ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಔಷಧ ಕಂಡು ಹಿಡಿದಿರೋದು ಸುದ್ದಿಯಾಗಿತ್ತು. ಮಾತ್ರವಲ್ಲ ಗಿರಿಧರ ಕಜೆ ಅವರ ಆಯುರ್ವೇದ ಔಷಧ ಕ್ಲಿನಿಕಲ್ ಟ್ರಯಲ್ ಕೂಡ ಯಶಸ್ವಿಯಾಗಿತ್ತು. ಆದರೆ ಕೊರೊನಾ ಔಷಧಕ್ಕೆ ಸಂಬಂಧಿಸಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ಡಾ.ಗಿರಿಧರ್ ಕಜೆ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಗಿರಿಧರ ಕಜೆ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರ ಮೇಲೆ ತಮ್ಮ ಆಯುರ್ವೇದ ಔಷಧದ ಪ್ರಯೋಗ ನಡೆಸಿದ್ದರು. ಕೇವಲ 9 ದಿನದಲ್ಲಿ ಎಲ್ಲರೂ ಗುಣಮುಖರಾಗಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
ಕಜೆ ನೇತೃತ್ವದಲ್ಲಿ ನಡೆದ ಈ ಯಶಸ್ಸಿನ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿತ್ತು. ಆದರೆ ಈ ವೇಳೆಯಲ್ಲಿ ಗಿರಿಧರ್ ಕಜೆ ಅವರು ನೀಡಿದ್ದ ಹೇಳಿಕೆಯ ವಿರುದ್ದ ಬಿಎಂಸಿಆರ್ ಐ ಆಕ್ಷೇಪ ವ್ಯಕ್ತಪಡಿಸಿದೆ.

ಕೋವಿಡ್ ರೋಗಕ್ಕೆ ಆಯುರ್ವೇದ ಔಷಧ ಬಳಕೆ ಕುರಿತು ಅನಗತ್ಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಆಯುರ್ವೇದ ಔಷಧ ಇನ್ನು ಕ್ಲಿನಿಕಲ್ ಟ್ರಯಲ್ನ ಪ್ರಾಥಮಿಕ ಹಂತದಲ್ಲಿದೆ. ಆದರೆ, ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ.

ಇದೊಂದು ಸೂಕ್ಷ್ಮ ಸಂದರ್ಭ. ಇಂತಹ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮುನ್ನ ಸೂಕ್ತ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿರಬೇಕೆಂಬುದು ನಿಮಗೆ ತಿಳಿದಿದೆ. ಇಂತಹ ಸಂದರ್ಭದಲ್ಲೂ ನೀವು ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ ಎಂದಿರುವ ಬಿಎಂಆರ್ಸಿಐ, ಈ ಕುರಿತು ತಕ್ಷಣ ಸ್ಪಷ್ಟೀಕರಣ ನೀಡಲು ಕೇಳಿದೆ. ಇಲ್ಲವಾದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬಿಎಂಆರ್ಸಿಐ ಕಜೆ ಅವರನ್ನು ಎಚ್ಚರಿಸಿದೆ.
