡಿಜಿಯಾತ್ರಾವನ್ನು ಕಲ್ಪಿಸಲಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಯಾವುದೇ ಕಾಗದಗಳ ದಾಖಲೆಗಳಿಲ್ಲದೇ ಸುಲಭವಾಗಿ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಬಹುದಾಗಿದೆ.

ಡಿಜಿಯಾತ್ರಾ ಸೇವೆಯ ಲಾಭ ಪಡೆಯಲು ವಿಮಾನ ಪ್ರಯಾಣಿಕರು ಮೊದಲು ಡಿಜಿಯಾತ್ರಾ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಐಡಿಯನ್ನು ರಚಿಸಬೇಕು ಮತ್ತು ಅವರ ಬಯೋಮೆಟ್ರಿಕ್ ಮಾಹಿತಿಯನ್ನು ನೀಡಬೇಕು. ಚೆಕ್-ಇನ್, ಭದ್ರತಾ ಸ್ಕ್ರೀನಿಂಗ್ ಮತ್ತು ವಿಮಾನ ಬೋರ್ಡಿಂಗ್ ಸಮಯದಲ್ಲಿ ಪ್ರಯಾಣಿಕರ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲು ಸೇವ್‌ ಮಾಡಲಾದ ಡೇಟಾವನ್ನು ಬಳಸಲಾಗುತ್ತದೆ.

ಫೇಸ್ ಐಡಿ ಚೆಕ್-ಇನ್ ಸೌಲಭ್ಯವನ್ನು ದೇಶೀಯ ವಿಮಾನಗಳಿಗೆ ಹಂತಹಂತವಾಗಿ ನಿಯೋಜಿಸಲಾಗುವುದು. ಪ್ರಸ್ತುತ ದೆಹಲಿ, ಬೆಂಗಳೂರು ಮತ್ತು ವಾರಣಾಸಿಯಲ್ಲಿ ಈ ಸೇವೆ ಲಭ್ಯವಿರುತ್ತದೆ. ಮಾರ್ಚ್ 2023 ರ ವೇಳೆಗೆ ಹೈದರಾಬಾದ್, ಕೋಲ್ಕತ್ತಾ, ಪುಣೆ ಮತ್ತು ವಿಜಯವಾಡದಲ್ಲಿ ಇದನ್ನು ಸ್ಥಾಪಿಸಲಾಗುವುದು. ಮುಂಬರುವ ತಿಂಗಳುಗಳಲ್ಲಿ, ಸರ್ಕಾರವು ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ಡಿಜಿಯಾತ್ರಾ ಸೇವೆಯನ್ನು ವಿಸ್ತರಿಸಲಿದೆ.

ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸುವುದು ಹೇಗೆ?

  • ಮೊದಲಿಗೆ ಪ್ರಯಾಣಿಕರು ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.
  • ಇದರಲ್ಲಿ ಎನ್‌ರೋಲ್‌ ಮಾಡಲು ಪ್ರಯಾಣಿಕರು ತಮ್ಮ ಮೊಬೈಲ್ ಸಂಖ್ಯೆ ಮತ್ತು OTP ಅನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕಾಗುತ್ತದೆ.
  • ಪ್ರಯಾಣಿಕರು ತನ್ನ ಗುರುತಿನ ರುಜುವಾತುಗಳನ್ನು ರಚಿಸಲು ವಾಲೆಟ್ ಐಕಾನ್ ಮೇಲೆ ಕ್ಲಿಕ್ಕಿಸಿ.
  • ಕೆಳಗಿನ ಬಲಭಾಗದಲ್ಲಿರುವ, ಪ್ಲಸ್(+) ಚಿಹ್ನೆಯ ಮೇಲೆ ಕ್ಲಿಕ್ ಮಾಡಿದ ನಂತರ, ಬಳಕೆದಾರರು ಡಿಜಿಲಾಕರ್ ಮೂಲಕ ಅಥವಾ ಆಫ್‌ಲೈನ್ ಆಧಾರ್ ಮೂಲಕ ಅವನ/ಅವಳ ಗುರುತನ್ನು ಕ್ರಿಯೇಟ್‌ ಮಾಡಬಹುದು.
  • ನಂತರ ಪ್ರಯಾಣಿಕರ ಮುಖವನ್ನು ಸೆರೆಹಿಡಿಯಲಾಗುತ್ತದೆ ಮತ್ತು ಆಧಾರ್ ಡೇಟಾಬೇಸ್‌ನಿಂದ ಸ್ವೀಕರಿಸಿದ ಫೇಸ್ ಇಂಪ್ರೆಶನ್‌ನೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ.
  • ಈ ಪ್ರಕ್ರಿಯೆ ಯಶಸ್ವಿಯಾದ ನಂತರ, ಪ್ರಯಾಣಿಕರ ಗುರುತಿನ ರುಜುವಾತುಗಳನ್ನು ರಚಿಸಲಾಗುತ್ತದೆ ಮತ್ತು ಅವನ/ಅವಳ ಮೊಬೈಲ್ ಫೋನ್‌ನಲ್ಲಿ ಮಾತ್ರ ಸೇವ್‌ ಮಾಡಲಾಗುತ್ತದೆ.
  • ಇದರಲ್ಲಿ ಪ್ರಯಾಣಿಕರು ತಮ್ಮ ಆರೋಗ್ಯದ ಮಾಹಿತಿಗಳನ್ನು ಅಪ್‌ಲೋಡ್ ಮಾಡುವ ಆಯ್ಕೆಯೂ ಇರುತ್ತದೆ.

