ಭಾನುವಾರ, ಏಪ್ರಿಲ್ 27, 2025
HomeCoastal Newsಸಾಲಿಗ್ರಾಮ : ಮಾಸ್ತಿಯಮ್ಮ, ಕಲ್ಕುಡ ಪರಿವಾರ ದೇವಸ್ಥಾನದಲ್ಲಿ ಜೀರ್ಣೋದ್ದಾರ, ಪುನರ್‌ ಪ್ರತಿಷ್ಠೆ ಹಾಗೂ ಸಿರಿ ಸಿಂಗಾರ...

ಸಾಲಿಗ್ರಾಮ : ಮಾಸ್ತಿಯಮ್ಮ, ಕಲ್ಕುಡ ಪರಿವಾರ ದೇವಸ್ಥಾನದಲ್ಲಿ ಜೀರ್ಣೋದ್ದಾರ, ಪುನರ್‌ ಪ್ರತಿಷ್ಠೆ ಹಾಗೂ ಸಿರಿ ಸಿಂಗಾರ ಕೋಲಸೇವೆ

- Advertisement -

( ವರದಿ : ಆರ್.ಕೆ. ಬ್ರಹ್ಮಾವರ ) ಸಾಲಿಗ್ರಾಮ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಸಾಲಿಗ್ರಾಮ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದು. ಇಲ್ಲಿನ ಶ್ರೀಗುರು ನರಸಿಂಹ ಹಾಗೂ ಆಂಜನೇಯ ದೇವರು ಅನಾಧಿಕಾಲದಿಂದಲೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಇಂತಹ ಪುಣ್ಯಕ್ಷೇತ್ರವಾಗಿರುವ ಸಾಲಿಗ್ರಾಮದಲ್ಲಿ ಮತ್ತೊಂದು ದೈವ ಸಾನಿಧ್ಯವಿದೆ. ಸದಾ ಭಕ್ತರನ್ನು ಕೈಹಿಡಿದು ಕಾಪಾಡುತ್ತಿರುವ ಶ್ರದ್ದಾಭಕ್ತಿಯ ಕೇಂದ್ರ ಎಂದೇ ಕರೆಯಿಸಿಕೊಳ್ಳುತ್ತಿರುವ ಸಾಲಿಗ್ರಾಮದ ಶ್ರೀಗುರು ನರಸಿಂಹ ದೇವಸ್ಥಾನದ ಹಿಂಭಾಗದಲ್ಲಿರುವ ದೇವಸ್ಥಾನಬೆಟ್ಟು ಶ್ರೀ ಮಾಸ್ತಿಯಮ್ಮ ಕಲ್ಕುಡ ಪರಿವಾರ (Masti amma kalkuda temple) ದೇವಸ್ಥಾನ.

