ಬರ್ತಿದೆ ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾ: ತಾಯಿ ಪಾತ್ರದಲ್ಲಿ ಮಿಂಚಲಿದ್ದಾರೆ ರವೀನಾ ಟಂಡನ್
Raveena Tandon in Maa Vande Movie: ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯನ್ನು ಯಾವ ಸ್ಥಾನದಲ್ಲಿಟ್ಟಿದ್ದರು ಎಂಬುದನ್ನು ಇಡೀ ಜಗತ್ತು ನೋಡಿದೆ. ತಾಯಿಯ ದೇಹಾಂತ್ಯದ ಬಳಿಕ ಅವರ ಅಂತಿಮ ಸಂಸ್ಕಾರ ನೆರವೇರಿಸಿದ ಪ್ರಧಾನಿ ಮೋದಿ ನೇರವಾಗಿ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಸೇವಾನಿಷ್ಠೆ ಪ್ರದರ್ಶಿಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಪ್ರಧಾನಿ ಮೋದಿ ಅವರ 75ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಅವರ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ.
ಪ್ರಧಾನಿ ಮೋದಿ ಅವರ ಜೀವನಾಧಾರಿತ ಸಿನಿಮಾಗೆ ‘‘ಮಾ ವಂದೇ’’ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಪ್ರಧಾನಿ ಮೋದಿ ಪಾತ್ರವನ್ನು ನಿರ್ವಹಿಸಲು ಮಲಯಾಳಂ ನಟ ಉನ್ನಿ ಮುಕುಂದನ್ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರ ತಾಯಿ ಪಾತ್ರವನ್ನು ಯಾರು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಇದೀಗ ಈ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.
ಒಂದು ಕಾಲದಲ್ಲಿ ಬಾಲಿವುಡ್ನ ಬೇಡಿಕೆಯ ನಾಯಕ ನಟಿ ಎನಿಸಿದ್ದ ರವೀನಾ ಟಂಡನ್ ಇಂದಿಗೂ ಪೋಷಕ ಪಾತ್ರದಲ್ಲಿ ಮಿಂಚುತ್ತಲೇ ಇದ್ದಾರೆ. ಕೆಜಿಎಫ್ ಸಿನಿಮಾದ ಮೂಲಕ ನಟಿ ರವೀನಾ ಟಂಡನ್ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿರುವುದನ್ನು ನಾವಿಲ್ಲ ಸ್ಮರಿಸಬಹುದು. ತಮ್ಮ ಮನೋಜ್ಞ ಅಭಿನಯದ ಮೂಲಕ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ರವೀನಾ ಟಂಡನ್ ಪ್ರಧಾನಿ ಮೋದಿ ಅವರ ತಾಯಿ ಪಾತ್ರ ಮಾಡಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಕೆಲವು ದಿನಗಳ ಹಿಂದಷ್ಟೇ ನಟ ಉನ್ನಿ ಮುಕುಂದನ್ ಪಾರ್ಲಿಮೆಂಟ್ ಎದುರು ನಿಂತಿರುವ ಫೋಟೋ ವೈರಲ್ ಆಗಿತ್ತು. ಪ್ರಧಾನಿ ಮೋದಿ ಅವರ ರೀತಿಯಲ್ಲೇ ಕಾಣಿಸುತ್ತಿದ್ದರು. ಇನ್ನೂ ಚಿತ್ರತಂಡ ರವೀನಾ ಟಂಡನ್ ಅವರ ಲುಕ್ ರಿವೀಲ್ ಮಾಡಿಲ್ಲ. ಶೀಘ್ರದಲ್ಲಿಯೇ ರವೀನಾ ಟಂಡನ್ ಫಸ್ಟ್ ಲುಕ್ ಕೂಡ ರಿವೀಲ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಗತವೈಭವ ಟ್ರೇಲರ್ ಬಿಡುಗಡೆ ಮಾಡಿ ಅಭಿನಯ ಚಕ್ರವರ್ತಿ ಏನಂದ್ರು ನೋಡಿ
ಈ ಸಿನಿಮಾಗೆ ಕ್ರಾಂತಿ ಕುಮಾರ್ ಸಿಎಚ್ ಎಂಬವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿಲ್ವರ್ ಕಾಸ್ಟ್ ಕ್ರಿಯೇಷನ್ ಬ್ಯಾನರ್ನ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು ವೀರ್ ರೆಡ್ಡಿ ಎಂಬವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.



