ಚಿಕ್ಕಬಳ್ಳಾಫುರ : ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲೊಂದಾಗಿರುವ ನಂದಿಬೆಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಬಿಗ್‌ಶಾಕ್ ಎದುರಾಗಿದೆ. ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದ್ದು, ನಂದಿ ಬೆಟ್ಟ 20 ದಿನ ಕಾಲ ಬಂದ್ ಆಗಲಿದೆ.
ಕಳೆದ ರಾತ್ರಿ ಭಾರೀ ಮಳೆ ಸುರಿದಿದ್ದು, ನಂದಿಬೆಟ್ಟಕ್ಕೆ ತೆರಳುವ ರಂಗಪ್ಪ ವೃತ್ತದ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಅಲ್ಲದೇ ಹಲವು ಕಡೆಗಳಲ್ಲಿ ಗುಡ್ಡ ಕುಸಿತದ ಭೀತಿಯೂ ಉಂಟಾಗಿದೆ. ಜೊತೆಗೆ ಪ್ರವಾಸಿಗರ ಭೇಟಿಯಿಂದ ಇನ್ನಷ್ಟು ಸಮಸ್ಯೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲೀಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್. ಅವರು ನಂದಿ ಬೆಟ್ಟ ಬಂದ್ ಮಾಡಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ನಿಷೇಧ ಹೇರಿದ ಬೆನ್ನಲ್ಲೇ ನಂದಿ ಬೆಟ್ಟವನ್ನು ಬಂದ್ ಮಾಡಲಾಗಿದ್ದು, ಪ್ರವಾಸಿಗರನ್ನು ವಾಪಾಸ್ ಕಳುಹಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ರಸ್ತೆ ದುರಸ್ತಿ ಕಾರ್ಯವನ್ನು ತುರ್ತಾಗಿ ನೆರವೇರಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಮುಂದಿನ 20 ದಿನಗಳ ಕಾಲ ನಂದಿ ಬೆಟ್ಟ ಬಂದ್ ಆಗಲಿದೆ.