ಸಾಲಿಗ್ರಾಮ ಚಿತ್ರಪಾಡಿಯ ದೇವಸ್ಥಾನ ಬೆಟ್ಟುವಿನಲ್ಲಿರುವ ಮಾಸ್ತಿಯಮ್ಮ, ಕಲ್ಕುಡ ಹಾಗೂ ಪರಿವಾರ ದೇವರು ಕಷ್ಟ ಎಂದು ಬಂದವರ ಇಷ್ಟಾರ್ಥಗಳನ್ನು ಸಿದ್ದಿಸಿದೆ. ಇಂತಹ ಪವಿತ್ರ ಪುಣ್ಯಕ್ಷೇತ್ರದಲ್ಲೀಗ ಜೀರ್ಣೋದ್ದಾರ ಪುನರ್‌ ಪ್ರತಿಷ್ಠೆಯ ಸಂಭ್ರಮ. ಜೊತೆಗೆ ಸಿರಿ ಸಿಂಗಾರ ಕೋಲ ಸೇವೆಯು ನಡೆಯುತ್ತಿದೆ. ಮೇ 20 ಹಾಗೂ 21 ರಂದು ಎರಡು ದಿನಗಳ ಕಾಲ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇಂದು ರಾತ್ರಿ 9.05 ಕ್ಕೆ ಸರಿಯಾಗಿ ಚಾಪ ಲಗ್ನ ಶುಭ ಸಮೂರ್ತದಲ್ಲಿ ಜೀರ್ಣೊದ್ದಾರ ಹಾಗೂ ಪುನರ್‌ ಪ್ರತಿಷ್ಠಾ ಮಹೋತ್ಸವವು ವಿದ್ವಾನ್‌ ಶ್ರೀನಿವಾಸ ಅಡಿಗರ ಮಾರ್ಗದರ್ಶನ ಹಾಗೂ ವೇದಮೂರ್ತಿ ಜನಾರ್ಧನ ಅಡಿಗರ ಸಾರಥ್ಯದಲ್ಲಿ ನಡೆಯಲಿದೆ. ನಾಳೆ ಮೇ 21 ರಂದು ಬೆಳಗ್ಗೆ 9 ಗಂಟೆಗೆ ಕಲಶಾಭಿಷೇಕ, ಮಹಾಪೂಜೆ, ದರ್ಶನ ಸೇವೆ, ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 12.30 ಕ್ಕೆ ಮಹಾ ಅನ್ನ ಸಂತರ್ಪಣೆಯು ನೆರವೇರಲಿದೆ. ಮಧ್ಯಾಹ್ನ 3.30 ಕ್ಕೆ ಸಾಸ್ತಾನ ಗೋಳಿಗರಡಿಯ ಶ್ರೀ ಬ್ರಹ್ಮ ಬೈದರ್ಕಳ ಮಹಿಳಾ ಭಜನಾ ಮಂಡಳಿ ಹಾಗೂ ಶಿರಿಯಾರ ಓಂ ಶ್ರೀ ಜಗನ್ಮಾತ ಮಹಿಳಾ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ಸಂಜೆ 6 ಗಂಟೆಗೆ ಪಾಲು ಭಂಡಾರ ಹೊರಡಲಿದ್ದು, ರಾತ್ರಿ 9.30 ಕ್ಕೆ ಸರಿಯಾಗಿ ಕಲ್ಕುಡ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರ ಕೋಲ ಸೇವೆ ನೆರವೇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್‌ ಪೂಜಾರಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎಸ್.ಬಿ. ರಾಘವೇಂದ್ರ ಆಚಾರ್‌ ಹಾಗೂ ದೇವಸ್ಥಾನದ ಮೊಕ್ತೇಸರರಾದ ಗೋಪಾಲ್‌ ಆಚಾರ್‌ ಅವರು ತಿಳಿಸಿದ್ದಾರೆ.

Masti Amma Kalkuda Temple : ದೇವಸ್ಥಾನ ಹಿನ್ನೆಲೆ :

ಮಾಸ್ತಿ ಅಮ್ಮ ಕಲ್ಕುಡ ಪರಿವಾರ ದೇವಸ್ಥಾನಕ್ಕೆ ಇತಿಹಾಸವಿದೆ. ಶತಮಾನದ ಹಿಂದಿನ ಕಥೆಯಿದು. ಅಂದು ಉರಾಳ ಮನೆತನದ ಜಾಗದಲ್ಲಿ ಎರಡು ಕುಟುಂಬಗಳು ವಾಸವಾಗಿದ್ದವು. ಅದೊಂದು ದಿನ ಒಂದು ಮನೆಯ ಸದಸ್ಯರೊಬ್ಬರಿಗೆ ದೈವಾವೇಶಗೊಂಡು ಆ ಕ್ಷೇತ್ರದ ದೈವ ಸಾನಿಧ್ಯದ ಬಗೆಗೆ ಕುತೂಹಲದ ಮಾಹಿತಿಯನ್ನು ತಿಳಿಸಿತು. ಬಳಿಕ ಪ್ರಶ್ನಾ ಚಿಂತನೆ ನಡೆಸಿದಾದ ದರ್ಶನದಲ್ಲಿ ಹೇಳಿದಂತೆ ಮಾಸ್ತಿಯಮ್ಮ, ಹೈಗುಳಿ, ಮರಳುಚಿಕ್ಕು, ನಾಗಯಕ್ಷಿ, ಕಲ್ಕುಡ, ಕ್ಷೇತ್ರಪಾಲ, ಮಂತ್ರಗಣ, ರಾಹು ಮೊದಲಾದ ಶಕ್ತಿಗಳ ಸಾನಿಧ್ಯವಿರುವುದು ದೃಢಪಟ್ಟಿತ್ತು. ಬಳಿಕ ಸಮಾನ ಮನಸ್ಕ್‌ ಆಸ್ತಿಕರೆಲ್ಲಾ ಸೇರಿ ಸಾನಿಧ್ಯ ಪ್ರತಿಷ್ಠಾಪನಾ ಕಾರ್ಯವನ್ನು ನಡೆಸಿದರು.

