ಆ ಮಾಂತ್ರಿಕನ ಮೈಮೇಲೆ ಬಂದು ಬಿಟ್ಟಿದ್ದಳು ಕಾಳಿಕಾ ಮಾತೆ..! ಆ ದೇವರು ಕೇಳಿದ್ದು ರಕ್ತ ಬಲಿ..! ಭಾಗ-12

0

ಬುರುಡೆ ಕಥೆ ಹೇಳುತ್ತಿದ್ದ ಮಾಂತ್ರಿಕನನ್ನು ದಿಟ್ಟಿಸಿ ನೋಡುತ್ತಿದ್ದೆ …ಗೆಳೆಯ ಬಸಂತ್ ಅವನು ಹೇಳಿದ ಕಥೆಯನ್ನು ಕೇಳಿಯೇ ಗಾಬರಿಯಾಗಿ ಹೋಗಿದ್ದ.. ಕತೆ ಹೇಳುತ್ತಾ ಹೇಳುತ್ತಾ ಕಾಳಿಕಾದೇವಿಗೊಂದು ಪೂಜೆ ಮಾಡಿದವನೇ ವಿಕಾರವಾಗಿ ಆಡತೊಡಗಿದ.. ಅರೆ ಏನಾಯ್ತಪ್ಪಾ ಅಂತ ನೋಡಿದ್ರೆ ಮೈಮೇಲೆ ದೇವರು ಬಂದು ಬಿಟ್ಟಿದೆ..

ಕೃಷ್ಣಪ್ಪನ ಶಿಷ್ಯ ಪಟ್ಟನೆ ಎದ್ದು ನಿಂತವನೇ ಅಲ್ಲೇ ಇದ್ದ ತೀರ್ಥವನ್ನು ಆತನ ಮೇಲೆ ಎರಚಿ ಶಾಂತವಾಗು ತಾಯಿ ಶಾಂತಳಾಗು ಅನ್ನುತ್ತಿದ್ದ.. ಎಲೇ ಮಾಂತ್ರಿಕ ಇದ್ಯಾವುದೋ ಹೊಸ ಅವತಾರ ತೆಗೆದ್ನಲ್ಲಪ್ಪಾ ಅಂತ ನೋಡುತ್ತಿದ್ದೆ.. ಇಷ್ಟಕ್ಕೂ ದೇವರು ಮೈಮೇಲೆ ಬರುವುದು ದಿಟವಾ..? ಈ ಪ್ರಶ್ನೆ ನನ್ನನ್ನು ಕಾಡತೊಡಗಿತ್ತು.. ಮಾಂತ್ರಿಕನನ್ನು ನೋಡೋಕ್ಕೆ ಬಂದಿದ್ದವರು ಭಯ ಬೀಳುತ್ತಿದ್ದರು.. ಕೆಲವರ ಕೈ ಕಾಲು ನಡುಗುತ್ತಿತ್ತು.. ಇದನ್ನು ನಾನು ಗಮನಿಸಿದ್ದೆ. ಮಾಂತ್ರಿಕ ಕೃಷ್ಣಪ್ಪ ಓಂ.. ಹ್ರೀಮ್ ಕ್ಲೀಮ್.. ಫಟ್ ಸ್ವಾಹಾ ಅನ್ನ ತೊಡಗಿದ್ದ… ಮಾಂತ್ರಿಕನ ಶಿಷ್ಯ ಕಾಳಿಕಾ ಮಾತೆ ಆಗಮನವಾಯ್ತು ಅಂತ ಹೇಳಿ ಕರ್ಪೂರದಾರತಿ ಎತ್ತಿ ಅದೇನೋ ಸನ್ನೆ ಮಾಡುತ್ತಿದ್ದ.. ಅತ್ತ ಮಾಂತ್ರಿಕ ಕಟಕಟ ಹಲ್ಲು ಕಡಿಯುತ್ತಾ ವಿಕಾರವಾದ ಸದ್ದನ್ನು ಗಂಟಲಿನಿಂದ ಹೊರಡಿಸುತ್ತಾ ಪಟ್ಟನೆ ಕೂತುಬಿಟ್ಟ …

ನಮ್ಮ ಪಕ್ಕದಲ್ಲೇ ಕೂತಿದ್ದ ಒಬ್ಬ ಭಕ್ತ ಭಯದಿಂದ ನಡುಗುತ್ತಾ ತನ್ನ ಕಷ್ಟವನ್ನು ಹೇಳಿಕೊಳ್ಳ ತೊಡಗಿದ್ದ.. ನೀನು ಜಮೀನಿನ ಕಲಹಕ್ಕೆ ಬಂದಿದ್ದೀಯಾ ಅಲ್ಲವಾ ಅಂದಿದ್ದ ಮಾಂತ್ರಿಕ… ಅಂದಹಾಗೆ ಆ ಭಕ್ತ ತಾನು ಯಾಕೆ ಬಂದಿದ್ದೀನಿ ಅನ್ನೋದನ್ನ ದೇವರು ಮೈಮೇಲೆ ಬರೋಕು ಮುನ್ನವೇ ತಿಳಿಸಿದ್ದ.. ಆಗ ನಾವು ಅಲ್ಲೇ ಕೂತಿದ್ದೆವು… ಆ ಭಕ್ತ ಹೌದೌದು ಸ್ವಾಮಿ ಎಂದು ಕತ್ತು ಆಡಿಸಿದ್ದ.. ಈ ಕಷ್ಟ ಪರಿಹಾರಕ್ಕೆ ಸ್ಮಶಾನದಲ್ಲಿ ಉಗ್ರ ಪೂಜೆ ಆಗಬೇಕು ನನಗೆ ರಕ್ತ ಬಲಿಯಾಗಬೇಕು ಅಂತೆಲ್ಲ ಮಾಂತ್ರಿಕ ಬುರುಡೆ ಬಿಟ್ಟಿದ್ದ… ಆ ಮೂಢ ಭಕ್ತ ತಾಯಿ ನೀನು ಹೇಳಿದಂಗೇ ಆಗಲಿ ಅಂದಿದ್ದ…

