ಉಡುಪಿ ಜಿಲ್ಲೆ ಸಂಪೂರ್ಣ ಸೀಲ್ ಡೌನ್ : 14 ದಿನ ಬಸ್ ಸಂಚಾರ ನಿಷೇಧ

0

ಉಡುಪಿ : ಕೋವಿಡ್ 19 ಸೋಂಕು ಹರಡುವಿಕೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ. 14 ದಿನಗಳ ಕಾಲ ಜಿಲ್ಲೆಯ ಸಂಪೂರ್ಣ ಗಡಿ ಬಂದ್ ಆಗಲಿದ್ದು, ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಜುಲೈ 15ರ ರಾತ್ರಿ 8 ಗಂಟೆಯಿಂದಲೇ ಜಿಲ್ಲೆಯಲ್ಲಿ ಸೀಲ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದ್ದು, ಜುಲೈ 29ರ ವರೆಗೆ ಆದೇಶ ಜಾರಿಯಲ್ಲಿರಲಿದೆ. ಸೀಲ್ ಡೌನ್ ಹಿನ್ನೆಲೆಯಲ್ಲಿ ಮುಂಜಾನೆ ಉಡುಪಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಬಸ್ ಗಳಿಲ್ಲದೇ ಉಡುಪಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಜಿಲ್ಲೆಯಲ್ಲಿ 14 ದಿನಗಳ ಕಾಲ ಸೀಲ್ ಡೌನ್ ಆದೇಶ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಜಿಲ್ಲೆಗೊಳಗೆ ಬರಲು ಹಾಗೂ ಜಿಲ್ಲೆಯಿಂದ ಹೊರ ಜಿಲ್ಲೆ ರಾಜ್ಯಗಳಿಗೆ ತೆರಳಲು ಅವಕಾಶವನ್ನು ನಿಷೇಧಿಸಲಾಗಿದೆ. ತುರ್ತು ಆರೋಗ್ಯ ಸಮಸ್ಯೆಯ ಕಾರಣಕ್ಕೆ ಮಾತ್ರವೇ ಗಡಿ ಭಾಗದಿಂದ ಹೊರಗೆ ಹೋಗಲು ಅವಕಾಶವನ್ನು ಕಲ್ಪಿಸಲಾಗಿದೆ.

ಸೀಲ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳನ್ನು ದಾಟಿ ಕೆಲಸದ ನಿಮಿತ್ತ ನಿತ್ಯ ಹೋಗುವವರಿಗೆ, ತುರ್ತು ಸಂದರ್ಭಗಳಲ್ಲಿ ಹೋಗುವವರಿಗೆ, ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಜಿಲ್ಲಾಡಳಿತದಿಂದ ಪಾಸ್‌ಗಳನ್ನು ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ ಸಂತೆಗಳಿಗೆ ನಿಷೇಧ ಹೇರಲಾಗಿದ್ದು, ದಿನಸಿ ಅಂಗಡಿ, ಶಾಪ್‌ ಗಳು ಎಂದಿನಂತೆ ತೆರೆದಿರುತ್ತವೆ. ಇನ್ನು 14 ದಿನಗಳ ಕಾಲ ಜಿಲ್ಲೆಯಲ್ಲಿ ಯಾವುದೇ ಧಾರ್ಮಿಕ, ರಾಜಕೀಯ, ಸಾಮಾಜಿಕ ಸಭೆ ಸಮಾರಂಭ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆಯುವುದಕ್ಕೆ ನಿಷೇಧ ಹೇರಲಾಗಿದೆ.

ಜಿಲ್ಲೆಯಲ್ಲಿ ನಾಗರಪೂಜೆ, ಗಣೇಶ ಚೌತಿ ಸೇರಿದಂತೆ ಯಾವುದೇ ಸಾರ್ವಜನಿಕ ಹಬ್ಬಗಳನ್ನು ಆಚರಿಸುವುದಕ್ಕೆ ನಿಷೇಧ ಹೇರಲಾಗಿದ್ದು, ಮನೆಗಳಲ್ಲಿ ಹಬ್ಬವನ್ನು ಆಚರಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಇನ್ನು ಪೂರ್ವನಿರ್ಧರಿತ ಮದುವೆ ಮಾತ್ರ ತಹಶೀಲ್ದಾರರಿಂದ ಅನುಮತಿ ಪಡೆದು 50 ಜನರೊಳಗೆ ನಡೆಸಬಹುದು ಎಂದು ಜಿಲ್ಲಾಡಳಿತ ಆದೇಸಿಸಿದೆ.

Leave A Reply

Your email address will not be published.