ಸುಮಾರು 1813ನೇ ಇಸವಿಯಿಂದ ಈ ಕ್ಷೇತ್ರದ ಕುರಿತಾದ ಚಿಂತನೆ, ಪ್ರತಿಷ್ಠೆ, ತಾತ್ಕಾಲಿಕ ಜೀರ್ಣೊದ್ದಾರ ಪ್ರಕ್ರಿಯೆಗಳು ಸಾಗುತ್ತಾ ಬಂದಿದ್ದು, ಭಕ್ತರು ಶಕ್ತ್ಯಾನುಸಾರ ಸೇವೆ ಮಾಡುತ್ತಾ ಬಂದಿದ್ದಾರೆ. ಅಂದು ಉರಾಳ ಮನೆತನದ ಭೂಮಿಯಲ್ಲಿದ್ದ ದೇವಸ್ಥಾನ ಈಗ ಸಾರ್ವಜನಿಕ ದೈವಾಲಯವಾಗಿ ಪರಿವರ್ತನೆಗೊಂಡು ಭಕ್ತರ ಬಯಕೆಗಳನ್ನು ಅನುಗ್ರಹಿಸುವ ಕ್ಷೇತ್ರವಾಗಿ ಬೆಳೆದಿದೆ. ಈ ಮೊದಲು ಮೂರ್ನಾಲ್ಕು ಬಾರಿ ಸಣ್ಣಮಟ್ಟದಲ್ಲಿ ಜೀರ್ಣೋದ್ದಾರ ಕಾರ್ಯಗಳನ್ನು ಮಾಡಿದ್ದರೂ ಸಮಗ್ರ ಜೀರ್ಣೊದ್ದಾರ ಸಾಧ್ಯವಾಗಿರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಭಕ್ತರು ದೇವರಲ್ಲಿ ಪ್ರಾರ್ಥಿಸಿ ಸಮಗ್ರ ಜೀರ್ಣೋದ್ದಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ದೇವಸ್ಥಾನದ ಧಾರ್ಮಿಕ, ಸಿರಿಸಿಂಗಾರ ಕೋಲ ಮಹೋತ್ಸವವನ್ನು News Next Kannada ನೇರಪ್ರಸಾರ ಮಾಡಲಿದೆ.

ನೇರಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

News Next Kananda Youtube LInk : https://www.youtube.com/watch?v=GOWJGlLNgVw

( ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9535539410, 7349473213 )

ಇದನ್ನೂ ಓದಿ : Kota Amrutheshwari Temple : ಸಂತಾನ ಭಾಗ್ಯ ಕರುಣಿಸುವ ಅಮೃತೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಇದನ್ನೂ ಓದಿ : ಇಲ್ಲಿ ಮನೆ, ಅಂಗಡಿಗೆ ಬಾಗಿಲಿಲ್ಲ, ಕಳ್ಳತನದಿಂದ ಕಾಯ್ತಾನೆ ಶನಿ ಮಹಾತ್ಮ; ಪೂಜಿಸಿದ್ರೆ ಶನಿ ದೋಷ ಮಾಯ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular