ಶಿರಸಿಗೆ ಬಂದಿದ್ದೀರಾ? ಹಾಗಾದ್ರೆ ಈ ಜಲಪಾತಗಳನ್ನ ನೋಡಲೇಬೇಕು!
ಅಪ್ಪ-ಅಮ್ಮ, ಹೆಂಡ್ತಿ-ಮಕ್ಳ ಜೊತೆ ಟೂರ್ ಗಂತ ಬಂದಿರ್ತೀರ ಅನ್ಕೋಳಿ, ಅದ್ರಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಬಂದ್ರೆ ಸಾಕು ಎಲ್ಲರ ಮನಸಲ್ಲೂ ಒಂದೇ ಹವಣಿಕೆ. ಅಲ್ಲೆಲ್ಲೋ ಅದೊಂದು ಜಲಪಾತ ಇದೆಯಂತೆ ನೋಡೋಕೆ ಎಷ್ಟು ಚಂದ ರೀಲ್ಸ್ ನಲ್ಲಿ ನೋಡಿದ್ದೆ ನಾವು ಹೋಗೋಣ್ವ ಅಂತ!
ಆದ್ರೆ ಏನ್ ಮಾಡ್ತೀರ? ಒಬ್ರಿಗೆ ಎತ್ತರ ಅಂದ್ರೆ ಭಯ, ಇನ್ನೂ ಇನ್ನೊಬ್ರಿಗೆ ನೀರಿನಾಳ ಆಗೋಲ್ಲ, ಮತ್ತೊಬ್ಬರಿಗೆ ಮಂಡಿ ನೋವು ನಡುವೆ ಮಕ್ಳಿಗೂ ನಮ್ ಜೊತೆ ನಡೆಯೋಕಾಗುತ್ತಾ? ಅನ್ನೋ ಸಂದೇಹ ಬೇರೆ. ಹೀಗೆ ಇಂತಹ ಪ್ರಶ್ನೆಗಳ ನಡುವೆ ಶಿರಸಿ-ಸಿದ್ದಾಪುರದಂತಹ ಒಳ್ಳೊಳ್ಳೆ ಜಲಪಾತಗಳ ಮಡಿಲಿಗೆ ಬಂದರೂ ಹ್ಯಾಪು ಮೋರೆ ಹಾಕಿಕೊಂಡೇ ಹೋಗಬೇಕಾಗುತ್ತದೆ.
ಆದ್ರೆ ಇನ್ಮೇಲೆ ಹೀಗಾಗೋಲ್ಲ, ಯಾಕಂದ್ರೆ ನಾವು ಹೇಳ್ತಿರೋ ಮೂರು ಜಲಪಾತಕ್ಕೆ ಯಾವ ಟ್ರಕ್ಕಿಂಗ್ ಬೇಕಾಗಿಲ್ಲ, ಜಾಸ್ತಿ ನಡೆಯೋ ಹಾಗೂ ಇಲ್ಲ, ನೀರಿನಾಳದ ಭಯವೂ ಇಲ್ಲ! ಆದರೂ ಅದ್ಭುತ ಜಲಪಾತಗಳು ಒಂದೇ ರಸ್ತೆಯಲ್ಲಿ ನಿಮಗೆ ಕಾಣಸಿಗುತ್ತವೆ ಅದೆಲ್ಲಿ ಅಂತೀರಾ ಇಲ್ಲಿದೆ ಮಾಹಿತಿ.
ಕಾಳೇನಹಳ್ಳಿಯ ನಿರಾಳ ಸುಂದರಿ ಶೀರ್ಲಗದ್ದೆ
ಶಿರಸಿಯಿಂದ ಸಿದ್ದಾಪುರಕ್ಕೆ ಹೊರಟಾಗ ಮೊದಲು ಸಿಗುವ ಜಲಪಾತ ಶೀರ್ಲಗದ್ದೆ ಜಲಪಾತ. ಇದು ಶಿರಸಿ ಹಾಗೂ ಸಿದ್ದಾಪುರ ಮುಖ್ಯ ರಸ್ತೆಯಿಂದ ಕಾಳೇನಹಳ್ಳಿ ಎಂಬ ಊರಿಂದ 2 ಕಿಲೋಮೀಟರ್ ಇದೆ. ನೀವು ಕಾರ್ ತೆಗೆದುಕೊಂಡು ಸೀದಾ ಜಲಪಾತದ ಅಡಿಗೇ ಹೋಗಬಹುದು! ಸುಮಾರು 100-150 ಮೀಟರ್ ಉದ್ದದ ಬಂಡೆ ಮೇಲೆ ವರದೆ ಗಾಂಭೀರ್ಯದಿಂದ ಬಳಕುವ ಆಹ್ಲಾದಕರ ಕ್ಷಣಗಳು ನಿಜವಾಗಿಯೂ ಮುದ ತಂದುಕೊಡುತ್ತವೆ. ಇಲ್ಲಿ “ಚಂಡ” ಚಿತ್ರದ ಚಿತ್ರೀಕರಣವೂ ಆಗಿದೆ.
ಮಾನವ ಪ್ರಕೃತಿಗೆ ಕೊಟ್ಟ ಏಕೈಕ ಒಳ್ಳೆಯ ಕೊಡುಗೆ ತುಂಬ್ರಕೋಡು!
ಆ ಟ್ರಿಪ್ ಮುಗಿಸಿಕೊಂಡು ಸೀದಾ ಮತ್ತೆ ಸಿದ್ದಾಪುರದ ಹಾದಿ ಹಿಡಿಯಿರಿ ಇನ್ನೇನು ಹದಿನಾರನೇ ಮೈಲಿಗಲ್ಲು ಎಂಬ ಊರು ಸಿಕ್ಕ ತಕ್ಷಣ ಕೇವಲ 1,1.5 ಕಿಲೋಮೀಟರ್ ದೂರ ಡ್ರೈವ್ ಮಾಡಿದರೆ ಸದಾ ಹರಿಯುವ ನೀರ್ಝರಿಯೊಂದು ನಿಮ್ಮನ್ನು ಸ್ವಾಗತಿಸುತ್ತದೆ. ಅದರ ಜಾಡು ಹಿಡಿದು ಒಂದು 500 ಮೀಟರ್ ಕಾಡು ಹಾಡಿ ಹಿಡಿದು ಹೋದರೆ (ಸಮತಟ್ಟಾದ ಜಾಗವಾದ್ದರಿಂದ ಟ್ರೆಕ್ಕಿಂಗ್ ಅಗತ್ಯವಿಲ್ಲ) ಒಂದು ಮಾನವ ನಿರ್ಮಿತ ಅದ್ಭುತ ಜಲಪಾತವೊಂದರ ದರ್ಶನವಾಗ್ತದೆ. ಇದು ತುಂಬ್ರಕೋಡು ಜಲಪಾತ, ಒಂದು 30-40 ಅಡಿಯಿಂದ ಹರಿಯುವ ಜಲಲಧಾರೆ ನಿಮ್ಮ ಮನಸ್ಸನ್ನು ಮುದಗೊಳಿಸುತ್ತದೆ.
ಜೋಗದ ಗುಂಡಿಯ ಹಾದಿಯಲ್ಲಿದ್ದಾಳೆ ಪುಟ್ಟ ಅಪ್ಸರೆ
ಅಲ್ಲಿಂದ ಮುಂದೆ ಸಿದ್ದಾಪುರ ತಲುಪಿ ಜೋಗ ನೋಡ್ಬೇಕಲ್ವಾ? ಹಾಗಿದ್ರೆ ಮಾವಿನಗುಂಡಿಯ ಹಾದಿ ಹಿಡೀರಿ, ಮಾವಿನಗುಂಡಿಗೆ ಹೋಗುತ್ತಿರುವಾಗಲೇ ಒಂದು ನಯನ ಮನೋಹರವಾದ ಬಳಲಘಟ್ಟವನ್ನು ಬಳಸಿಕೊಂಡು ಸಾಗುತ್ತಿರುವಾಗಲೇ ನಿಮ್ಮನ್ನು ಸ್ವಾಗತಿಸುವುದು ಅದ್ಭುತವಾದ ಜೋಗದ ಕಿರುತಂಗಿ “ಮಾವಿನಗುಂಡಿ ಜಲಪಾತ” ಕೆಲವೇ ಕೆಲವು ಅಡಿಗಳ ಅಂತರದಿಂದ ಹರಿಯುವ ಈ ಜಲಪಾತದಲ್ಲಿ ನೀವು-ನಿಮ್ಮ ಮಕ್ಕಳು ಸಹಿತವಾಗಿ ಇಡೀ ಪರಿವಾರವೂ ಆಟ ಆಡಬಹುದು! ಅಂತಹ ಅದ್ಭುತ ಶ್ರಮವಿರದ, ಇಳಿಜಾರಿರದ,ಪರಿವಾರವೆಲ್ಲಾ ಸೇರಿ ಆನಂದಿಸಬಹುದಾದ ಪರಮ ಸುಂದರ ದೈವೀಕ ಸೃಷ್ಟಿ ಇದು.
ಇವ್ಯಾವುದೂ ಟ್ರೆಕ್ಕಿಂಗ್, ಇಳಿಜಾರು ಎರಡೂ ಇಲ್ಲದ ಒಂದೇ ಹಾದಿಯಲ್ಲಿರುವ ಅತೀ ಕಡಿಮೆ ಶ್ರಮ ಬಯಸುವ ಮೂರು ಜಲಪಾತಗಳಾಗಿದ್ದು ನಿಮ್ಮ ಕುಟುಂಬದ ಜೊತೆ ಆರಾಮಾಗಿ ಟ್ರಿಪ್ ಆನಂದಿಸಬಹುದು.
ಶೀರ್ಲಗದ್ದೆ ಜಲಪಾತ: https://maps.app.goo.gl/ZDjJi7hZLTFMe51L7
ತುಂಬ್ರಕೋಡು ಜಲಪಾತ: https://maps.app.goo.gl/viTphjNRtDdPGYDGA?g_st=ac
ಮಾವಿನ ಗುಂಡಿ ಜಲಪಾತ:
https://share.google/yR6OVcwZr6nTFqgRS



