ಕರಾವಳಿಯ ಸ್ವರಮಾಂತ್ರಿಕ ಅರವಿಂದ್ ವಿವೇಕ್

0

ಅರವಿಂದ್ ವಿವೇಕ್… ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿ ಹೃದಯ ಗೆದ್ದ ಹೆಸರು. ಜಗತ್ತು ಕೊರೊನಾ ಹೆಮ್ಮಾರಿಯಿಂದಾಗಿ ಜನರು ಲಾಕ್ ಡೌನ್ ನಿಂದ ತತ್ತರಿಸಿದ್ದರೆ, ಸಂಗೀತದ ಸುಧೆಯ ಮೂಲಕ ಅದೇ ಜನರನ್ನು ರಂಜಿಸುತ್ತಿದ್ದರು ಇದೇ ಅರವಿಂದ್ ವಿವೇಕ್. ಕರಾವಳಿ ಮಾತ್ರವಲ್ಲ ವಿದೇಶಗಳಲ್ಲಿಯೂ ಇವರ ಸಂಗೀತ ಇಂದು ಸದ್ದು ಮಾಡುತ್ತಿದೆ. ಲಕ್ಷಾಂತರ ಹೃದಯಗಳನ್ನು ಕದ್ದಿರುವ ಅರವಿಂದ್ ವಿವೇಕ್ ಇಂದು ಸಂಗೀತ ಲೋಕದ ಸ್ವರ ಮಾಂತ್ರಿಕರಾಗಿ ಬೆಳೆಯುತ್ತಿದ್ದಾರೆ. ಆದರೆ ಅರವಿಂದ ವಿವೇಕ್ ಬೆಂಕಿಯಲ್ಲಿ ಅರಳಿದ ಪ್ರತಿಭೆ, ಬಡತನ ಬೇಗೆಯಲ್ಲಿ ಬಸವಳಿದು ಸಾಧನೆಯ ಶಿಖರವೇರಿದ ಅಪರೂಪದ ಗಾಯಕ.

ಹೌದು, ಅರವಿಂದ ವಿವೇಕ್ ಅಪ್ಪಟ ಕರಾವಳಿಯ ಗಾನಕೋಗಿಲೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣ ಅನ್ನೋ ಪುಟ್ಟ ಹಳ್ಳಿಯಲ್ಲಿ ಜನಿಸಿದ್ರು, ಆದರೆ ನೆಲೆಸಿದ್ದು ಬೆಳ್ತಂಗಡಿ ತಾಲೂಕಿನ ಮಡಂತ್ಯಾರುವಿನಲ್ಲಿ. ಗೋಪಾಲಕೃಷ್ಣ ಹಾಗೂ ಸುಮತಿ ದಂಪತಿಗಳ ಮಗನಾಗಿ ಜನಸಿದ ಅರವಿಂದ ವಿವೇಕ್, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ್ರು, ತಾಯಿ ಸುಮತಿ ಬೀಡಿಕಟ್ಟಿ ಮಗನನ್ನು ಓದಿಸುತ್ತಿದ್ರು. ಬೆಳ್ತಂಗಡಿಯ ಜ್ಯೂನಿಯರ್ ಕಾಲೇಜಿನ ಎಸ್ಎಸ್ಎಲ್ ಸಿ ಶಿಕ್ಷಣವನ್ನು ಪಡೆದು, ಮಾಲಾಡಿಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಐಟಿಐ ಶಿಕ್ಷಣವನ್ನು ಪೂರೈಸಿದ್ದರು. ಓದಿನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂತಾ ಕನಸು ಕಂಡಿದ್ದ ಅರವಿಂದ್ ವಿವೇಕ್ ಅವರಿಗೆ ಮನೆಯಲ್ಲಿ ಕಿತ್ತು ತಿನ್ನುತ್ತಿದ್ದ ಬಡತನದಿಂದಾಗಿ ಅದು ಸಾಧ್ಯವಾಗದೇ ಹೋಗಿತ್ತು. ತಾಯಿ ಪಡುತ್ತಿದ್ದ ಕಷ್ಟವನ್ನು ನೋಡಿಕೊಂಡು ಇರೋದಕ್ಕೆ ಸಾಧ್ಯವಾಗದೇ ತನ್ನ 19 ವಯಸ್ಸಿನಲ್ಲಿಯೇ ಸಂಸಾರದ ಜವಾಬ್ದಾರಿಯನ್ನು ಹೊತ್ತು ಕೊಂಡ್ರು.

ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಕನಸು ಕಂಡವರು. ಆದರೆ ಮನೆಯವರ ಸಹಕಾರ ಲಭ್ಯವಾಗದೇ ಇದ್ದಾಗ ಕನಸು ಕನಸಾಗಿಯೇ ಉಳಿದಿತ್ತು. ತನ್ನ 24ನೇ ವಯಸ್ಸಿನಲ್ಲಿ ಗೀತಾ ಅವರನ್ನು ವಿವಾಹವಾದ್ರು. ಪತಿ, ಪತ್ನಿಯರ ದುಡಿಮೆಯಿಂದ ಸಂಸಾರದ ನೊಗ ಸಾಗುತ್ತಿತ್ತು. ಆದರೆ ಸಂಗೀತಗಾರನಾಗಬೇಕೆಂಬ ಹಠ ಅರವಿಂದ್ ವಿವೇಕ್ ಅವರಲ್ಲಿತ್ತು. ಆ ಕಡೆಗೆ ಪಯತ್ನಗಳು ಕೂಡ ಸಾಗಿತ್ತು. ಆದ್ರೆ ಯಾರೂ ಅರವಿಂದ್ ವಿವೇಕ್ ಪ್ರತಿಭೆಗೆ ಅವಕಾಶವನ್ನು ನೀಡಲೇ ಇಲ್ಲಾ. ಸಂಗೀತ ಕಲಿಕೆಗೆ ಯಾರ ಸಹಕಾರವು ಸಿಗದೇ ಇದ್ದಾಗ, ಏಕಲವ್ಯನಂತೆ ತಾವೊಬ್ಬರೇ ಕಷ್ಟಪಟ್ಟು ಸಂಗೀತವನ್ನು ಕಲಿತುಕೊಂಡರು. ಆದರೆ 2000ನೇ ಇಸವಿಯಲ್ಲಿ ಮೊದಲ ಬಾರಿಗೆ ತುಳು ರಂಗಭೂಮಿ ಗಾಯಕನಾಗಿ ಗುರುತಿಸಿಕೊಳ್ಳಲು ಅವಕಾಶವೊಂದು ಒದಗಿಬಂದಿತ್ತು.

ಅರವಿಂದ್ ಅವರಿಗೆ ಮೊದಲ ಬಾರಿಗೆ ಸ್ನೇಹಾ ಮ್ಯೂಸಿಕಲ್ಸ್ ನ ಪ್ರಶಾಂತ್ ಭಾರಧ್ವಾಜ್ ಸಂಗೀತಗಾರನಾಗಲು ಅವಕಾಶಕೊಟ್ಟಿದ್ರು. ಸಂಗೀತದ ಹಸಿವೆಯಿಂದಲೇ ವಾರಕ್ಕೊಮ್ಮೆ 12 ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡು ಹೋಗಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ರು. 2001ರಲ್ಲಿ ವೇಣೂರು ಕಲ್ಯಾಣಿ ಪಾದೆಯ ಕೊಡಮಣಿತ್ತಾಯ ದೇವಸ್ಥಾನದಲ್ಲಿನ ಜಾತ್ರೋತ್ಸವದಲ್ಲಿ ನಾಟಕ ಆಯೋಜನೆಗೊಂಡಿತ್ತು. ಆದರೆ ಗಾಯಕರಿಗೆ ಬರೋದಕ್ಕೆ ಅನಾನುಕೂಲವಾಗಿತ್ತು.

ಹೀಗಾಗಿಯೇ ಆವತ್ತು ಪ್ರಶಾಂತ್ ಭಾರಧ್ವಾಜ್ ಅವರು ಅರವಿಂದ್ ವಿವೇಕ್ ಅವರ ಕೈಗೆ ಮೈಕ್ ಕೊಟ್ಟಿದ್ರು. ಆವತ್ತು ಅರವಿಂದ ವಿವೇಕ್ ನಾಟಕಕ್ಕೆ ಹಿನ್ನೆಲೆ ಗಾಯಕ ನೀಡುತ್ತಿದ್ರೆ ಅಲ್ಲಿ ನೆರೆದಿದ್ದವರೇ ಅರೇ ಕ್ಷಣ ದಂಗಾಗಿ ಹೋಗಿದ್ರು. ಅರವಿಂದ್ ವಿವೇಕ್ ಹಾಡುಗಾರಿಕೆಯಲ್ಲಿ ಮೂಡಿಬಂದ ನಾಟಕ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಅರವಿಂದ್ ವಿವೇಕ್ ಹಿಂತಿರುಗಿ ನೋಡಿದ್ದೇ ಇಲ್ಲಾ. ಸರಿ ಸುಮಾರು 400ಕ್ಕೂ ಅಧಿಕ ನಾಟಕ, ಸಂಗೀತ ಕಾರ್ಯಕ್ರಮಗಳಲ್ಲಿ ಹಿನ್ನೆಲೆ ಗಾಯನ ಮಾಡಿದ್ದಾರೆ. ಆದ್ರೆ ದುಡಿಸಿಕೊಂಡವರು ಮಾತ್ರ ಒಂದು ರೂಪಾಯಿಯನ್ನೂ ನೀಡಲಿಲ್ಲ ಅನ್ನುವ ನೋವು ಇಂದಿಗೂ ಕಾಡುತ್ತಲೇ ಇದೆ.

ಆದರೂ ದೃತಿಗೆಡದ ಅರವಿಂದ್ ವಿವೇಕ್ ಸುಮಾರು 2 ವರ್ಷಗಳ ಕಾಲ ಸಂಗೀತ ಕ್ಷೇತ್ರದಿಂದ ಅನಿವಾರ್ಯವಾಗಿ ದೂರ ಉಳಿದಿದ್ರು.2006ರಲ್ಲಿ ಕೀ ಬೋರ್ಡ್ ಖರೀದಿಸಿದ ಅರವಿಂದ್ ವಿವೇಕ್. ತದನಂತರ ಗಾಯನದ ಜೊತೆ ಜೊತೆಗೆ ಸಂಗೀತ ನಿರ್ದೇಶರಾಗಿ ರಂಗಭೂಮಿ ಪ್ರವೇಸಿಸಿದ್ದರು. ನಿರಂತರವಾಗಿ ಗೀತ ರಚನೆಕಾರರಾಗಿ, ಗಾಯಕರಾಗಿ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅರವಿಂದ್ ವಿವೇಕ್ ಅವರ ಹಿನ್ನೆಲೆ ಸಂಗೀತಕ್ಕೆ ಬಂದರೆ ಸಾಕು ನಾಟಕಗಳು ಸೂಪರ್ ಹಿಟ್ ಆಗುತ್ತದೆ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ದಿಯನ್ನು ಪಡೆದಿದ್ದರು. ಗಾಯನ ಮತ್ತು ಸಂಗೀತ ನಿರ್ದೇಶನವನ್ನು ಏಕಕಾಲದಲ್ಲಿ ನಿರ್ವಹಿಸುತ್ತಿದ್ದ ಅವರು ಆ ಕಾಲದಲ್ಲಿ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದವರಲ್ಲಿ ಕಲಾವಿದರಲ್ಲಿ ಓರ್ವರಾಗಿದ್ದರು. ನಂತರ ಸ್ಥಳೀಯ ನಾಟಕಗಳು ನಿಂತು ಟೀಮ್ ನಾಟಕಗಳು ಶುರುವಾಗಿ ಲ್ಯಾಪ್ ಟಾಪ್ ಸಂಗೀತ ಪ್ರಾರಂಭವಾದ ಮೇಲೆ ರಂಗಭೂಮಿಯಿಂದ ದೂರ ಸರಿದು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ನೀಡಲಾರಂಭಿಸಿದರು. ಇದುವರೆಗೂ ಸುಮಾರು 4000ಕ್ಕೂ ಮಿಕ್ಕಿದ ರಸಮಂಜರಿ ಕಾರ್ಯಕ್ರಮಗಳನ್ನು ಗಾಯಕ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹಾಡುಗಾರರಾಗಿ, ಸಂಗೀತ ನಿರ್ದೇಶಕರಾಗಿ ಮಾತ್ರವಲ್ಲ ಸಿನಿಮಾ ನಿರ್ದೇಶನ ಮಾಡಬೇಕೆಂಬ ಮಹದಾಸೆಯನ್ನು ಹೊತ್ತಿದ್ದಾರೆ. ಈಗಾಗಲೇ ವೈಲ್ ಅನ್ನೋ ತುಳು ಟೆಲಿಫಿಲ್ಮ್ ವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಕಲಾವಿದರಾದ ರಮಾ ಬಿ.ಸಿ ರೋಡ್, ಅರುಣ್ ಬಿ.ಸಿ.ರೋಡ್ ಸೇರಿದಂತೆ ಹಲವು ನಟ, ನಟಿಯರು ಮೇಕಪ್ ಹಚ್ಚಿದ್ದಾರೆ. ಉಯಿಲ್ ತುಳು ಸಿನಿಮಾದ ನಿರ್ದೇಶಕ ರಂಜಿತ್ ಸುವರ್ಣ ತಾನೊಬ್ಬ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂಬ ಕನಸಿಗೆ ಬೆಂಬಲವನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಅರವಿಂದ್ ವಿವೇಕ್. ಪತ್ನಿ ಗೀತಾ ರಾಜೇಶ್ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ರೆ, ಮಗ ರಿಷಿತ್ ರಾಜ್ 8ನೇ ತರಗತಿ ಹಾಗೂ ಮಗಳು ಅಂಜಲಿ ರಾಜೇಶ್ 7ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. 17 ವರ್ಷಗಳ ದಾಂಪತ್ಯ ಜೀವನ ಸುಖಮಯವಾಗಿ ಸಾಗುತ್ತಿದೆ. ಆದ್ರೂ ಪತ್ನಿ, ಮಗಳ ಹೆಸರನ್ನು ನೋಡಿ ನಿಮಗೆ ಆಶ್ಚರ್ಯ ಹುಟ್ಟಿಸದೇ ಇರದು. ಅಷ್ಟಕ್ಕೂ ಅರವಿಂದ್ ವಿವೇಕ್ ಅವರ ಮೂಲ ಹೆಸರು ರಾಜೇಶ್.

ಸಿನಿಮಾ, ಸಂಗೀತ, ನಿರ್ದೇಶನ ಕ್ಷೇತ್ರದಲ್ಲಿ ಅದೆಷ್ಟೋ ರಾಜೇಶ್ ಅನ್ನೋ ಹೆಸರಿದೆ. ಹೀಗಾಗಿಯೇ ತನ್ನ ಹೆಸರನ್ನು ಅರವಿಂದ್ ವಿವೇಕ್ ಅಂತಾ ಬದಲಾಯಿಸಿಕೊಂಡಿದ್ದಾರೆ. ರಾಜೇಶ್ ಅರವಿಂದ ವಿವೇಕ್ ಆಗಿ ಬದಲಾಗುತ್ತಲೇ ಲಕ್ ಕೂಡ ಕೈ ಹಿಡಿಯುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿರುವ ಅರವಿಂದ ವಿವೇಕ್ ಉಪ್ಪಿ ಅವರ ಜೀವನ, ಸಿನಿಮಾಗಳಿಂದ ಪ್ರೇರಣೆಗೊಂಡವರು. ಅವರನ್ನು ಒಮ್ಮೆ ಭೇಟಿ ಮಾಡಿ, ಮಾತನಾಡಬೇಕೆಂಬ ಆಸೆ ಹೊತ್ತಿದ್ದಾರೆ. ಸಿನಿಮಾ ನಿರ್ದೇಶಕರಾಗಿ ದುಡಿಯಬೇಕೆಂಬ ಕನಸನ್ನು ನನಸಾಗಿಸುವತ್ತ ಸಾಗಿದ್ದಾರೆ.

ಕಲೆ ಅರಳುವುದು ಗುಡಿಸಲಿನಲ್ಲಿ ಅನ್ನೋ ಮಾತಿನಂತೆಯೇ ಅರವಿಂದ ವಿವೇಕ್ ಇಂದು ತಾನು ಪಟ್ಟಿದ್ದ ಕಷ್ಟ ಇತರರು ಪಡಬಾರದು ಅನ್ನೋ ಕಾರಣಕ್ಕೆ ಅದೆಷ್ಟೊ ಬಡ ಮಕ್ಕಳಿಗೆ ಸಂಗೀತವನ್ನು ಧಾರೆಯೆರೆಯುತ್ತಿದ್ದಾರೆ. ಮಾತ್ರವಲ್ಲ ಕಾಸರಗೋಡಿನಿಂದ ಹಿಡಿದು ಕಾರವಾರದ ವರೆಗಿನ ಯವಗಾಯಕರಿಗೆ ವೇದಿಕೆ ಕಲ್ಪಿಸೋ ವಿಭಿನ್ನ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕರಾವಳಿ ಗಾನಕೋಗಿಲೆ ಅನ್ನೋ ರಿಯಾಲಿಟಿ ಶೋ ಡಿಸೆಂಬರ್ ನಲ್ಲಿಯೇ ಆರಂಭಗೊಂಡಿದ್ದು ಆಡಿಷನ್ ಕಾರ್ಯ ಮುಕ್ತಾಯಗೊಂಡಿದೆ. ಕೊರೊನಾ ಮುಗಿಯುತ್ತಿದ್ದಂತೆಯೇ ರಿಯಾಲಿಟಿ ಶೋ ನಡೆಸುವ ಪ್ರಯತ್ನದಲ್ಲಿದ್ದಾರೆ. ಆದರೆ ಯಾವುದೇ ಪ್ರಾಯೋಜಕರಿಲ್ಲದೇ ತನ್ನ ಸ್ಬತಃ ದುಡಿಮೆಯಿಂದ ಗಳಿಸಿದ ಹಣವನ್ನು ವಿನಿಯೋಗಿಸುತ್ತಿದ್ದಾರೆ.

ಯಾವುದೇ ಪ್ರಶಸ್ತಿಯ ಹಿಂದೆ ಹೋದವರೂ ಅಲ್ಲಾ. ಲಾಕ್ ಡೌನ್ ವೇಳೆಯಲ್ಲಿ ಯಾವುದೇ ದುಡಿಮೆಯಿಲ್ಲದೇ ಇದ್ದರೂ ಕೂಡ ಅರವಿಂದ್ ವಿವೇಕ್ ಫೇಸ್ ಬುಕ್ ನಲ್ಲಿ ಕಾರ್ಯಕ್ರಮವನ್ನು ನೀಡುವ ಮೂಲಕ ಕಷ್ಟದಲ್ಲಿಯೂ ಅಭಿಮಾನಿಗಳ ಮನತಣಿಸುತ್ತಿದ್ದಾರೆ. ಈಗಾಗಲೇ 40ಕ್ಕೂ ಅಧಿಕ ಫೇಸ್ ಬುಕ್ ಲೈವ್ ಕಾರ್ಯಕ್ರಮವನ್ನು ನೀಡಿದ್ದು, ಈಗಾಗಲೇ ಲಕ್ಷಾಂತರ ಮಂದಿ ಇವರ ಕಾರ್ಯಕ್ರಮಕ್ಕೆ ಮನಸೋತಿದ್ದಾರೆ. ನಿಮಗೂ ಅರವಿಂದ್ ವಿವೇಕ್ ಅವರ ಗಾಯನ ಕೇಳೋ ಬಯಕೆಯಿದ್ರೆ, ನಾಳೆ ( ಅಗಸ್ಟ್ 2) newsnext facebook page ನಲ್ಲಿ ಲೈವ್ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ನಿಮ್ಮಿಷ್ಟದ ಹಾಡುಗಳಿಗೆ ಧ್ವನಿಯಾಗುವ ಅರವಿಂದ್ ವಿವೇಕ್ ಅವರ ಕಂಠಸಿರಿಗೆ ಮರುಳಾಗದೇ ಇರೋದಕ್ಕೆ ಸಾಧ್ಯವೇ ಇಲ್ಲಾ. ಲೈವ್ ವೀಕ್ಷಿಸಲು ಕ್ಲಿಕ್ ಮಾಡಿ : https://www.facebook.com/NewsNext.Kannada/?ti=as

ಖ್ಯಾತ ಸಂಗೀತಗಾರರಾಗಿರುವ ಕರಾವಳಿಯ ಈ ಪ್ರತಿಭೆಗೆ ನಿಮ್ಮ ಸಹಕಾರದ ಅಗತ್ಯವಿದೆ. ತುಳುನಾಡ ಈ ಸ್ವರ ಮಾಂತ್ರಿಕನ ಜೊತೆಗೆ ಮಾತನಾಡೋ ಬಯಕೆಯಿದ್ರೆ ನೇರವಾಗಿ ಅರವಿಂದ ವಿವೇಕ್ (9686373366) ಅವರನ್ನು ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.