ಅಲ್ಲಾ ನಿಜಕ್ಕೂ ದೇವರು ಮೈಮೇಲೆ ಬರ್ತಾನಾ..? ನಮಗ್ಯಾರಿಗೂ ಕಾಣದ ದೇವರು, ಓರ್ವ ಮಾಂಸ ತಿನ್ನುವ, ಮದ್ಯ ಸೇವಿಸಿ ಕಪಟತನ ಮಾಡುವವನ ಮೈಮೇಲೆ ಬರ್ತಾನೆ ಅಂದ್ಕೊಂಡ್ರೆ ಅದಕ್ಕಿಂತ ಮೂಢತನ ಮತ್ತೊಂದಿಲ್ಲ… ಓರ್ವ ಹುಲುಮಾನವನ ಮೈಮೇಲೆ ಶಕ್ತಿ ದೇವತೆ ಎಂದು ಕರೆಸಿಕೊಳ್ಳುವ ಕಾಳಿಕಾ ಮಾತೆ ಬರ್ತಾಳಾ..? ಹೋಗ್ಲಿ ಬಂದ್ರೆ ಬರ್ಲಿ ಅವಳು ಬಂದು ಹೇಳುವುದೆಲ್ಲ ನಿಜವಾ..? ಖಂಡಿತ ಸುಳ್ಳು.. ಎಲ್ಲವೂ ಹೊಟ್ಟೆ ಪಾಡಿಗಾಗಿ ಮಾಂತ್ರಿಕನಾಡುವ ಕಪಟ ನಾಟಕ..

ಈ ಕೊಳ್ಳೇಗಾಲ ಮಾತ್ರವಲ್ಲ ನಮ್ಮ ದೇಶದಲ್ಲಿ ಅನೇಕ ಕಡೆ ದೇವರು ಮೈಮೇಲೆ ಬರ್ತಾನೆ .. ನಿಮಗೆ ಡಾಕ್ಟರ್ ರಾಜ್ ಕುಮಾರ್ ಹುಟ್ಟೂರಾದ ಸಿಂಗಾನಲ್ಲೂರು ಗೊತ್ತಿರಬೇಕಲ್ಲ.. ಅಲ್ಲೊಂದು ಶಕ್ತಿ ದೇವತೆಯ ಗುಡಿ ಇದೆ.. ಅದು ಚೌಡೇಶ್ವರಿ ದೇವಸ್ಥಾನ ತುಂಬಾ ಅಚ್ಚುಕಟ್ಟಾಗಿದೆ ಊರು.. ಆ ಊರ ಒಳಗಿನ ಮೂಲೆಯಲ್ಲಿ ಈ ದೇವಸ್ಥಾನವಿದೆ.. ದೇವಸ್ಥಾನದ ಪಕ್ಕದಲ್ಲೇ ಗುಡಿಸಿಲಿನ ಆಕಾರದ ಚಪ್ಪರವಿದೆ.. ಪ್ರತಿ ದಿನ ಸಂಜೆ ಮೂರು ಗಂಟೆಯಲ್ಲಿ ಅಲ್ಲಿನ ಪೂಜಾರಿ ಮೈಮೇಲೆ ಚೌಡೇಶ್ವರಿ ಬರ್ತಾಳಂತೆ..? ಬಂದು ಭಕ್ತರ ಕಷ್ಟಗಳನ್ನು ಪರಿಹಾರ ಮಾಡ್ತಾಳಂತೆ.. ಅಂದಹಾಗೆ ಈ ಕಷ್ಟ ಪರಿಹಾರದ ರೇಟು ಬರೋಬ್ಬರಿ 101 ರೂಪಾಯಿ.. ಸಿಂಗಾನಲ್ಲೂರಿನ ಚೌಡಿ ಪೂಜಾರಿಯ ಕಥೆ ಕೇಳಿದರೆ ನೀವು ಬೆಚ್ಚಿ ಬೀಳ್ತೀರಾ.. ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸ್ತೀನಿ..

( ಮುಂದುವರಿಯುತ್ತದೆ…)

  • ಕೆ.ಆರ್.ಬಾಬು
            
Leave A Reply

Your email address will not be published.