ಭಾನುವಾರ, ಏಪ್ರಿಲ್ 27, 2025
HomeBreakingಪ್ರಥಮ ಪ್ರದರ್ಶನದಲ್ಲಿಯೆ ಜನಮನ ಗೆದ್ದ "ಶಪ್ತ ಭಾಮಿನಿ"

ಪ್ರಥಮ ಪ್ರದರ್ಶನದಲ್ಲಿಯೆ ಜನಮನ ಗೆದ್ದ “ಶಪ್ತ ಭಾಮಿನಿ”

- Advertisement -
  • ಶಶಿಧರ್ ತಲ್ಲೂರಂಗಡಿ
  • (ಚಿತ್ರಗಳು : ಪ್ರವೀಣ್ ಪೆರ್ಡೂರು )

ಸುಮಾರು ಹತ್ತು ತಿಂಗಳುಗಳೇ ಕಳೆದಿತ್ತು ಹೊಸತೊಂದು ಯಕ್ಷಗಾನ ಕಾಣದೆ, ಹೀಗಾಗಿ ಉಡುಪಿಯಿಂದ ದೂರವಿದ್ದರೂ ಬೈಂದೂರು ಸಮೀಪ ದೊಂಬೆ ಕಾಡಿಕಾಂಬ ದೇವಸ್ಥಾನದ ಆವರಣದಲ್ಲಿ ಹಾಲುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಪೆರ್ಡೂರು ಮೇಳದ ಪ್ರೊ. ಪವನ್ ಕಿರಣಕೆರೆ ವಿರಚಿತ “ಶಪ್ತ ಭಾಮಿನಿ” ಯಕ್ಷಗಾನ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದೆ. ನಾನಲ್ಲಿ ಹೋಗುವಾಗ ಗಂಟೆ ಎಂಟಾಗಿತ್ತಾದರೂ ಜನರಾಗಲೇ ಗುಂಪು ಗುಂಪಾಗಿ ಆಗಮಿಸಲಾರಂಭಿಸಿದ್ದರು. ಮುಂದಿನ ಸಾಲಿನಲ್ಲಿ ಜಾಗ ಭದ್ರ ಮಾಡಿಕೊಂಡು ಊಟ ಮುಗಿಸಿ ಆಟ ನೋಡಲಾರಂಭಿಸಿದೆ.

ಯಾವ ವ್ಯಕ್ತಿಯಾಗಲಿ ವಿಚಾರವಾಗಲಿ ಪ್ರದರ್ಶನವಾಗಲಿ ಒಳ್ಳೆಯದೊ ಕೆಟ್ಟದ್ದೋ ಎಂದು ಹೇಳಲಾಗುವುದಿಲ್ಲ. ವೀಕ್ಷಕನೊಬ್ಬ ತನಗನಿಸಿದ ಅಭಿಪ್ರಾಯವನ್ನು ಹಂಚಿಕೊಳ್ಳಬಹುದೇ ಹೊರತು ಇದಮಿತ್ತಂ ಎಂದು ಇದು ಹೀಗೆಯೇ ಎಂದು ಹೇಳುವುದಷ್ಟು ಸಮಂಜಸವಲ್ಲ. ಪ್ರದರ್ಶನ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣಿಸಬಹುದು. ಹಾಸ್ಯವನ್ನೇ ಇಷ್ಟ ಪಡುವವನಿಗೆ ಪುರಾಣ ಇಷ್ಟವಾಗದೇ ಇರಬಹುದು ಹಾಗೆಂದು ಪುರಾಣವೇ ಸರಿ ಇಲ್ಲ ಎಂದರೆ ತಪ್ಪಾಗುತ್ತದಷ್ಟೆ. ಶುದ್ಧ ಸಸ್ಯಾಹಾರಿಯೊಬ್ಬನಿಗೆ ಮಾಂಸಾಹಾರ ಸೇವನೆಯೇ ತಪ್ಪು ಎಂದೆನ್ನಿಸಬಹುದು ಅದು ಅವನ ವೈಯುಕ್ತಿಕ ಅಭಿಪ್ರಾಯವಾಗಿರುತ್ತದೆಯೇ ವಿನಃ ಸಾರ್ವತ್ರಿಕ ಸತ್ಯ ಎನ್ನಿಸಿಕೊಳ್ಳುವುದಿಲ್ಲ.

ಯಕ್ಷಗಾನ ಕಲೆ ಇರಬಹುದು ನಾಟಕ ಸಿನೆಮಾ ಹೀಗೆ ಯಾವ ಪ್ರದರ್ಶನವಿದ್ದರೂ ಎಲ್ಲರೂ ಇಷ್ಟ ಪಡಬೇಕು ಎಂಬ ನಿಯಮ ವೇನಿಲ್ಲ. ಆದರೂ ಡೇರೆ ಮೇಳವೊಂದರಲ್ಲಿ ಪೌರಾಣಿಕ ಕೃತಿಯನ್ನು ರಚಿಸಿ ತಿರುಗಾಟ ನಡೆಸಬಹುದು ಎಂದು ನಿರ್ಧರಿಸಿರುವ ಪೆರ್ಡೂರು ಮೇಳದವರ ಧೈರ್ಯವನ್ನು ಮೆಚ್ಚಲೇಬೇಕು. ಪ್ರತಿ ಬಾರಿ ಹೊಸ ಸಾಮಾಜಿಕ ಪ್ರಸಂಗ ಬಂದಾಗಲೆಲ್ಲ ಪುರಾಣವನ್ನು ಮರೆತಿದ್ದೇವೆ, ಯಕ್ಷಗಾನ ಹಾಳಾಗುತ್ತಿದೆ ಎಂದು ಬೊಬ್ಬಿಡುತ್ತಿರುವವರಲ್ಲಿ ಎಷ್ಟು ಮಂದಿ ಈ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ವೀಕ್ಷಿಸಿ ಪ್ರೋತ್ಸಾಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಷ್ಟೆ. ಪೌರಾಣಿಕ ಯಕ್ಷಗಾನ ಪ್ರಿಯರ ಕೂಗಿಗೆ ಶಪ್ತಭಾಮಿನಿ ಒಂದು ಉತ್ತರವಾಗಿದೆ ಎಂದರೆ ತಪ್ಪಿಲ್ಲ.

ಪೆರ್ಡೂರು ಮೇಳದ ಆಟವೆಂದೋ, ಪ್ರೊ. ಪವನ್ ಕಿರಣಕೆರೆಯವರ ಪ್ರಸಂಗದ ಮೊದಲ ಪ್ರದರ್ಶನವೆಂದೋ, ಬಹಳ ಸಮಯದ ನಂತರ ಯಕ್ಷಗಾನ ವೀಕ್ಷಣೆಯ ಅವಕಾಶವೆಂದೋ ಅಥವಾ ಇನ್ನಾವ ಕಾರಣಕ್ಕೊ ಮೊನ್ನೆಯಂತೂ ಆಟ ನೋಡಲು ಜನಸಾಗರವೇ ಹರಿದು ಬಂದಿತ್ತು. ದೊಂಬೆಯ ಯುವ ಸಂಯೋಜಕರು ಪಟ್ಟ ಶ್ರಮ ಬಂದ ಜನರಲ್ಲಿ ಕಾಣಬಹುದಿತ್ತು. ಆಟ ನೋಡಲು ಜನರೇನೋ ಸೇರುತ್ತಾರೆ ಆದರೆ ಆಟ ಮುಗಿಯುವಲ್ಲಿಯವರೆಗೆ ಎಷ್ಟು ಜನರು ನಿಂತಿರುತ್ತಾರೆ ಎಂಬುದು ಯಕ್ಷಪ್ರಶ್ನೆ. ಕಾಲಮಿತಿ ಆಟವನ್ನೇ ಸಂಪೂರ್ಣ ನೋಡುವಷ್ಟು ಜನರಿಗೆ ತಾಳ್ಮೆ ಇಲ್ಲದ ಈ ಕಾಲದಲ್ಲಿ ರಾತ್ರಿ ಸೇರಿದ್ದ ಅರ್ಧಕ್ಕಿಂತಲೂ ಹೆಚ್ಚಿನ ಜನ ಬೆಳಗ್ಗೆ 5.30ಕ್ಕೆ ಆಟ ಮುಗಿಯುವಾಗಲೂ ಇದ್ದು ಕೊನೆಗೊಂದು ಚಪ್ಪಾಳೆ ತಟ್ಟುತ್ತಾರೆಂದರೆ ಆ ಪ್ರಸಂಗ ಗೆದ್ದಿದೆ ಎಂದೇ ಅರ್ಥ. ಮೊನ್ನೆಯ ಶಪ್ತ ಭಾಮಿನಿ ಪ್ರಸಂಗದ ಮೊದಲ ಪ್ರದರ್ಶನ ಇದಕ್ಕೆ ಉದಾಹರಣೆ ಆಯ್ತೆಂದರೆ ಪ್ರಸಂಗ ಜನಮಾನಸ ಮುಟ್ಟುವಲ್ಲಿ ಪ್ರಥಮ ಪ್ರದರ್ಶನದಲ್ಲಿಯೇ ಯಶಸ್ವಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೆಚ್ಚಿನ ಜನರಿಗೆ ತಿಳಿದಿಲ್ಲದ ಮರುತ್ತ ಮಹಾರಾಜನ ಕಥೆ ಶಪ್ತಭಾಮಿನಿ. ಇಲ್ಲಿ ಭಾಮಿನಿ ಯಾರು! ಶಪ್ತಭಾಮಿನಿ ಎಂದರೇನು? ಇವೆಲ್ಲ ತಿಳಿಯಬೇಕೆಂದರೆ ನೀವು ಪ್ರಸಂಗ ನೋಡಬೇಕು. ಕಥೆಯ ಯಾವ ಗುಟ್ಟನ್ನೂ ಹೇಳದೆ ನನಗಿಷ್ಟವಾದ ಹಾಗೂ ಇಷ್ಟವಾಗದ ಒಂದಷ್ಟು ವಿಚಾರಗಳನ್ನಷ್ಟೇ ನಾನಿಲ್ಲಿ ಬರೆಯುತ್ತಿದ್ದೇನೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವೇ ಹೊರತು ಪ್ರತಿಯೊಬ್ಬರೂ ಇದನ್ನು ಒಪ್ಪಲೇಬೇಕೆಂಬ ತರ್ಕವೇನಿಲ್ಲ.

ಡೇರೆ ಮೇಳ ಎಂದ ಮೇಲೆ ಹೊಸ ಪ್ರಸಂಗದ ನಿರೀಕ್ಷೆಯಿರಿಸಿಕೊಂಡರೆ ತಪ್ಪಿಲ್ಲ ಆದರೆ ಈ ವರ್ಷದ ವೈಪರೀತ್ಯಗಳಿಂದಾಗಿ ಹೊಸ ಪ್ರಸಂಗವೊಂದು ನಿರೀಕ್ಷಿತ ಮಟ್ಟವನ್ನು ಏರಬಲ್ಲುದೇ ಎಂಬುದೂ ಪ್ರಶ್ನೆ, ಆದರೆ ಯಾವ ಹೊಸ ಪ್ರಸಂಗಕ್ಕೂ ಕಡಿಮೆ ಇಲ್ಲವೆಂಬ ಮಟ್ಟವನ್ನು ಏರುವಲ್ಲಿ ಶಪ್ತಭಾಮಿನಿ ಸಫಲವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ನನ್ನ ಪ್ರಕಾರ ಕಲಾಭಿಮಾನಿಯೊಬ್ಬ ಹೊಸ ಸಾಮಾಜಿಕ ಪ್ರಸಂಗದಲ್ಲಿ ಏನೆಲ್ಲ ಬಯಸುತ್ತಾನೋ ಬಹುಪಾಲು ಎಲ್ಲ ವಿಚಾರಗಳೂ ಪೌರಾಣಿಕ ಶಪ್ತಭಾಮಿನಿಯಲ್ಲಿವೆ.

ಹಿರಿಯ ಅನುಭವಿ ಕಲಾವಿದರ ಜೊತೆಗೆ ಹೊಸದಾಗಿ ಸೇರಿಕೊಂಡ ಯುವ ಕಲಾವಿದರ ತಾಳಮೇಳ ಸರಿಯಾಗಿ ಹೊಂದಿಕೊಂಡಂ ತಿದೆ. ಮೊದಲ ಭಾಗದ ಹಿಮ್ಮೇಳ ಗಣೇಶ್ ಆಚಾರ್ಯ ಭಾಗವತಿಕೆ ಅದ್ಭುತವಾಗಿ ಮೂಡಿ ಬಂದರೆ ಚಂಡೆ ಮದ್ದಳೆಯಲ್ಲಿ ರವಿ ಕಾಡೂರು ಹಾಗೂ ಅಕ್ಷಯ್ ಆಚಾರ್ಯ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಜನ್ಸಾಲೆ 12-3 ಎಂದು ತಮ್ಮ ಸಮಯ ಬದಲಾವಣೆ ಮಾಡಿಕೊಂಡಿದ್ದರೂ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.

ಇನ್ನು ಪ್ರಸನ್ನ ಭಟ್ ಬಾಳ್ಕಲ್, ಸುನಿಲ್ ಭಂಡಾರಿ ಹಾಗೂ ಸುಜನ್ ಒಳಗೊಂಡ ಸಂಪೂರ್ಣ ಹಿಮ್ಮೇಳ ಕಿವಿಗೆ ಹಿತವೆನ್ನಿಸುವ ಪ್ರಸಂಗದ ಪದ್ಯಗಳು ಇಂಪಾಗಿ ಮೂಡಿ ಬರುವಲ್ಲಿ ಸಹಭಾಗಿಗಳಾದರು. ಪವನ್ ಕಿರಣಕೆರೆಯವರ ಪದ್ಯ ರಚನೆಯ ಸಾಮರ್ಥ್ಯಕ್ಕೆ ಜೈ ಎನ್ನಲೇಬೇಕು. ಬಹಳ ಅದ್ಬುತವಾದ ಸಾಹಿತ್ಯವನ್ನೊಳಗೊಂಡಿದೆ ‘ಶಪ್ತಭಾಮಿನಿ’.

ಇನ್ನು ಮುಮ್ಮೇಳದ ಬಗ್ಗೆ ಹೇಳಬೇಕೆಂದರೆ ಕಥಾಸಾರಾಂಶವನ್ನು ಸಮರ್ಥವಾಗಿ ಜನರಿಗೆ ತಲುಪಿಸುವಲ್ಲಿ ಸಮಗ್ರ ಮುಮ್ಮೇಳ ಕಲಾವಿದರು ಯಶಸ್ವಿಯಾಗಿದ್ದಾರೆ. ಯುವ ಕಲಾವಿದರ ಹುರುಪಂತೂ ಬಹಳಷ್ಟು ಮನಸ್ಸಿಗೆ ಮುದ ನೀಡಿದ್ದು ನಿಜ. ಹೊಸ ಸೇರ್ಪಡೆ ಸ್ತ್ರೀವೇಷ ಕಲಾವಿದ ಸುಧೀರ್ ಉಪ್ಪೂರು ಅವರ ನಾಟ್ಯ ನಟನೆ ಎರಡೂ ಅದ್ಬುತವಾಗಿತ್ತು. ಯಲಗುಪ್ಪ ಹಾಗೂ ವಿದ್ಯಾಧರ ಜಲವಳ್ಳಿಯವರ ಪೋಷಕ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಯಕ್ಷಗಾನದ ಬಡಗುತಿಟ್ಟಿನಲ್ಲಿ ಮಾತುಗಾರರ ಕೊರತೆ ಇರುವ ಈ ಕಾಲದಲ್ಲಿ ತಾನೊಬ್ಬ ಸಮರ್ಥ ಅರ್ಥಧಾರಿಯಾಗುವತ್ತ ಕಿರಾಡಿ ಪ್ರಕಾಶ್ ದಾಪುಗಾಲಿಡುತ್ತಿದ್ದಾರೆ ಈ ನಿಟ್ಟಿನಲ್ಲಿ ಕೆಕ್ಕಾರು ಆನಂದ ಭಟ್ ರವರೂ ತಮ್ಮದೇ ಛಾಪು ಮೂಡಿಸಿದ್ದಾರೆ.

ಖಳನಾಗಿ ಕಾರ್ತಿಕ್ ಚಿಟ್ಟಾಣಿ ತಾವು ರಂಗದಲ್ಲಿದ್ದಷ್ಟು ಹೊತ್ತು ಜನರ ಗಮನವನ್ನು ತನ್ನ ಹಿಡಿತದಲ್ಲಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರೆ. ಇನ್ನು ಕಡಬಾಳ ಉದಯ್ ಹೆಗ್ಡೆ ತಮಗೆ ಸಿಕ್ಕ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಭಾವನಾತ್ಮಕ ಪಾತ್ರದಲ್ಲಿ ಕುಂಕಿಪಾಲ್ ಮಿಂಚಿದರೆ ನಾಗರಾಜ್ ದೇವಲ್ಕುಂದ ಪ್ರಾರಂಭದ ನೃತ್ಯವನ್ನು ಸನ್ಮಯ್ ಭಟ್ ಜೊತೆಗೂಡಿ ಅದ್ಭುತವಾಗಿ ನಿರ್ವಹಿಸಿ ನಂತರದ ತಮ್ಮ ಪಾತ್ರದಲ್ಲಿ ಯಶಸ್ವಿಯಾಗಿದ್ದಾರೆ.

ಮಾಗೋಡು ಅಣ್ಣಪ್ಪ ತಮ್ಮಿಷ್ಟದ ಖಳನ ಪಾತ್ರದಲ್ಲಿ ಹೊಸ ಛಾಪನ್ನು ಮೂಡಿಸಿದ್ದಾರೆ. ಸನ್ಮಯ್ ಭಟ್ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಕಲಾವಿದ ಎಂಬುದನ್ನು ಸಾಬೀತು ಮಾಡಿದ್ದಾರೆ. ಇನ್ನು ವಿನಾಯಕ ಗುಂಡಬಾಳ ತಮಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ನೆರವೇರಿಸಿದ್ದಾರೆ.