ಡಿಜಿಯಾತ್ರಾ ಅಪ್ಲಿಕೇಶನ್‌ನಲ್ಲಿ ನಿಮ್ಮ ಫೇಸ್ ಐಡಿಯನ್ನು ರಚಿಸಲು ಹೀಗೆ ಮಾಡಿ:

  • ಪ್ರಯಾಣಿಕರು ಡಿಜಿಯಾತ್ರಾ ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಐಒಎಸ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ.
  • ನಿಮ್ಮ ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ.
  • ಪರಿಶೀಲನೆಗಾಗಿ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ OTP ಅನ್ನು ನಮೂದಿಸಿ.
  • ನಂತರ, ಡಿಜಿಲಾಕರ್ ಅಥವಾ ಆಫ್‌ಲೈನ್ ಆಧಾರ್ ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಐಡಿ ರುಜುವಾತುಗಳನ್ನು ಲಿಂಕ್ ಮಾಡಿ.
  • ನಂತರ ಅಪ್ಲಿಕೇಶನ್ ಸೆಲ್ಫಿ ತೆಗೆದುಕೊಳ್ಳಲು ನಿಮ್ಮನ್ನು ಕೇಳುತ್ತದೆ. ಆಧಾರ್‌ಗೆ ಲಿಂಕ್ ಮಾಡಲಾದ ನಿಮ್ಮ ಮುಖದ ಐಡಿಯನ್ನು ಪರಿಶೀಲಿಸಲು ಸ್ಪಷ್ಟವಾದ ಸೆಲ್ಫಿ ತೆಗೆದುಕೊಳ್ಳಿ ಮತ್ತು ಅದನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಿ.
  • ಪ್ರಕ್ರಿಯೆಯನ್ನು ಅನುಸರಿಸಿ, ನೀವು ಪ್ರಯಾಣಿಸುತ್ತಿದ್ದರೆ ಮತ್ತು ನಿಮ್ಮ ಫ್ಲೈಟ್ ವಿವರಗಳನ್ನು ಹೊಂದಿದ್ದರೆ, ವಿಮಾನ ನಿಲ್ದಾಣದಲ್ಲಿ ನಿರ್ಗಮನ ಪ್ರಕ್ರಿಯೆಯಲ್ಲಿ ನೀವು ಹಂಚಿಕೊಳ್ಳಬೇಕಾದ ಅಪ್ಲಿಕೇಶನ್‌ನಲ್ಲಿ ನಿಮ್ಮ ಬೋರ್ಡಿಂಗ್ ಪಾಸ್ ಮಾಹಿತಿಯನ್ನು ನವೀಕರಿಸಿ.
  • ಡಿಜಿಯಾತ್ರಾ ಐಡಿಯನ್ನು ರಚಿಸಿದ ನಂತರ, ಐಡಿಯನ್ನು ಮೌಲ್ಯೀಕರಿಸಲು ನೀವು ವಿಮಾನ ನಿಲ್ದಾಣದಲ್ಲಿ ನೋಂದಣಿ ಕಿಯೋಸ್ಕ್‌ಗೆ ಹೋಗಬೇಕಾಗುತ್ತದೆ.
  • ಆಧಾರ್ ಕಾರ್ಡ್‌ ಈಗಾಗಲೇ ಬಯೋಮೆಟ್ರಿಕ್ ಮಾಹಿತಿಯನ್ನು ಹೊಂದಿರುವುದರಿಂದ ಪರಿಶೀಲನೆಯನ್ನು ಆನ್‌ಲೈನ್‌ನಲ್ಲಿ ಕೈಗೊಳ್ಳಲಾಗುತ್ತದೆ.
  • ಆದರೆ, ನೀವು ಬೇರೆ ಐಡಿಯನ್ನು ಹಂಚಿಕೊಂಡಿದ್ದರೆ, CISF ಅದನ್ನು ಮ್ಯಾನುವಲ್‌ ಆಗಿ ಪರಿಶೀಲಿಸುತ್ತದೆ. ವಿವರಗಳನ್ನು ಪರಿಶೀಲಿಸಿದ ನಂತರ, ಭವಿಷ್ಯದ ಪ್ರಯಾಣಕ್ಕಾಗಿ ನಿಮ್ಮ ವಿವರಗಳನ್ನು ಡಿಜಿಯಾತ್ರಾ ಅಪ್ಲಿಕೇಶನ್‌ಗೆ ಸೇರಿಸಲಾಗುತ್ತದೆ.

ಪ್ರಯಾಣಿಕರ ಐಡಿ ಮತ್ತು ಪ್ರಯಾಣದ ರುಜುವಾತುಗಳನ್ನು ಪ್ರಯಾಣಿಕರ ಸ್ಮಾರ್ಟ್‌ಫೋನ್‌ನಲ್ಲಿಯೇ ಸುರಕ್ಷಿತ ವ್ಯಾಲೆಟ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ : Janani Suraksha Yojana : ಗರ್ಭಿಣಿ ಮಹಿಳೆಯರಿಗೂ ಸಿಗುತ್ತೆ ಸರ್ಕಾರದಿಂದ 6,000 ರೂಪಾಯಿಗಳು

ಇದನ್ನೂ ಓದಿ : Special Train : ಡಿಸೆಂಬರ್‌ 9 ರಿಂದ ಮಂಗಳೂರು–ಮುಂಬೈ ನಡುವೆ ವಿಶೇಷ ರೈಲು; ರೈಲಿನ ವೇಳಾಪಟ್ಟಿ ಇಲ್ಲಿದೆ

(DigiYatra in 3 Airports Delhi, Varanasi and Bengaluru Airports. Step-by-Step guide to register on DigiYatra)

Comments are closed.