ಸೋಮವಾರ, ಏಪ್ರಿಲ್ 28, 2025
HomeBreakingಕೊಡಗಿನ ನಿಸರ್ಗದ ಸೌಂದರ್ಯ ರಾಣಿ ಮಂದಲ್ ಪಟ್ಟಿ

ಕೊಡಗಿನ ನಿಸರ್ಗದ ಸೌಂದರ್ಯ ರಾಣಿ ಮಂದಲ್ ಪಟ್ಟಿ

- Advertisement -

ಕೊಡಗಿನ ಸುಂದರ ಪ್ರವಾಸಿತಾಣಗಳಲ್ಲಿ ಒಂದು ಮಂದಲ್ ಪಟ್ಟಿ(ಮಾಂದಲ ಪಟ್ಟಿ). ತನ್ನದೇ ಆದ ನಿಸರ್ಗ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ನ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರೀಲ್. ಸುತ್ತ ಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಒಂದನ್ನೊಂದು ಮುತ್ತಿಕ್ಕುತ್ತಾ ಸಾಲಾಗಿ ನಿಂತ ಪಶ್ಚಿಮಘಟ್ಟ ಶ್ರೇಣಿಗಳು, ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳು ನೋಡುತ್ತಾ ಹೋದಂತೆ ಪ್ರಕೃತಿಯ ವಿಹಂಗಮ ನೋಟ ಕಣ್ಣಿಗೆ ರಾಚುತ್ತಿರುತ್ತದೆ.

ಮೊದಲೆಲ್ಲ ಮಾಂದಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ಈಗ ಮಾಂದಲಪಟ್ಟಿ ಕೂಡ ಜಿಲ್ಲೆಯಲ್ಲಿರುವ ಇತರೆ ಪ್ರವಾಸಿ ತಾಣಗಳಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಾಗಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದಷ್ಟು ದೂರ ಅಂದರೆ ಅರಣ್ಯ ಇಲಾಖೆ ವಸತಿ ಗೃಹದ ತನಕ ಡಾಂಬರು ರಸ್ತೆ ಮಾಡಲಾಗಿದೆ. ಆ ನಂತರ ಮಣ್ಣು ರಸ್ತೆಯಲ್ಲಿ ಸಾಗುವುದು ಅನಿವಾರ್ಯ.

ಇದನ್ನೂ ಓದಿ: ಮೈಸೂರಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಅಂಬಾರಿಯಷ್ಟೇ ಅಲ್ಲಾ ಇನ್ನೂ ಇದೆ ಹಲವು ವಿಶೇಷತೆ

ಸಮುದ್ರ ಮಟ್ಟದಿಂದ ಸುಮಾರು ೪೦೦೦ ಅಡಿ ಎತ್ತದಲ್ಲಿರುವ ಮಾಂದಲಪಟ್ಟಿಗೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಾದರೂ ವರ್ಷದ ಹೆಚ್ಚಿನ ದಿನಗಳು ಅಲ್ಲಿ ನೀರವ ಮೌನ ನೆಲೆಸಿರುತ್ತದೆ. ಕೊಡವ ಭಾಷೆಯಲ್ಲಿ “ಮಾಂದಲ್ ಪಟ್ಟಿ” ಎಂದರೆ ಎತ್ತರದ ಜಾಗ ಎಂದರ್ಥ. ಬಹುಶಃ ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದು ಎಂದು ಹಿರಿಯರು ಅಭಿಪ್ರಾಯಪಡುತ್ತಾರೆ.

ಮಂದಲ್ ಪಟ್ಟಿ ಪ್ರವಾಸಿಗರ ಸ್ವರ್ಗ ತಾಣ ಎಂದರೆ ತಪ್ಪಾಗಲಾರದು. ಏಕೆಂದರೆ ಏರು ರಸ್ತೆಯಲ್ಲಿ ಹರಸಹಾಸ ಮಾಡಿ ಬೆಟ್ಟವೇರಬೇಕು. ಇಲ್ಲಿ ಫೋರ್ ವೀಲರ್ ಗಳು ಮಾತ್ರ ಸಲೀಸಾಗಿ ಮುಂದೆ ಸಾಗುತ್ತದೆ. ಹೆಚ್ಚಿನವರು “ನಡೆದು ನೋಡಾ ಕೊಡಗಿನ ಬೆಡಗಾ” ಎಂಬ ಕವಿ ವಾಣಿಯಂತೆ ನಡೆದೇ ಬೆಟ್ಟದ ಮೇಲೆ ಸಾಗುತ್ತಾರೆ. ಕಲ್ಲು, ಮುಳ್ಳನ್ನು ಮೆಟ್ಟುತ್ತಾ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ ಆದರೆ ಬೆಟ್ಟದ ತುತ್ತ ತುದಿ(ವ್ಯೂಪಾಯಿಂಟ್) ತಲುಪಿದಾಗ ಕೈಗೆ ಎಟುಕುತ್ತದೆಯೇನೋ ಎಂಬಂತೆ ಮುಗಿಲು ಭಾಸವಾಗುವ.

ಇದನ್ನೂ ಓದಿ: world most beautiful airports : ಪ್ರಪಂಚದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಿವು !

ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು. ಅಲೆಅಲೆಯಾಗಿ ತೇಲಿ ಬರುವ ಮಂಜು. ಸುಂದರ ನಿಸರ್ಗ ಸೌಂದರ್ಯ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತವೆ. ನಡುಬೇಸಿಗೆಯಲ್ಲೂ ತಂಪು ಹವೆ. ಮುಂಜಾನೆ ಇಬ್ಬನಿಯ ಸಿಂಚನ, ಸಂಜೆ ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ಮನಮೋಹಕ ಅದು ವರ್ಣಿಸಲಸಾಧ್ಯ.

(Mandal Patti is the beauty queen of Nature in Kodagu)

RELATED ARTICLES

Most Popular