ಬೆಂಗಳೂರು : ಹಾಲು ಉತ್ಪಾದಕರಿಗೆ ರಾಜ್ಯ ಸರಕಾರ ಬಾಕಿ ಇರಿಸಿಕೊಂಡಿದ್ದ 530 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸರಕಾರ ಉತ್ಪಾದಕರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಕೊರೊನಾ ಹಿನ್ನೆಲೆಯಲ್ಲಿ ಫೆಬ್ರವರಿ ತಿಂಗಳಿನಿಂದ ಜುಲೈ4ರ ವರೆಗೆ ರೈತರಿಗೆ ರಾಜ್ಯ ಸರಕಾರ ಪಾವತಿಸಬೇಕಾದ 530 ಕೋಟಿ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಆದ್ರೀಗ ಪ್ರೋತ್ಸಾಹಧನ ಸರಕಾರ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ರೈತರಿಗೆ ನೀಡಬೇಕಾಗಿದ್ದ 530 ಕೋಟಿ ರೂ. ಪ್ರೋತ್ಸಾಹಧನ ಬಿಡುಗಡೆಯಾಗಿದ್ದು, ಶೀಘ್ರವೇ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಾಗುತ್ತಿದ್ದಂತೆಯೇ ಹೈನುಗಾರಿಕೆಗೆ ಒತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದ್ದು, ಕಡಿಮೆ ಬಡ್ಡಿದರದಲ್ಲಿ 850 ಕೋಟಿ ರೂಪಾಯಿ ಸಾಲಸೌಲಭ್ಯವನ್ನು ಒದಗಿಸಿದೆ. ಕಷ್ಟದ ಪರಿಸ್ಥಿತಿಯಲ್ಲಿ ಈ ಹಣವನ್ನು ಬಳಕೆ ಮಾಡಿಕೊಳ್ಳುವಂತೆ ಹಾಲು ಒಕ್ಕೂಟಗಳಿಗೆ ಬಾಲಚಂದ್ರ ಜಾರಕಿಹೊಳಿ ಸೂಚಿಸಿದ್ದಾರೆ.