Yakshnagana : ರಾಘವೇಂದ್ರ ಜನ್ಸಾಲೆ ಅವರ ಸ್ಥಾನಕ್ಕೆ ಧಾರೇಶ್ವರ : ಪೆರ್ಡೂರು ಮೇಳದಲ್ಲಿ ಭಾರೀ ಬದಲಾವಣೆ

ಕರಾವಳಿಯ ಪ್ರಮುಖ ಯಕ್ಷಗಾನ (Yakshnagana) ಮೇಳ ಎನಿಸಿಕೊಂಡಿರುವ ಪೆರ್ಡೂರು ಮೇಳದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ಕರಾವಳಿಯ ಗಾನಕೋಗಿಲೆ ಅಂತಾನೇ ಖ್ಯಾತಿ ಪಡೆದಿರುವ ರಾಘವೇಂದ್ರ ಜನ್ಸಾಲೆ ಅವರು ಈ ಬಾರಿ ಪೆರ್ಡೂರು ಮೇಳದ ಪ್ರಧಾನ ಭಾಗವತಿಕೆಯ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ಬರೋಬ್ಬರಿ 9 ವರ್ಷಗಳ ಬಳಿಕ ಮೇಳದ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ ಅವರು ರಂಗಮಂಚಕ್ಕೇರಲಿದ್ದಾರೆ.

ಈಗಾಗಲೇ ಕೆಲವು ಮೇಳಗಳು ಪ್ರಸಕ್ತ ಸಾಲಿನ ತಿರುಗಾಟವನ್ನು ಆರಂಭಿಸಿವೆ. ಇದೀಗ ಡೇರೆ ಮೇಳವಾಗಿರುವ ಪೆರ್ಡೂರು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಇದೇ ನವೆಂಬರ್‌ ೩೦ರಿಂದ ಯಕ್ಷಯಾನ ಆರಂಭಿಸಲಿದೆ. ಆದರೆ ಪ್ರಥಮ ದೇವರ ಸೇವೆಯ ಹೊತ್ತಲ್ಲೇ ಪೆರ್ಡೂರು ಮೇಳದಿಂದ ಭಾರೀ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದಲೂ ತನ್ನ ಗಾನ ಮಾಧುರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ತನ್ನೆಡೆಗೆ ಸೆಳೆದಿದ್ದ ರಾಘವೇಂದ್ರ ಜನ್ಸಾಲೆ ಅವರು ಈ ಬಾರಿ ಪೆರ್ಡೂರು ಮೇಳದಿಂದ ಹೊರ ನಡೆದಿದ್ದಾರೆ.

ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ ಅವರು ಈ ಬಾರಿ ಮೇಳದ ಕಲಾವಿದರು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಅನ್ನೋ ಪರ್ಮಾನು ಹೊರಡಿಸಿದ್ದಾರೆ. ಆದರೆ ಈ ನಿಯಮವನ್ನು ಒಪ್ಪುವುದಕ್ಕೆ ಜನ್ಸಾಲೆ ಅವರು ಸಿದ್ದರಿಲ್ಲ. ಹಗಲಿನ ಹೊತ್ತಲ್ಲಿ ಗಾನವೈಭವ, ತಾಳಮದ್ದಲೆಯಂತಹ ಕಾರ್ಯಕ್ರಮಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ನನ್ನನ್ನು ಮಾರಿಕೊಳ್ಳಲು ನಾನು ತಯಾರಿಲ್ಲ. ಹೀಗಾಗಿ ಪೆರ್ಡೂರು ಮೇಳದ ತಿರುಗಾಟಕ್ಕೆ ವಿದಾಯ ಹೇಳುತ್ತಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆಯನ್ನು ಕೊಟ್ಟಿದ್ದಾರೆ.

ಜನ್ಸಾಲೆ ಈಗಾಗಲೇ ಪೆರ್ಡೂರು ಮೇಳದಿಂದ ಹೊರ ನಡೆಯುತ್ತಿದ್ದಂತೆಯೇ ಅವರ ಸ್ಥಾನಕ್ಕೆ ಪ್ರಖ್ಯಾತ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಪೆರ್ಡೂರು ಮೇಳದ ಪ್ರಧಾನ ಭಾಗವತರ ಸ್ಥಾನದಲ್ಲಿ ತಂದು ಕೂರಿಸಿದ್ದಾರೆ ವೈ.ಕರುಣಾಕರ ಶೆಟ್ಟಿ. ವಯಸ್ಸಿನ ಹಿನ್ನೆಲೆಯಲ್ಲಿ ಧಾರೇಶ್ವರ ಅವರು ಸುಮಾರು ಒಂಬತ್ತು ವರ್ಷಗಳ ಹಿಂದೆ ಮೇಳದಿಂದ ದೂರವಾಗಿದ್ದರು. ನಂತರದಲ್ಲಿ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದವರು ಜನ್ಸಾಲೆ. ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡರ ಒಡನಾಡಿಯಾಗಿದ್ದ ಧಾರೇಶ್ವರ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ನವೆಂಬರ್‌ 30 ರಂದು ಪೆರ್ಡೂರು ಮೇಳ ಈ ಸಾಲಿನ ತಿರುಗಾಟವನ್ನು ಆರಂಭಿಸಲಿದೆ. ಈಗಾಗಲೇ ಪ್ರೊ. ಪವನ್‌ ಕಿರಣ್‌ಕೆರೆ ಅವರ ಕೃಷ್ಣ ಕಾದಂಬಿನಿ ಪ್ರಸಂಗ ಪ್ರದರ್ಶನವಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮೇಳ ಮಾಡಿಕೊಳ್ಳುತ್ತಿದೆ. ಇನ್ನು ಪೆರ್ಡೂರು ಮೇಳಕ್ಕೆ ಪ್ರಧಾನ ವೇಷಧಾರಿಯಾಗಿದ್ದ ಥಂಡೀಮನೆ ಶ್ರೀಪಾದ ಹೆಗಡೆ ಅವರು ಮತ್ತೆ ಪೆರ್ಡೂರು ಮೇಳಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಖ್ಯಾತ ಕಲಾವಿದ ಉದಯ ಕಡಬಾಳ ಹಾಗೂ ಹಾಸ್ಯ ಕಲಾವಿದ ರಮೇಶ್‌ ಭಂಡಾರಿ ಮೂರೂರು ಪೆರ್ಡೂರು ತೊರೆದಿದ್ದಾರೆ. ಈ ಪೈಕಿ ರಮೇಶ್‌ ಭಂಡಾರಿ ಮತ್ತೆ ಸಾಲಿಗ್ರಾಮ ಮೇಳದ ಪ್ರಧಾನ ಹಾಸ್ಯಗಾರರಾಗಿದ್ದಾರೆ.

ಒಟ್ಟಿನಲ್ಲಿ ಜನ್ಸಾಲೆ ಮೇಳ ಬಿಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಜನ್ಸಾಲೆ ಜಾಗದಲ್ಲಿ ಧಾರೇಶ್ವರ ಅವರು ಕಾಣಿಸಿಕೊಳ್ಳುತ್ತಿವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಆದರೆ ಜನ್ಸಾಲೆ ಅಭಿಮಾನಿಗಳು, ಸಂಘಟಕರು ಮಾತ್ರ ನಿರಾಸೆಗೊಂಡಿದ್ದಾರೆ.

ಇದನ್ನೂ ಓದಿ : ಆರಾಧ್ಯ ಗಾನದೇವತೆಯೇ ಮತ್ತೊಮ್ಮೆ ನಮಗಾಗಿ ಹುಟ್ಟಿ ಬರುವಿರಾ…

ಇದನ್ನೂ ಓದಿ : ಕರಾವಳಿಯಲ್ಲಿ ಮೊಳಗಲಿದೆ ಚೆಂಡೆ, ಮದ್ದಲೆಯ ಸದ್ದು : ನವೆಂಬರ್ ನಲ್ಲಿ ಮೇಳಗಳ ತಿರುಗಾಟ ಆರಂಭ !

( Yakshnagana Subramanya Dhareshwar to replace Raghavendra Jansale: Huge change at Perdur Mela)

Comments are closed.