ಚಿಕ್ಕಮಗಳೂರು : ಕೊರೊನಾ ಸೋಂಕಿಗೆ ಜನರು ಭಯ ಪಡ್ತಿಲ್ಲಾ ಅನ್ನೋದು ಕನ್ಫರ್ಮ್ ಆಗಿದೆ. ಅದ್ಯಾವಾಗ ಪ್ರವಾಸಿ ತಾಣಗಳು ಓಪನ್ ಆಗುತ್ತೋ ಅಂತಾ ಜನ ಕಾಯುತ್ತಿದ್ದಂತೆ ಬಾಸವಾಗ್ತಿದೆ.

ಯಾಕೆಂದ್ರೆ ರಾಜ್ಯದ ಎತ್ತರದ ಗಿರಿ ಶಿಖರ, ಭೂ ಲೋಕದ ಸ್ವರ್ಗ ಮುಳ್ಳಯ್ಯನಗಿರಿಗೀಗ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಒಂದೇ ಒಂದು ದಿನ ಮುಳ್ಳಯ್ಯನಗಿರಿಗೆ ಬಂದಿರೋ ಪ್ರವಾಸಿಗರ ಸಂಖ್ಯೆಯನ್ನು ಕೇಳಿದ್ರೆ ಆಶ್ಚರ್ಯವಾಗದೆ ಇರದು.

ಭೂಮಂಡಲಕ್ಕೆ ಕೊರೋನಾ ಕಾಲಿಟ್ಟು ಜಗತ್ತಿಗೆ ಬೀಗ ಬಿದ್ದಿತ್ತು. ಮನೆಯಲ್ಲಿಯೇ ಬಂಧಿಯಾಗಿದ್ದ ಜನರಿಗೆ ತಲೆ ಕೆಟ್ಟು ಹೋಗಿತ್ತು. ಆದ್ರೀಗ ಸರಕಾರ ಲಾಕ್ ಡೌನ್ ತೆರವು ಮಾಡುತ್ತಿದ್ದಂತೆಯೇ ಎದ್ವೋ ಬಿದ್ವೋ ಅಂತಾ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಊರು ಬಿಟ್ಟಿದ್ದಾರೆ.

ಇದರಿಂದಾಗಿಯೇ ಕಾಫಿನಾಡಲ್ಲಿ ಪ್ರವಾಸಿಗರ ಸಂತೆ ಜಾತ್ರೆಯಾಗಿ ಏರ್ಪಟ್ಟಿದೆ. ಇಂದೊಂದೆ ದಿನ ಕಾಫಿನಾಡಿಗೆ ಬರೋಬ್ಬರಿ 8,000 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.
800ಕ್ಕೂ ಅಧಿಕ ಕಾರು. 420ಕ್ಕೂ ಅಧಿಕ ಬೈಕ್ ಹಾಗೂ 100ಕ್ಕೂ ಹೆಚ್ಚು ಟಿಟಿಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಬಂದವರೆಲ್ಲಾ ಬಂಧನದಿಂದ ಬಿಡುಗಡೆಗೊಂಡವರಂತೆ ಹಸಿರ ವನಸಿರಿಯ ಸೊಬಗನ್ನು ಕಾಣುತ್ತ ಮೈಮರೆತಿದ್ದರು. ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಹಾಟ್ ಸ್ಪಾಟ್.

ಅದ್ರಲ್ಲೂ ಮುಳ್ಳಯ್ಯನಗಿರಿ ಇಂದ್ರನ ದೇವಲೋಕಕ್ಕೂ ಸೆಡ್ಡು ಹೊಡೆಯುವಂತಿದೆ. ತಣ್ಣನೆಯ ಗಾಳಿ, ತಿರುವು ಮುರುವು ರಸ್ತೆಗಳು, ಸ್ವಚ್ಛಂದವಾದ ವಾತಾವರಣ, ಅರೆಕ್ಷಣ ಬಿಸಿಲು, ಅರೆಕ್ಷಣ ಮಳೆ.. ಮಂಜು ಮುಸುಕಿನ ವಾತಾವರಣ ಎಂತಹವರಿಗೂ ಮುದ ನೀಡದೇ ಇರದು. ಅದಕ್ಕಾಗಿಯೇ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಆಗಮಿಸಿ ಸಂಭ್ರಮಿಸುತ್ತಾರೆ.

ಸುಮಾರು ಐದಾರು ತಿಂಗಳುಗಳಿಂದಲೂ ಕಾಫಿನಾಡಿನ ಮುಳ್ಳಯ್ಯನಗಿರಿಗೆ ಪ್ರವಾಸಿಗರನ್ನ ನಿಷೇಧಿಸಲಾಗಿತ್ತು. ಆದರೆ ನಿಷೇಧ ತೆರವಾದ ದಿನಗಳಿಂದಲೂ ಆಗಾಗ ಪ್ರವಾಸಿಗರು ಬಂದು ಹೋಗಿದ್ದಾರೆ.

ಆದರೆ ಕೊರೊನಾ ಸೋಂಕು ಕಾಫಿನಾಡಲ್ಲಿ ತೀವ್ರವಾಗಿ ಹೆಚ್ಚುತ್ತಿದ್ದಂತೆಯೇ ಪ್ರವಾಸಿಗರಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿತ್ತು. ಆದ್ರೀಗ ನಿಷೇಧ ತೆರವುಗೊಳ್ಳುತ್ತಿದ್ದಂತೆಯೇ ಪ್ರವಾಸಿಗರು ಮುಳ್ಳಯ್ಯನಗಿರಿಗೆ ಆಗಮಿಸಿ ಸಂಭ್ರಮಿಸುತ್ತಿದ್ದಾರೆ.

ಪ್ರವಾಸಿಗರ ಪಾಲಿಗೆ ಸ್ವರ್ಗವಾಗಿರುವ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರಿಗೆ ಇಷ್ಟೊಂದು ದಿನಗಳ ಕಾಲ ನಿಷೇಧ ಹೇರಿರುವುದು ಇದೇ ಮೊದಲು.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಸಾಗರೋಪಾದಿಯಲ್ಲಿ ಪ್ರವಾಸಿಗರು ಆಗಮಿಸುತ್ತಿರೋದು ಆತಂಕವನ್ನೀಡು ಮಾಡಿದೆ. ಆದರೆ ಪ್ರವಾಸಿಗರು ಸ್ವಯಂ ಪ್ರೇರಿತರಾಗಿಯೇ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಕಳೆದಾರು ತಿಂಗಳ ಬಳಿಕ ಕಾಫಿನಾಡಲ್ಲಿ ಪ್ರವಾಸಿಗರ ಚಿಲಿಪಿಲಿ ಕೇಳಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ ಸ್ಥಳೀಯರಿಗೆ ಪ್ರವಾಸಿಗರ ಆಗಮನ ಸಹಜವಾಗಿಯೇ ಖುಷಿಯನ್ನು ಕೊಟ್ಟಿದೆ.