ಪ್ಯಾರಿಸ್: ಗೂಗಲ್ ಸಂಸ್ಥೆಗೆ ಆನ್‍ಲೈನ್ ಜಾಹಿರಾತುಗಳ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್‍ನ ಸ್ಪರ್ಧಾ ನಿಯಂತ್ರಕವು ಬರೋಬ್ಬರಿ 1948 ಕೋಟಿ (220 ದಶಲಕ್ಷ ಯೂರೋ) ದಂಡ ವಿಧಿಸಿದೆ.
ಫ್ರಾನ್ಸ್ ನ ಪ್ರಮುಖ ಮಾಧ್ಯಮ ಕಂಪನಿಗಳಾದ ನ್ಯೂಸ್ ಕಾರ್ಪೋರೇಷನ್, ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಗೂಗಲ್ ಇಂಟರ್ನೆಟ್ ಸಂಸ್ಥೆಗಳು ಜಾಹೀರಾತು ಮಾರಾಟವನ್ನು ಏಕಸ್ವಾಮ್ಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಫ್ರಾನ್ಸ್‍ನ ಸ್ಪರ್ಧಾ ನಿಯಂತ್ರಕವು ತನಿಖೆ ನಡೆಸಿತ್ತು.
ಆನ್ ಲೈನ್ ಜಾಹೀರಾತು ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಬಾರೀ ಮೊತ್ತದ ದಂಡವನ್ನು ಗೂಗಲ್ ಪಾವತಿ ಮಾಡಬೇಕಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಆನ್ ಲೈನ್ ಜಾಹೀರಾತಿನಲ್ಲಿ ಬದಲಾವಣೆಯನ್ನು ಮಾಡಲಾಗುವುದು ಎಂದು ಗೂಗಲ್ ಸಂಸ್ಥೆ ತಿಳಿಸಿದೆ.
ಗೂಗಲ್ ಸಂಸ್ಥೆಯ ತಂತ್ರಜ್ಞಾನ ಕೇವಲ ದೊಡ್ಡ ಪ್ರಕಾಶಕರಿಗೆ ಅನುಕೂಲವಾಗಿದೆ. ಅಲ್ಲದೇ ಗೂಗಲ್ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿಕೊಂಡಿರುವು ತನಿಖೆಯಲ್ಲಿ ದೃಢಪಟ್ಟಿದೆ. ಗೂಗಲ್ ಜಾಹೀರಾತು ಬಳಸುವ ವಿಧಾನ ಅಪಾರದರ್ಶಕವಾಗಿದೆ. ಅಲ್ಲದೇ ತಂತ್ರಜ್ಞಾನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟಕರವಾಗಿದೆ ಎಂದು ಆರೋಪಿಸಲಾಗಿತ್ತು.