ಪ್ರಸಂಗದ ಮೂಲ ಪುರಾಣವಾದ್ದರಿಂದ ಮೂಲ ಕಥೆಗೆ ಭಂಗ ಬಾರದ ರೀತಿಯಲ್ಲಿ ಹಾಸ್ಯ ಪಾತ್ರಗಳನ್ನು ಸೃಷ್ಟಿಸುವುದು ಕಷ್ಟದ ಕೆಲಸವೇ ಸರಿ. ಆದರೂ ಪ್ರಸಂಗದ ಆಶಯಕ್ಕೆ ಅಡ್ಡಿಯಾಗದಂತೆ ಹಾಸ್ಯಪಾತ್ರಗಳ ಸೃಷ್ಟಿಯಾಗಿದೆ. ಎಲ್ಲಿಯೂ ಹಾಸ್ಯ ಬೇಕೆಂಬ ಕಾರಣಕ್ಕೆ ಹಾಸ್ಯ ಪಾತ್ರವನ್ನು ತುರುಕಿದಂತೆ ಭಾಸವಾಗುವುದಿಲ್ಲ.

ಇದ್ದ ಕಡಿಮೆ ಅವಕಾಶದಲ್ಲಿಯೂ ಜನರನ್ನು ಮನಸಾರೆ ನಗಿಸುವಲ್ಲಿ ರಮೇಶ್ ಭಂಡಾರಿಯವರು ಯಶಸ್ವಿಯಾಗಿದ್ದಾರೆ. ಇನ್ನು ರವೀಂದ್ರ ದೇವಾಡಿಗ ವಿನೂತನ ಬಗೆಯ ತಮ್ಮ ಶೈಲಿಯಲ್ಲಿ ಜನರನ್ನು ರಂಜಿಸಿದ್ದಾರೆ. ಪುರಂದರ ಮೂಡ್ಕಣಿಯವರ ಹಾಸ್ಯವಂತೂ ನೀವು ನೋಡಿಯೇ ಅನುಭವಿಸಬೇಕು.

ಒಟ್ಟಾರೆ ಒಂದು ಯಕ್ಷಗಾನ ಪ್ರಸಂಗವಾಗುವಲ್ಲಿ ಶಪ್ತಭಾಮಿನಿ ಗೆದ್ದಿದೆ. ಇಲ್ಲಿ ನವರಸಗಳಿಗೂ ಅವಕಾಶವಿದೆ. ನಾಗನೃತ್ಯವಿದೆ, ಶೃಂಗಾರವಿದೆ, ಹಾಸ್ಯವಿದೆ, ಕ್ರೌರ್ಯವಿದೆ, ಕರುಣೆಯಿದೆ, ತ್ಯಾಗವಿದೆ, ನಿಷ್ಕಲ್ಮಶ ಪ್ರೇಮವಿದೆ. ಹೀಗೆ ಎಲ್ಲ ಬಗೆಯ ಪ್ರೇಕ್ಷಕರನ್ನೂ ತನ್ನೆಡೆ ಸೆಳೆಯುವ ಸಾಮರ್ಥ್ಯ ಹೊಂದಿರುವ ಪೌರಾಣಿಕ ಪ್ರಸಂಗ ‘ಶಪ್ತ ಭಾಮಿನಿ’.

ಇನ್ನು ಕೆಲವೆಡೆ ಅತಿರೇಕ ಎನ್ನಿಸುವ ಕಲಾವಿದರ ವೈಯುಕ್ತಿಕ ದೂಷಣೆಗಳ ಮಾತುಕತೆಯೊಂದನ್ನು ಹೊರತು ಪಡಿಸಿ ಕೆಲವಷ್ಟು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಪ್ರಸಂಗದ ಮೂಲ ಪುರಾಣದ ಜ್ಞಾನವನ್ನು ಮತ್ತಷ್ಟು ಅಭ್ಯಸಿಸಿ ಅದರಂತೆ ಪ್ರದರ್ಶನ ನೀಡುವಲ್ಲಿ ಕಲಾವಿದರು ಮನಸ್ಸು ಮಾಡಿದರೆ ಶಪ್ತ ಭಾಮಿನಿಯ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏನೇ ಇದ್ದರೂ ನೀವೊಮ್ಮೆ ನೋಡಲೇಬೇಕಾದ ಯಕ್ಷಪ್ರಸಂಗ “ಶಪ್ತಭಾಮಿನಿ”.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular